Thursday, August 6, 2026
spot_imgspot_img
spot_imgspot_img

ಒಡಿಯೂರು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ‘ಗ್ರಾಮೋತ್ಸವ-2026’

- Advertisement -
- Advertisement -

'ಗುರುವಂದನೆ-ಸೇವಾಸಂಭ್ರಮ'

ವಿಟ್ಲ: ಬಂಟ್ವಾಳ ತಾಲೂಕಿನ ಕನ್ಯಾನ ಗ್ರಾಮದ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ಶ್ರೀ ದತ್ತಾಂಜನೇಯ ಕ್ಷೇತ್ರದಲ್ಲಿ ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮದಿನೋತ್ಸವ ಮತ್ತು ‘ಗ್ರಾಮೋತ್ಸವ-2026’ ಕಾರ್ಯಕ್ರಮವು ‘ಗುರುವಂದನೆ-ಸೇವಾಸಂಭ್ರಮ’ವಾಗಿ ನಡೆಯಲಿದೆ. ಈ ಧಾರ್ಮಿಕ ಕಾರ್ಯಕ್ರಮವು ಆಗಸ್ಟ್ 08ರ ಶನಿವಾರದಂದು ಪರಮಪೂಜ್ಯ ಶ್ರೀ ಶ್ರೀ ಗುರುದೇವಾನಂದ ಸ್ವಾಮೀಜಿ ಅವರ ಅನುಗ್ರಹ ಸಂದೇಶ ಮತ್ತು ಸಾಧ್ಯ ಶ್ರೀ ಶ್ರೀ ಮಾತಾನಂದಮಯಿ ಇವರ ದಿವ್ಯ ಉಪಸ್ಥಿತಿಯಲ್ಲಿ ಈ ಧಾರ್ಮಿಕ ಮತ್ತು ಸಾಮಾಜಿಕ ಮಹೋತ್ಸವವು ನೆರವೇರಲಿದೆ.

ಕಾರ್ಯಕ್ರಮದ ಧಾರ್ಮಿಕ ವಿಧಿವಿಧಾನಗಳು ಬೆಳಿಗ್ಗೆ 8.00 ಗಂಟೆಯಿಂದಲೇ ಆರಂಭಗೊಳ್ಳಲಿದ್ದು, ಶ್ರೀ ಗಣಪತಿ ಹವನ ಹಾಗೂ ಮಹಾಪೂಜೆ ನಡೆಯಲಿದೆ. ತದನಂತರ ಬೆಳಿಗ್ಗೆ 9.00 ಗಂಟೆಯಿಂದ ಶ್ರೀ ರವಿರಾಜ್ ಒಡಿಯೂರು ಮತ್ತು ಬಳಗದವರಿಂದ ಭಕ್ತಿಪೂರ್ವಕ ನಾಮಸಂಕೀರ್ತನೆ ಜರುಗಲಿದೆ. ಬೆಳಿಗ್ಗೆ 9.30 ರಿಂದ ಪರಮಪೂಜ್ಯ ಶ್ರೀಗಳವರಿಗೆ ಭಕ್ತಾದಿಗಳಿಂದ ಪಾದಪೂಜೆ, ತುಲಾಭಾರ ಸೇವೆ ಮತ್ತು ಗುರುವಂದನೆ ನೆರವೇರಲಿದೆ. ಅಪರಾಹ್ನ 4.00 ರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ರಾತ್ರಿ 7.00 ಗಂಟೆಗೆ ಶ್ರೀ ಸನ್ನಿಧಿಯಲ್ಲಿ ರಂಗಪೂಜೆ, ವಿಶೇಷ ಬೆಳ್ಳಿರಥೋತ್ಸವ ಸೇವೆ, ಮಹಾಪೂಜೆ ನಡೆಯಲಿದೆ.

