


ಅಹಮದಾಬಾದ್: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ ವೆಚ್ಚದ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ರಾಷ್ಟ್ರೀಯ ಔಷಧ ಬೆಲೆ ನಿಯಂತ್ರಣ ಪ್ರಾಧಿಕಾರ ಹೊರಡಿಸಿರುವ ಮಹತ್ವದ ಆದೇಶದ ಮೇರೆಗೆ, ಪ್ರಮುಖ ಔಷಧ ಸಂಸ್ಥೆ ಟೊರೆಂಟ್ ಫಾರ್ಮಾಸ್ಯೂಟಿಕಲ್ಸ್ ಲಿಮಿಟೆಡ್ ತನ್ನ ಪ್ರಮುಖ ಕ್ಯಾನ್ಸರ್ ಔಷಧಿಗಳ ಗರಿಷ್ಠ ಚಿಲ್ಲರೆ ಮಾರಾಟ ದರವನ್ನು ಶೇ.70ರವರೆಗೂ ಗಣನೀಯವಾಗಿ ಇಳಿಕೆ ಮಾಡಿ ಸಾರ್ವಜನಿಕ ಪ್ರಕಟಣೆ ಹೊರಡಿಸಿದೆ.
ಪರಿಷ್ಕೃತ ನೂತನ ದರಗಳು ನವೆಂಬರ್ 9 ರಿಂದ ಜಾರಿಗೆ ಬರಲಿದ್ದು, ಈ ನಿಯಮ ಪಾಲನೆಯ ಭಾಗವಾಗಿ ಟೊರೆಂಟ್ ಫಾರ್ಮಾ ತನ್ನ ಉತ್ಪಾದನೆಯ ಜೀವರಕ್ಷಕ ಕ್ಯಾನ್ಸರ್ ಇಂಜೆಕ್ಷನ್ಗಳು, ಮಾತ್ರೆಗಳು ಹಾಗೂ ಕ್ಯಾಪ್ಸೂಲ್ಗಳ ದರವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ.
ಔಷಧ ಮಾರಾಟ ಜಾಲದಲ್ಲಿ ವಿಪರೀತ ಟ್ರೇಡ್ ಮಾರ್ಜಿನ್(ಲಾಭದ ಅಂತರ) ಇರುವುದನ್ನು ತಪ್ಪಿಸಲು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯದ ಅಧೀನದ ಎನ್ಪಿಪಿಎ ವ್ಯಾಪಾರ ಲಾಭಾಂಶಕ್ಕೆ ಗರಿಷ್ಠ ಶೇ. 30ರ ಮಿತಿ(ಟ್ರೇಡ್ ಮಾರ್ಜಿನ್ ಕ್ಯಾಪಿಂಗ್) ವಿಧಿಸಿದೆ.
ಈ ದರ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ತಲುಪಿಸಬೇಕು ಎಂದು ಸಂಸ್ಥೆಯು ಎಲ್ಲಾ ಸಗಟು ವ್ಯಾಪಾರಿಗಳು, ಚಿಲ್ಲರೆ ಮಾರಾಟಗಾರರು, ಆಸ್ಪತ್ರೆಗಳು ಹಾಗೂ ವೈದ್ಯಕೀಯ ಸಂಸ್ಥೆಗಳಿಗೆ ಸಾರ್ವಜನಿಕ ಪ್ರಕಟಣೆಯ ಮೂಲಕ ಸೂಚಿಸಿದೆ. ನವೆಂಬರ್ 9ರಿಂದ ಜಾರಿಗೆ ಬರುವಂತೆ, ಪ್ಯಾಕ್ ಮೇಲೆ ಮುದ್ರಿಸಲಾದ ದರ ಅಥವಾ ಪರಿಷ್ಕೃತ ದರ ಇವೆರಡರಲ್ಲಿ ಯಾವುದು ಕಡಿಮೆಯೋ ಅದೇ ದರವನ್ನು ಗ್ರಾಹಕರು ಖರೀದಿ ಮಾಡಬೇಕಾಗುತ್ತದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.








