Thursday, August 6, 2026
spot_imgspot_img
spot_imgspot_img

ಪಶ್ಚಿಮಬಂಗಾಳ: ವಿವಾದಿತ ವಕ್ಫ್‌ ಮಸೂದೆಯನ್ನು ವಿರೋಧಿಸಿ ಭಾರೀ ಹಿಂಸಾಚಾರ-ರೈಲಿಗೆ ಕಲ್ಲು ತೂರಾಟ- ಕಚ್ಚಾ ಬಾಂಬ್‌ ಎಸೆದು ಅಟ್ಟಹಾಸ

- Advertisement -
- Advertisement -

ಕೋಲ್ಕತ್ತಾ: ಬಹು ಚರ್ಚಿತ, ವಿವಾದಿತ ಮಸೂದೆಯನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಮುರ್ಷಿದಾಬಾದ್‌ನಲ್ಲಿ ಶುಕ್ರವಾರ ಮತ್ತೆ ಹಿಂಸಾಚಾರ ಭುಗಿಲೆದ್ದಿದ್ದು, ನಿನ್ನೆ ತಡರಾತ್ರಿ ನಿಮ್ಟಿತಾ ನಿಲ್ದಾಣದಲ್ಲಿ ನಿಂತಿದ್ದ ರೈಲಿನ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದೆ. ಅಲ್ಲದೇ ಉದ್ರಿಕ್ತ ಗುಂಪು ರೈಲು ನಿಲ್ದಾಣದ ಸಾರ್ವಜನಿಕ ಆಸ್ತಿ-ಪಾಸ್ತಿಯನ್ನು ಧ್ವಂಸಗೊಳಿಸಿತು. ಇನ್ನು ಹಿಂಸಾಚಾರದಲ್ಲಿ ಏಳರಿಂದ ಹತ್ತು ಪೊಲೀಸರು ಗಾಯಗೊಂಡಿದ್ದಾರೆ. ಹಿಂಸಾಚಾರವನ್ನು ನಿಯಂತ್ರಿಸಲು ಗಡಿ ಭದ್ರತಾ ಪಡೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಘಟನೆಯ ನಂತರ ಎರಡು ರೈಲುಗಳನ್ನು ರದ್ದುಗೊಳಿಸಲಾಗಿದೆ ಮತ್ತು ಇನ್ನೂ ಐದು ರೈಲುಗಳನ್ನು ಡೈವರ್ಟ್‌ ಮಾಡಲಾಗಿದೆ. ದಾಳಿಯಲ್ಲಿ ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ ಎನ್ನಲಾಗಿದೆ. ಸುತಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾಜುರ್ ಕ್ರಾಸಿಂಗ್ ಪ್ರದೇಶದಲ್ಲಿ ಪ್ರತಿಭಟನಾಕಾರರು ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿ ನಡುವೆ ಘರ್ಷಣೆ ನಡೆದಿದ್ದು, ಪ್ರತಿಭಟನಾಕಾರರು ಪೊಲೀಸ್ ಸಿಬ್ಬಂದಿಯ ಮೇಲೆ ಕಲ್ಲು ಮತ್ತು ಕಚ್ಚಾ ಬಾಂಬ್‌ಗಳನ್ನು ಎಸೆದಿದ್ದಾರೆ ಎಂದು ವರದಿಯಾಗಿದೆ.

ಮುರ್ಷಿದಾಬಾದ್‌ನಲ್ಲಿ, ಪ್ರತಿಭಟನಾಕಾರರು ಪೊಲೀಸರೊಂದಿಗೆ ಭಾರೀ ಘರ್ಷಣೆ ಏರ್ಪಟ್ಟಿದ್ದು, ವಾಹನಗಳಿಗೆ ಬೆಂಕಿ ಹಚ್ಚಿ ಪ್ರತಿಭಟನಾಕಾರರು ಅಟ್ಟಹಾಸ ಮೆರೆದಿದ್ದಾರೆ. ಇನ್ನು ಘಟನೆ ಬೆನ್ನಲ್ಲೇ ರಾಜ್ಯಪಾಲ ಸಿ.ವಿ. ಆನಂದ ಬೋಸ್ ಅವರು ಹಿಂಸಾಚಾರಕ್ಕೆ ಇಳಿಯುವವರಿಗೆ ಎಚ್ಚರಿಕೆ ನೀಡಿದ್ದಾರೆ ಮತ್ತು ಮುರ್ಷಿದಾಬಾದ್ ಮತ್ತು ಉತ್ತರ 24 ಪರಗಣಗಳ ಇತರ ಸ್ಥಳಗಳು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆಗೆ ಕಾರಣರಾದ ದುಷ್ಕರ್ಮಿಗಳ ವಿರುದ್ಧ ತಕ್ಷಣ ಮತ್ತು ಪರಿಣಾಮಕಾರಿ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕಟ್ಟುನಿಟ್ಟಿನ ನಿರ್ದೇಶನಗಳನ್ನು ನೀಡಿದ್ದಾರೆ.

- Advertisement -

Related news

error: Content is protected !!