

ಮಂಗಳೂರು: ಸಾರ್ವಜನಿಕರಿಗೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುವಾದ ಹೈಡೋವೀಡ್ ಗಾಂಜಾ, ಚರಸ್ ಹಾಗೂ ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಯುವಕರನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಪಾಂಡೇಶ್ವರ ಸುಭಾಷ್ ನಗರದ ತೈಸಿರ್ ಇಸ್ಮಾಯಿಲ್ ಹುಸೈನ್ (23) ಮತ್ತು ಮೂಲತಃ ಬೋಳಂಗಡಿಯ ಪ್ರಸಕ್ತ ಕದ್ರಿ ಶಿವಭಾಗ್ ನಲ್ಲಿ ವಾಸವಾಗಿರುವ ರೋಯಸ್ಟನ್ ಕೃವಿಯರ್ ಲೋಬೋ(22) ಎಂದು ಗುರುತಿಸಲಾಗಿದೆ.
ಬಂಧಿತ ಆರೋಪಿಗಳಿಂದ 9 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನಿಂದ ಮಾದಕ ವಸ್ತುಗಳನ್ನು ಖರೀದಿಸಿಕೊಂಡು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಕದ್ರಿ ಶಿವಭಾಗ್ನಲ್ಲಿ ಬಂಧಿಸಿದರು. ಆರೋಪಿಗಳಿಂದ 8 ಲಕ್ಷ ರೂ. ಬೆಲೆಯ ಮಾದಕ ವಸ್ತುಗಳು ಮತ್ತು 2 ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿದೆ. ಸಿಸಿಬಿ ಘಟಕದ ಎಸಿಪಿ ಮನೋಜ್ ಕುಮಾರ್ ನಾಯ್ಕರ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ರಫೀಕ್ ಕೆ.ಎಂ., ಎಸ್ಸೆ ನರೇಂದ್ರ, ಎಎಸ್ಸೇ ರಾಮ ಪೂಜಾರಿ, ಶೀನಪ್ಪ, ಸುಜನ್ ಶೆಟ್ಟಿ ಮತ್ತಿತರರು ಪಾಲ್ಗೊಂಡಿದ್ದರು.