


ಮಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದನ್ನು ಖಂಡಿಸಿ ರಾಜ್ಯಾದ್ಯಂತ ಇಂದು ಕಾಂಗ್ರೆಸ್ ಪ್ರತಿಭಟನೆಗೆ ಕರೆ ಕೊಟಿದ್ದು ಮಂಗಳೂರಿನಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯ ವೇಳೆ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಬಸ್ ಗಾಜುಗಳು ಸಂಪೂರ್ಣ ಪುಡಿಯಾಗಿದೆ. ನಡು ರಸ್ತೆಯಲ್ಲಿ ಟಯರ್‌ಗಳಿಗೆ ಬೆಂಕಿ ಹಚ್ಚಿದ್ದು ಕಾಂಗ್ರೆಸ್ ಪ್ರತಿಭಟನೆ ಹಿಂಸಾತ್ಮಕಕ್ಕೆ ತಿರುಗಿದೆ.
ಪ್ರತಿಭಟನಾ ಸಭೆಯ ವೇಳೆ ಖಾಸಗಿ ಬಸ್ ಮೇಲೆ ಕಲ್ಲು ತೂರಾಟ ನಡೆಸಿದವರ ವಿರುದ್ದ ಪ್ರಕರಣ ದಾಖಲಾಗಿದ್ದು, ಶಾಹಿಲ್ ಹಮೀದ್, ಅನ್ವರ್, ಕಿಶೋತ್ ಶೆಟ್ಟಿ ಮೂವರನ್ನು ಬಂಧಿಸಲಾಗಿದೆ.
ಮುಖ್ಯಮಂತ್ರಿಗಳ ವಿರುದ್ಧ ಕರ್ನಾಟಕ ರಾಜ್ಯಪಾಲರು ಅಭಿಯೋಜನೆಗೆ ಅನುಮತಿ ನೀಡಿರುವುದನ್ನು ವಿರೋಧಿಸಿ ಸೋಮವಾರ ಮಂಗಳೂರು ಜಿಲ್ಲಾ ಕಾಂಗ್ರೆಸ್ ಕಾರ್ಯಕರ್ತರು ಮಂಗಳೂರು ನಗರ ಪಾಲಿಕೆ ಮುಂಭಾಗ ಪ್ರತಿಭಟನೆ ನಡೆಸುತ್ತಿರುವ ಸಂದರ್ಭದಲ್ಲಿ ಮಂಗಳೂರು ನಗರ ಪಾಲಿಕೆ ಮುಂಭಾಗದ ಟ್ರಾಫಿಕ್ ಸಿಗ್ನಲ್ ನಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗುವಾಗ 10-15 ಜನ ಕಿಡಿಗೇಡಿಗಳು ಬಸ್ಸುಗಳನ್ನು ತಡೆದು ಕಲ್ಲುಗಳಿಂದ ಬಸ್ಸಿನ ಮುಂಭಾಗದ ಗಾಜನ್ನು ಒಡೆದು ನಷ್ಟ ಉಂಟಾಗಿದೆ. ಘಟನೆಗೆ ಸಂಬಂಧಿಸಿದಂತೆ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೂವರು ಆರೋಪಿಗಳನ್ನು ಬಂಧಿಸಿದ್ದು, ಇನ್ನುಳಿದ ಆರೋಪಿಗಳನ್ನು ಪತ್ತೆಹಚ್ಚುವ ಸಲುವಾಗಿ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ ಎಂದು ಇಲಾಖಾ ಪ್ರಕಟಣೆ ತಿಳಿಸಿದೆ.