Monday, July 7, 2025
spot_imgspot_img
spot_imgspot_img

ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿಶೇಷತೆಗಳ ಗುಚ್ಚವಾಗಿ ಸಂಪನ್ನಗೊಂಡ ವಿಕಾಸ ವೈಭವ-2024

- Advertisement -
- Advertisement -

ಮಾಣಿ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆ ವಿದ್ಯಾನಗರ ಪೆರಾಜೆ,ಮಾಣಿ ಇಲ್ಲಿಯ ಶಾಲಾ ವಾರ್ಷಿಕೋತ್ಸವ ವಿಕಾಸ ವೈಭವ – 2024 ಡಿಸೆಂಬರ್ 21 ರಂದು ಅದ್ದೂರಿಯಾಗಿ ಸಂಪನ್ನಗೊಂಡಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಬಾಲವಿಕಾಸ ಟ್ರಸ್ಟಿನ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಜೆ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ | ಎಂ . ಮೋಹನ್ ಆಳ್ವ ನೂತನ ಬಾಲವಿಕಾಸ ವಸತಿ ನಿಲಯವನ್ನು ಉದ್ಘಾಟಿಸಿ , ಮಾತನಾಡಿ ” ಮಾಣಿಯಂತಹ ಗ್ರಾಮೀಣ ಪ್ರದೇಶದಲ್ಲಿ ಬಾಲವಿಕಾಸವೆಂಬ ಸುಸಜ್ಜಿತವಾದ ವಿದ್ಯಾಸಂಸ್ಥೆಯನ್ನು ಕಟ್ಟಿ, ಇಲ್ಲಿನ ಮಕ್ಕಳಿಗೆ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವ ಸೇವಾ ಮನೋಭಾವ ಬಾಲವಿಕಾಸ ಆಡಳಿತ ಮಂಡಳಿಯಲ್ಲಿದೆ. ಇಡೀ ವರ್ಷ ನಿರಂತರವಾಗಿ ಶಾಲಾ ಮಕ್ಕಳನ್ನು ಪಠ್ಯ ಹಾಗೂ ಕ್ರೀಡೆ, ವಿಜ್ಞಾನ, ಸ್ಕೌಟ್ಸ್ ಮತ್ತು ಗೈಡ್ಸ್ ಮುಂತಾದ ಹಲವಾರು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಅವರನ್ನು ಸದೃಢ ಪ್ರಜೆಗಳನ್ನಾಗಿ ಮಾಡುವಲ್ಲಿ ಈ ಸಂಸ್ಥೆ ಬಹಳಷ್ಟು ಶ್ರಮಪಡುತ್ತಿದೆ ” ಎಂದು ಹೇಳಿ ಬಾಲವಿಕಾಸ ಆಡಳಿತ ಮಂಡಳಿಯ ತ್ಯಾಗ ಮನೋಭಾವವನ್ನು ಶ್ಲಾಘಿಸಿದರು.

ಇನ್ನೋರ್ವ ಮುಖ್ಯ ಅತಿಥಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್ ಬಾಲವಿಕಾಸ ವೆಬ್ ಸೈಟ್‌ನ್ನು ಲೋಕಾರ್ಪಣೆಗೊಳಿಸಿ ಮಾತನಾಡಿ, ” ಕರಾವಳಿ ಕರ್ನಾಟಕದ ಅತ್ಯಂತ ಸುಸಜ್ಜಿತ ಡಿಜಿಟಲ್ ಕ್ಯಾಂಪಸ್‌ ಹೊಂದಿದ ಏಕೈಕ ಸಂಸ್ಥೆ ಬಾಲವಿಕಾಸ. ಇದು ಮಾದರಿ ಶಿಕ್ಷಣ ಸಂಸ್ಥೆಯಲ್ಲೊಂದಾಗಿದೆ . BALAVIKAS ಪದದಲ್ಲಿ KAS -IAS ಇದೆ. ಹೆಸರಿಗೆ ತಕ್ಕಂತೆ ಪ್ರಗತಿಯ ಪಥದತ್ತ ಸಾಗುತ್ತಿದೆ ” ಎಂದರು.

ಬಾಲವಿಕಾಸ ಶಾಲೆಯ ಆಡಳಿತ ಮಂಡಳಿಯು ಕಳೆದ ಶೈಕ್ಷಣಿಕ ವರ್ಷದಿಂದ ಮಾಣಿ ಪರಿಸರದಲ್ಲಿರುವ ಪ್ರತಿಭೆಗಳನ್ನು , ಸಾಧಕರನ್ನು ಗುರುತಿಸಿ ಅವರಿಗೆ ವಿಕಾಸ ವೈಭವ ವೇದಿಕೆಯಲ್ಲಿ ಬಾಲವಿಕಾಸರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸುವ ಸಂಪ್ರದಾಯವನ್ನು ಆರಂಭಿಸಿದ್ದರು. ಈ ವರ್ಷ ಬಾಲವಿಕಾಸರತ್ನ ಪ್ರಶಸ್ತಿಯನ್ನು ಬಾಲವಿಕಾಸದ ಹಿರಿಯ ವಿದ್ಯಾರ್ಥಿಯಾದ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಕಲ್ಲಡ್ಕ ಮ್ಯೂಸಿಯಂ ಸ್ಥಾಪಕ ಮೊಹಮ್ಮದ್ ಯಾಸೀರ್ ರವರಿಗೆ ನೀಡಿ ಸನ್ಮಾನಿಸಲಾಯಿತು. ಇದರೊಂದಿಗೆ ಅವರ ಸಾಧನೆಯ ಹಾದಿಯ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಯಿತು . ಕಲ್ಲಡ್ಕ ಮ್ಯೂಸಿಯಂನ ಸ್ಥಾಪನೆಗೆ ಬಾಲವಿಕಾಸ ವಿದ್ಯಾಸಂಸ್ಥೆಯಲ್ಲಿ ಹಮ್ಮಿಕೊಳ್ಳುತ್ತಿದ್ದ ಪಠ್ಯೇತರ ಚಟುವಟಿಕೆಗಳು ಪ್ರೇರಣೆಯಾದ ರೀತಿಯನ್ನು ಯಾಸೀರ್ ತಮ್ಮ ಮಾತಿನಲ್ಲಿ ಮೆಲುಕು ಹಾಕುವ ಮೂಲಕ ಭಾವನಾತ್ಮಕವಾಗಿ ಸಂಸ್ಥೆಯ ಈಗಿನ ಕಿರಿಯ ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾದರು .

ಈ ಸಂದರ್ಭದಲ್ಲಿ ರಾಜ್ಯಮಟ್ಟದ ವಿದ್ಯಾರತ್ನ ಪ್ರಶಸ್ತಿ ವಿಜೇತ ಸಂಸ್ಥೆಯ ಮುಖ್ಯ ಶಿಕ್ಷಕಿ ಶ್ರೀಮತಿ ಸುಪ್ರಿಯಾ ಡಿ ಯವರನ್ನು ಗೌರವಿಸಲಾಯಿತು. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಕಲೆ, ಕ್ರೀಡೆ, ವಿಜ್ಞಾನ ಹಾಗೂ ಸ್ಕೌಟ್ & ಗೈಡ್ ಕ್ಷೇತ್ರದಲ್ಲಿ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಸಭಾ ಕಾರ್ಯಕ್ರಮದ ಆರಂಭದಲ್ಲಿ ಸಾಕ್ಷ್ಯ ಚಿತ್ರವಾಗಿ ದಾಖಲಿಸಿದ ಶಾಲೆಯ ಶೈಕ್ಷಣಿಕ ವರ್ಷದ ವಾರ್ಷಿಕ ವರದಿ ವಿಕಾಸ ವಿಹಂಗಮ-2024 ಅನಾವರಣವಾಯಿತು.

ಈ ಸಭಾ ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟ್ ನ ಉಪಾಧ್ಯಕ್ಷ ಯತಿರಾಜ್ ಕೆ ಎನ್, ಕಾರ್ಯದರ್ಶಿ ಮಹೇಶ್ ಶೆಟ್ಟಿ ಜೆ , ಸದಸ್ಯರಾದ ಸುಭಾಷಿಣಿ ಎ ಶೆಟ್ಟಿ ಉಪಸ್ಥಿತರಿದ್ದರು. ಸಂಸ್ಥೆಯ ಮುಖ್ಯ ಶಿಕ್ಷಕಿ ಸುಪ್ರಿಯಾ ಡಿ ಕಾರ್ಯಕ್ರಮ ಸ್ವಾಗತಿಸಿದರು , ಶಾಲಾ ಸಂಸತ್ತಿನ ಪ್ರಧಾನ ಮಂತ್ರಿ ಕು. ಸಾಕ್ಷಿ ವಂದಿಸಿದರು. ಸಹಶಿಕ್ಷಕಿಯರಾದ ಯಜ್ಞೇಶ್ವರಿ ಎನ್ ಸನ್ಮಾನ ಪತ್ರ ಹಾಗೂ ಶಿಕ್ಷಾ ಎಸ್ ಶೆಟ್ಟಿ ಬಹುಮಾನ ವಿಜೇತರ ಹೆಸರುಗಳನ್ನು ವಾಚಿಸಿದರು. ಶೋಭಾ ಎಂ ಶೆಟ್ಟಿ ಹಾಗೂ ಲೀಲಾ ಮಯ್ಯ ಕಾರ್ಯಕ್ರಮ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಪೂರ್ವದಲ್ಲಿ ಮತ್ತು ಅನಂತರದಲ್ಲಿ ಇಲ್ಲಿನ ವಿದ್ಯಾರ್ಥಿಗಳು ವಸುದೈವ ಕುಟುಂಬಕಂ ಎಂಬ ಪರಿಕಲ್ಪನೆಯಲ್ಲಿ ಪ್ರದರ್ಶಿಸಿದ ವಿವಿಧ ರೀತಿಯ ಸುಂದರ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಳ್ಳುವ ಮೂಲಕ ಹಲವಾರು ವಿಶೇಷತೆಗಳೊಂದಿಗೆ ವಿಕಾಸ ವೈಭವ – 2024 ಯಶಸ್ವಿಯಾಗಿ ಸಂಪನ್ನಗೊಂಡಿತು.

- Advertisement -

Related news

error: Content is protected !!