ಬೆಳಿಗ್ಗೆ 11.30ಕ್ಕೆ ಸರಿಯಾಗಿ ನಡೆಯಲಿರುವ ಭವ್ಯ ಸಭಾ ಕಾರ್ಯಕ್ರಮದಲ್ಲಿ ನಾಡಿನ ಪ್ರಮುಖ ರಾಜಕೀಯ, ಸಾಮಾಜಿಕ ಹಾಗೂ ಉದ್ಯಮ ರಂಗದ ಧುರೀಣರು ಭಾಗವಹಿಸಲಿದ್ದಾರೆ.

ಮಂಗಳೂರು ಸಂಸದ ಕ್ಯಾ। ಬ್ರಿಜೇಶ್ ಚೌಟ, ಎಂ.ಆರ್.ಜಿ. ಗ್ರೂಪ್ ಅಧ್ಯಕ್ಷ ಡಾ. ಕೆ. ಪ್ರಕಾಶ್ ಶೆಟ್ಟಿ, ಶಬರಿ ಇಂಡಸ್ಟ್ರಿಯಲ್ ಕ್ಯಾಟರಿಂಗ್ ಆಡಳಿತ ನಿರ್ದೇಶಕ ಕೆ.ಕೆ. ಶೆಟ್ಟಿ, ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಿರುವ ಮುಂಬೈ ಉದ್ಯಮಿ ರಘು ಎಲ್. ಶೆಟ್ಟಿ ದೇವಸ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ಯು., ಶಶಿ ಕ್ಯಾಟರಿಂಗ್ ಸರ್ವೀಸಸ್ ಇದರ ಆಡಳಿತ ನಿರ್ದೇಶಕರಾದ ಶಶಿಧರ ಬಿ. ಶೆಟ್ಟಿ ಬರೋಡ, ಹಿರಿಯ ವಕೀಲರಾದ ಶ್ಯಾಮ ಭಟ್, ಪ್ರಗತಿಪರ ಕೃಷಿಕರಾದ ಶ್ಯಾಮ್ ಪ್ರಸಾದ್ ಕೊಣಲೆ, ಬಾಂಬೆ ಬಂಟ್ಸ್ ಎಸೋಸಿಯೇಷನ್ಸ್ ಮುಂಬೈ ಇದರ ಮಾಜಿ ಅಧ್ಯಕ್ಷರಾದ ಶ್ಯಾಮ ಎನ್. ಶೆಟ್ಟಿ, ಎಟಿಎಸ್ ದೋಹ ಕತಾರ್ ಆಡಳಿತ ನಿರ್ದೇಶಕರಾದ ರವಿಶೆಟ್ಟಿ ಮೂಡಂಬೈಲು ಹಾಗೂ ನವಿಮುಂಬೈ ಉದ್ಯಮಿ ಭಾಸ್ಕರ ಆರ್. ಶೆಟ್ಟಿ ಸೇರಿದಂತೆ ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಾದ ಗುಜರಾತ್‌ ನ ಖ್ಯಾತ ಪರಿಸರವಾದಿ, ‘ಗ್ರೀನ್ ಹೀರೊ ಆಫ್ ಇಂಡಿಯಾ’ ಡಾ. ಆರ್.ಕೆ. ನಾಯರ್ ಅವರಿಗೆ ವಿಶೇಷ ಗೌರವಾಭಿನಂದನೆ ನೆರವೇರಲಿದೆ.

ಈ ಪವಿತ್ರ ಧಾರ್ಮಿಕ, ಸಾಂಸ್ಕೃತಿಕ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ, ಶ್ರೀಗುರುಗಳ ಕೃಪಾಶೀರ್ವಾದಕ್ಕೆ ಪಾತ್ರರಾಗಬೇಕಾಗಿ ಒಡಿಯೂರು ಶ್ರೀಗಳವರ ಜನ್ಮದಿನೋತ್ಸವ ಸಮಿತಿ ಹಾಗೂ ಒಡಿಯೂರು ಶ್ರೀ ಸಂಸ್ಥಾನಮ್ ಪ್ರಕಟಣೆಯಲ್ಲಿ ತಿಳಿಸಿದೆ

- Advertisement -

Related news

error: Content is protected !!