Tuesday, April 30, 2024
spot_imgspot_img
spot_imgspot_img

ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ರ‍್ಯಾಂಬೋ ಇನ್ನಿಲ್ಲ

- Advertisement -G L Acharya panikkar
- Advertisement -

ಕೊಡಗು: ಕೊಡಗು ಜಿಲ್ಲಾ ಶ್ವಾನದಳದಲ್ಲಿ ಕಳೆದ 6 ವರ್ಷಗಳಿಂದ ಸ್ಫೋಟಕ ಪತ್ತೆ ಕಾರ್ಯ ನಿರ್ವಹಿಸುತ್ತಿದ್ದ ರ‍್ಯಾಂಬೋ ಹೆಸರಿನ ಶ್ವಾನವು, ದಕ್ಷಿಣ ಕನ್ನಡ ಜಿಲ್ಲೆಯ ಸುಡುಬಿಸಿಲಿಗೆ ಒಗ್ಗಿಕೊಳ್ಳದೆ ಅನಾರೋಗ್ಯಕೀಡಾಗಿ ಬುಧವಾರ ಮಧ್ಯರಾತ್ರಿ ಮೃತಪಟ್ಟಿದೆ.

ಕೊಡಗು ಜಿಲ್ಲಾ ಸಶಸ್ತ್ರದಳದ ಆವರಣದಲ್ಲಿ ಶ್ವಾನದ ಪಾರ್ಥಿವ ಶರೀರಕ್ಕೆ ಗುರುವಾರ ಇಲಾಖೆ ಅಧಿಕಾರಿಗಳು ಪುಷ್ಪಗುಚ್ಛವನ್ನಿರಿಸಿ, ಇಲಾಖಾ ಗೌರವದೊಂದಿಗೆ ಅಂತಿಮ ನಮನ ಸಲ್ಲಿಸಿದರು.

ಮಂಗಳೂರು ಬಳಿಯ ಸುರತ್ಕಲ್‌ಗೆ ಕರ್ತವ್ಯ ನಿಮಿತ್ತ ತೆರಳಿದ್ದ ರ‍್ಯಾಂಬೋ ಅಲ್ಲಿಯ ಬಿಸಿ ತಾಳಲಾರದೆ ಜ್ವರದೊಂದಿಗೆ ಹೃದಯಾಘಾತಕ್ಕೊಳಗಾಗಿ ಬುಧವಾರ ನಡುರಾತ್ರಿ ಮೃತಪಟ್ಟಿದೆ. ಮಡಿಕೇರಿಯ ತಂಪಿನ ವಾತಾವರಣದಲ್ಲಿದ್ದ ರ‍್ಯಾಂಬೋ ದಕ್ಷಿಣ ಕನ್ನಡದ ಹವೆಗೆ ದಿಢೀರನೆ ಹೊಂದಿಕೊಳ್ಳಲಿಲ್ಲ. ಸುರತ್ಕಲ್‌ನಲ್ಲಿ ಬುಧವಾರ ಸಂಜೆ ಕರ್ತವ್ಯ ಮುಗಿಸಿದಾಗ 108 ಡಿಗ್ರಿ ಜ್ವರ ಕಾಡುತ್ತಿತ್ತು. ತೀವ್ರ ನಿತ್ರಾಣಗೊಂಡಿದ್ದ ರ‍್ಯಾಂಬೋಗೆ ವೈದ್ಯರು ನಡುರಾತ್ರಿಯವರೆಗೂ ಚಿಕಿತ್ಸೆ ನೀಡಿದರೂ ಪ್ರಯೋಜನವಾಗಲಿಲ್ಲ.

ಈ ಶ್ವಾನವು ಕಳೆದ 6 ವರ್ಷಗಳಲ್ಲಿ ಜಿಲ್ಲೆ ಹಾಗು ಹೊರಜಿಲ್ಲೆಗಳಲ್ಲಿ ನಡೆದ ವಿವಿಧ ಬಂದೋಬಸ್ತ್‌ ಕರ್ತವ್ಯಗಳ ಸಂದರ್ಭದಲ್ಲಿ 400 ಹೆಚ್ಚು ಸ್ಫೋಟಕ ತಪಾಸಣೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸಿ ಮೆಚ್ಚುಗೆಗೆ ಪಾತ್ರವಾಗಿತ್ತು.

ಸ್ಫೋಟಕ ಪತ್ತೆ ಕಾರ್ಯಕ್ಕೆ ಮುಖ್ಯವಾಗಿ ರ‍್ಯಾಂಬೋವನ್ನು ಕರೆದುಕೊಂಡು ಹೋಗಲಾಗುತ್ತಿತ್ತು. ಪ್ರಧಾನಿ ಮೋದಿ ಕಾರ್ಯಕ್ರಮಗಳು ಇದ್ದಾಗ ಮೊದಲು ಸ್ಥಳ ತಪಾಸಣೆ ಮಾಡುತ್ತಿದ್ದ ಡಾಗ್‌ ಸ್ಕ್ವಾಡ್‌ನಲ್ಲಿ ಕೊಡಗಿನ ರ‍್ಯಾಂಬೋ ಕೂಡ ಇರುತ್ತಿತ್ತು. ಗಣ್ಯಾತಿಗಣ್ಯರ ಕಾರ್ಯಕ್ರಮಗಳು, ಸ್ಫೋಟಕ ಪತ್ತೆಯಂಥ ಕಾರ್ಯಗಳಿಗೆ ರ‍್ಯಾಂಬೋ ರಾಜ್ಯದ ಬಹುತೇಕ ಕಡೆ ಕರ್ತವ್ಯ ನಿರ್ವಹಿಸಿದೆ.

ಬೆಂಗಳೂರಿನ ಪ್ರತಿಷ್ಠಿತ ಅಂತಾರಾಷ್ಟ್ರೀಯ ಏರ್‌ ಶೋನಲ್ಲಿ ಅತ್ಯುತ್ತಮ ಕರ್ತವ್ಯ ನಿರ್ವಹಣೆಗಾಗಿ ರ‍್ಯಾಂಬೋ ಗೆ ಪ್ರಶಂಸನಾ ಪತ್ರ ಕೂಡ ಸಿಕ್ಕಿದ್ದು ಕೊಡಗು ಪೊಲೀಸ್‌ ಇಲಾಖೆಗೆ ಹೆಮ್ಮೆ ತಂದಿತ್ತು.

ಪ್ರಸ್ತುತ ಕೊಡಗು ಶ್ವಾನದಲ್ಲಿ ಪೃಥ್ವಿ, ಶೌರ್ಯ, ಲಿಯೋ ಎಂಬ ಮೂರು ಶ್ವಾನಗಳು ಕೂಡ ರ‍್ಯಾಂಬೋ ಅಂತ್ಯಕ್ರಿಯೆಯಲ್ಲಿ ಕಂಬನಿ ಮಿಡಿಯುತ್ತಿದ್ದವು. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳು, ರ‍್ಯಾಂಬೋಗೆ ಅಂತಿಮ ನಮನ ಸಲ್ಲಿಸಿದರು.

- Advertisement -

Related news

error: Content is protected !!