


ಪುತ್ತೂರು: ಮಾಯ್ದೇ ದೇವುಸ್ ಚರ್ಚ್ ಧರ್ಮಗುರುಗಳು ಉದ್ಧಟತನ ಹಾಗೂ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದ ಬಗ್ಗೆ ಪುತ್ತೂರಿನ ಪ್ರೆಸ್ಕ್ಲಬ್ನಲ್ಲಿ ಸುದ್ಧಿಗೋಷ್ಠಿ ನಡೆಯಿತು.
ಪುತ್ತೂರು: ಇಲ್ಲಿನ ಮಾಯ್ದೇ ದೇವುಸ್ ಚರ್ಚ್ನ ಧರ್ಮಗುರುಗಳು ಉದ್ಧಟತನ ಹಾಗೂ ಸರ್ವಾಧಿಕಾರಿ ವರ್ತನೆ ತೋರುತ್ತಿದ್ದು, ಚರ್ಚ್ ಪೂಜೆಯ ಸಂದರ್ಭದ ಪ್ರಕಟಣೆಯಲ್ಲಿ ವ್ಯಯಕ್ತಿಕವಾಗಿ ದೂಷಣೆ ಮಾಡಿ ಜನರನ್ನು ಕೆರಳಿಸುವ ರೀತಿಯಲ್ಲಿ ಪ್ರಕಟಣೆ ನೀಡುತ್ತಾರೆ. ಇಲ್ಲಿ ಪ್ರಶ್ನಿಸಲು ಅಥವಾ ಸಂವಾದ ನಡೆಸಲು ಅವಕಾಶವಿರುವುದಿಲ್ಲ. ಈ ಬಗ್ಗೆ ಬಿಷಪ್ ಅವರಿಗೆ ದೂರು ನೀಡಿದರೆ ಅವರೂ ಕ್ರಮ ಕೈಗೊಳ್ಳದೆ ದೂರಿನ ಪ್ರತಿಯನ್ನು ಪಾದ್ರಿಯ ಕೈಗೆ ನೀಡಿ ನಿರ್ಲಕ್ಷತೆ ತೋರಿದ್ದಾರೆ. ಚರ್ಚ್ ಪೂಜೆಯ ಸಂದರ್ಭದಲ್ಲಿ ಪ್ರಕಟಣೆ ಮಾಡುವಾಗ ಈ ಧರ್ಮಗುರುಗಳು ವೈಯಕ್ತಿಕ ದೂಷಣೆ ಮಾಡುವುದು ಹಾಗೂ ಟಾಂಟ್ ಕೊಡುವುದನ್ನು ಮುಂದುವರಿಸಿದಲ್ಲಿ ಅವರ ವಿರುದ್ದ ಪ್ರತಿಭಟನೆ ನಡೆಸಲಾಗುವುದು ಹಾಗೂ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು ಕ್ರಿಶ್ಚನ್ ಯೂನಿಯನ್ ಪುತ್ತೂರು ಎಚ್ಚರಿಸಿದೆ.
ಪುತ್ತೂರಿನ ಪ್ರೆಸ್ಕ್ಲಬ್ನಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಕ್ರಿಶ್ಚನ್ ಯೂನಿಯನ್ ಪುತ್ತೂರು ಅಧ್ಯಕ್ಷ ಮೌರೀಸ್ ಮಸ್ಕರೇನ್ಹಸ್ ಅವರು ಮಾ. 26 ರಂದು ಚರ್ಚ್ ವಠಾರದಲ್ಲಿರುವ ವಿಕ್ಟರ್ಸ್ ಹೈಸ್ಕೂಲ್ ಮಕ್ಕಳ ಪರೀಕ್ಷಾ ಸಂದರ್ಭದಲ್ಲಿ ಆ ಭಾಗದಲ್ಲಿ ಸೆಕ್ಷನ್ 140 ಜಾರಿಯಲ್ಲಿತ್ತು. ಇದೇ ಸಂದರ್ಭದಲ್ಲಿ ಚರ್ಚ್ ವಠಾರದಲ್ಲಿ `ಲವ್ ಟು ಲಸ್ಸಿ’ ಎಂಬ ಚಿತ್ರೀಕರಣ ನಡೆಯುತ್ತಿತ್ತು. ಮಕ್ಕಳ ಪೋಷಕರು ಇದನ್ನು ಪಶ್ನಿಸಿ ಚಿತ್ರಿಕರಣದ ಬಗ್ಗೆ ಡಿ.ಡಿ.ಪಿ.ಐ., ಬಿ.ಇ.ಓ. ಅವರಿಗೆ ದೂರವಾಣಿ ಕರೆ ಮಾಡಿ ಆಕ್ಷೇಪ ವ್ಯಕ್ತಪಡಿಸಿದ್ದರು. ಅಧಿಕಾರಿಗಳಿಗೆ ದೂರು ನೀಡಲು ಚರ್ಚ್ನಲ್ಲಿನ ಒಂದು ತಂಡವೇ ಕಾರಣ ಎಂಬ ತಪ್ಪು ಕಲ್ಪನೆಯಿಂದ ಧರ್ಮಗುರುಗಳು ಅವರು ಚರ್ಚ್ ಗೇಟ್ಗೆ ಹಾಕುದ ಬೀಗದ ಸಮಯವನ್ನು 8 ಗಂಟೆಯಿಂದ 7 ಗಂಟೆಗೆ ಬದಲಾವಣೆ ಮಾಡಿದ್ದಾರೆ. ಈ ತೀರ್ಮಾನವು ತಮ್ಮ ವಿರೋಧಿಗಳನ್ನು ಮಟ್ಟ ಹಾಕಲು ನಡೆಸಿದ ತಂತ್ರದ ಭಾಗವಾಗಿರುತ್ತದೆ. ಸುದ್ದಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ’ಚರ್ಚ್ ವಠಾರದ ಗೇಟ್ಗೆ ಬೀಗ ವಾಹನಗಳು ಬಾಕಿ-ಆಕ್ರೋಶ’ ಎಂಬ ವರದಿಗಳು ಬಂದಿರುತ್ತದೆ.
ನಾವು ಈ ಬಗ್ಗೆ ಬಿಷಪ್ರಲ್ಲಿ ತಿಳಿಸಿದಾಗ ