





ಪುಣೆ: ಪ್ರೊ ಕಬಡ್ಡಿ ಲೀಗ್‌ನ 11ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯಗಳಿಗೆ ಇಲ್ಲಿನ ಬಾಲೆವಾಡಿ ಒಳಾಂಗಣ ಕ್ರೀಡಾಂಗಣ ಸಜ್ಜಾಗಿದೆ. ಗುರುವಾರ ನಡೆಯುವ ಮೊದಲ ಪಂದ್ಯದಲ್ಲಿ ಯು.ಪಿ ಯೋಧಾಸ್ ತಂಡವು ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವನ್ನು; ಎರಡನೇ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ತಂಡವು ಯು ಮುಂಬಾ ತಂಡವನ್ನು ಎದುರಿಸಲಿವೆ.ಗುಂಪು ಹಂತದ ಲೀಗ್ ಪಂದ್ಯಗಳು ಮಂಗಳವಾರ ಮುಕ್ತಾಯವಾಗಿದ್ದು, ಪಾಯಿಂಟ್ ಪಟ್ಟಿಯಲ್ಲಿ ಕ್ರಮವಾಗಿ ಮೊದಲೆರಡು ಸ್ಥಾನ ಪಡೆದ ಹರಿಯಾಣ ಸ್ಟೀಲರ್ಸ್ ಮತ್ತು ಡೆಲ್ಲಿ ದಬಾಂಗ್ ತಂಡಗಳು ನೇರವಾಗಿ ಸೆಮಿಫೈನಲ್ ಪ್ರವೇಶ ಮಾಡಿವೆ.ಅಂಕಪಟ್ಟಿಯಲ್ಲಿ ಮೂರರಿಂದ ಆರನೇ ಸ್ಥಾನ ಪಡೆದ ನಾಲ್ಕು ತಂಡಗಳು ಸೆಮಿಫೈನಲ್ ಟಿಕೆಟ್‌ಗಾಗಿ ಎಲಿಮೀನೇಟರ್ ಪಂದ್ಯಗಳಲ್ಲಿ ಸೆಣಸಲಿವೆ. ಇಲ್ಲಿ ಗೆದ್ದ ಎರಡು ತಂಡಗಳು ನಾಲ್ಕರ ಘಟ್ಟಕ್ಕೆ ಮುನ್ನಡೆಯಲಿವೆ. ಇದೇ 27ರಂದು ಸೆಮಿಫೈನಲ್ ಮತ್ತು 29ರಂದು ಫೈನಲ್ ಪಂದ್ಯಗಳು ನಿಗದಿಯಾಗಿವೆ.ಪ್ಲೇ ಆಫ್ ಪ್ರವೇಶಿಸಿರುವ ಆರು ತಂಡಗಳ ಪೈಕಿ ಹರಿಯಾಣ ಮತ್ತು ಯೋಧಾಸ್ ತಂಡಗಳು ಚೊಚ್ಚಲ ಪ್ರಶಸ್ತಿಯನ್ನು ಎದುರು ನೋಡುತ್ತಿವೆ. ಪಟ್ನಾ ತಂಡವು ಮೂರು ಬಾರಿ ಚಾಂಪಿಯನ್ ಆಗಿದ್ದರೆ, ಜೈಪುರ ತಂಡ ಎರಡು ಬಾರಿ ಕಿರೀಟ ಮುಡಿಗೇರಿಸಿಕೊಂಡಿದೆ. ಡೆಲ್ಲಿ ಮತ್ತು ಮುಂಬಾ ತಲಾ ಒಂದು ಬಾರಿ ಪ್ರಶಸ್ತಿ ಗೆದ್ದಿವೆ.ಬುಲ್ಸ್‌ಗೆ ಕೊನೆಯ ಸ್ಥಾನ: 2018ರ ಚಾಂಪಿಯನ್ ಬೆಂಗಳೂರು ಬುಲ್ಸ್ ತಂಡವು ಈ ಆವೃತ್ತಿಯಲ್ಲಿ ಕೊನೆಯ ಮತ್ತು 12ನೇ ಸ್ಥಾನದೊಂದಿಗೆ ಅಭಿಯಾನ ಮುಗಿಸಿದೆ. ಪ್ರದೀಪ್ ನರ್ವಾಲ್ ಸಾರಥ್ಯದ ಬುಲ್ಸ್ ತಂಡವು ಆಡಿರುವ 22 ಪಂದ್ಯಗಳ ಪೈಕಿ ಎರಡು ಮಾತ್ರ ಗೆದ್ದಿದೆ. ಒಂದರಲ್ಲಿ ಟೈ ಮಾಡಿಕೊಂಡಿದ್ದರೆ, ಉಳಿದ 19ರಲ್ಲಿ ಪರಾಭವಗೊಂಡು ಕೇವಲ 19 ಅಂಕ ಗಳಿಸಿದೆ.