


ಮಂಗಳೂರು: ಸುರತ್ಕಲ್‌ನ ಕೈಗಾರಿಕಾ ವಲಯ(ಎಂಎಸ್‌ಇಝಡ್)ದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಅಥೆಂಟಿಕ್ ಓಷನ್ ಟ್ರಶರ್ ಮೀನು ಸಂಸ್ಕರಣಾ ಘಟಕದಲ್ಲಿ ಇಂದು ಮಧ್ಯಾಹ್ನ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿದ್ದೂ,10 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ.
ಕಂಪೆನಿಯಲ್ಲಿ ದುರಸ್ತಿ ಕಾರ್ಯ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ನೌಕರರು ಯಾರೂ ಇಲ್ಲದ ಕಾರಣ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಅಥೆಂಟಿಕ್ ಓಷನ್ ಟ್ರೆಶರ್ ಕಂಪೆನಿ ಮೀನನ್ನು ಸ್ವಚ್ಚಗೊಳಿಸಿ ಮಾಂಸದ ರೂಪಕ್ಕೆ ಪರಿವರ್ತಿಸಿ ವಿದೇಶಗಳಿಗೆ ರಫ್ತು, ಮಾಡುವ ಕಂಪೆನಿಯಾಗಿದ್ದು, ಈ ಸಂಸ್ಥೆಯ ಕೋಲ್ಡ್ ಸ್ಟೋರ್ ಸೆಕ್ಷನ್ ಹಾಗೂ ಕಟ್ಟಿಂಗ್ ಸೆಕ್ಷನ್‌ಗಳಲ್ಲಿ ದುರಸ್ತಿ ಕಾರ್ಯನಡೆಯುತ್ತಿತ್ತು. ಈ ವೇಳೆ ಕೋಲ್ಡ್ ಸ್ಟೋರೆಜ್ ಸೆಕ್ಷನ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಬೆಂಕಿಯ ಕೆನ್ನಾಲಿಗೆಗೆ ಆಕಾಶದೆತ್ತರಕ್ಕೆ ಹೊಗೆ ಉಗುಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಆದರೆ ಅಗ್ನಿ ಅವಘಡದಿಂದ ಸುಮಾರು 10 ಕೋಟಿ ರೂ. ಮೌಲ್ಯದ ಮೀನಿನ ಉತ್ಪನ್ನಗಳು ಬೆಂಕಿಗಾಹುತಿಯಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಕೈಗಾರಿಕಾವಲಯ ಎಂಆರ್ ಪಿಎಲ್, ಗೇಲ್ ಇಂಡಿಯಾ ಕಂಪೆನಿಗಳ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ.