


ಚೆನ್ನೈ: ಕಾಕ್ರೋಚ್ ಜನತಾ ಪಕ್ಷ ನಡೆಸಿದ ಪ್ರತಿಭಟನೆಗಳ ವೇಳೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವನ್ನು ಟೀಕಿಸಿದ್ದ ತಮಿಳುನಾಡು ಬಿಜೆಪಿ ಮಾಜಿ ಮುಖ್ಯಸ್ಥ ಅಣ್ಣಾಮಲೈ, ಅಭಿಜೀತ್ ದೀಪ್ಕೆ ಸಂಘಟನೆಗೆ ಬೆಂಬಲಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ, ಈ ವದಂತಿಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಕೆ. ಅಣ್ಣಾಮಲೈ, ನಾನು ಅಭಿಜೀತ್ ದೀಪ್ಕೆ ನೇತೃತ್ವದ ಸಂಘಟನೆಗೆ ಬೆಂಬಲಿಸಲ್ಲ. ನನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು ಎಂದು ಹೇಳಿದ್ದಾರೆ.
ನಾನು ಎಂದಿಗೂ ಕಾಕ್ರೋಚ್ ಜನತಾ ಪಕ್ಷವನ್ನು ಬೆಂಬಲಿಸುವುದಿಲ್ಲ. ಅವರ ಕಾರ್ಯಸೂಚಿಯೇ ಬೇರೆ, ನಮ್ಮದೇ ಬೇರೆ. ಆದರೆ, ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ಪ್ರಜಾಪ್ರಭುತ್ವದಲ್ಲಿ ಹೋರಾಡುವ ಹಕ್ಕಿದೆ ಎಂದರು.
ಅಣ್ಣಾಮಲೈ, ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದ ಸಿಜೆಪಿ ಪ್ರತಿಭಟನಾಕಾರರ ವಿರುದ್ಧ ಪೊಲೀಸ್ ಕ್ರಮವನ್ನು ಟೀಕಿಸಿದ ನಂತರ ಬಿಜೆಪಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.
ಬಿಜೆಪಿ ಟೀಕೆಗಳಿಗೆ ಟಾಂಗ್ ಕೊಟ್ಟ ಅಣ್ಣಾಮಲೈ, ದೇಶಭಕ್ತಿಯ ಬಗ್ಗೆ ಯಾರಿಂದಲೂ ಉಪನ್ಯಾಸಗಳು ಬೇಕಾಗಿಲ್ಲ. ನನಗೆ ದೇಶದ ಹಲವು ರಾಜ್ಯಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಭಾರತದ ಏಕತೆ ಮತ್ತು ಸಾರ್ವಭೌಮತ್ವ ನನಗೆ ತಿಳಿದಿದೆ. ಆದ್ದರಿಂದ, ಯಾರೂ ನನಗೆ ದೇಶಭಕ್ತಿಯ ಬಗ್ಗೆ ಉಪನ್ಯಾಸ ನೀಡುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಸಿಜೆಪಿ ಪ್ರತಿಭಟನಾಕಾರರು ತಪ್ಪು ಮಾಡಿದ್ದರೆ, ಸೇಡಿನ ವಿಧಾನವನ್ನು ಅಳವಡಿಸಿಕೊಳ್ಳುವ ಬದಲು, ಅಧಿಕಾರಿಗಳು ಕಾನೂನಿನ ಪ್ರಕಾರ ಮುಂದುವರಿಯಬೇಕು. ದೇಶದ ಸಾರ್ವಭೌಮತೆಗೆ ಅಪಾಯವಿದ್ದರೆ, ನಿಮ್ಮ ಬಳಿ ಎಲ್ಲಾ ಸಂಸ್ಥೆಗಳಿವೆ. ಅವುಗಳನ್ನು ಬಳಸಿ, ತಪ್ಪು ಮಾಡಿದವರಿಗೆ ಶಿಕ್ಷೆ ವಿಧಿಸಿ. ಅದನ್ನು ಬಿಟ್ಟು ಎಕ್ಸ್ನಲ್ಲಿ ನಕಲಿ ಸುದ್ದಿ ಹರಿಬಿಡುವುದಲ್ಲ ಎಂದು ಟೀಕಿಸಿದರು.
ಮೋದಿ ಅವರು ಒಳ್ಳೆಯ ಪ್ರಧಾನಿ, ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಆದರೆ, ನಾನು ತಪ್ಪನ್ನು ಯಾರೇ ಮಾಡಿದ್ದರೂ ಅದನ್ನು ಪ್ರಶ್ನಿಸಲು ಹಿಂಜರಿಯುವುದಿಲ್ಲ ಎಂದು ಅಣ್ಣಾಮಲೈ ಹೇಳಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.








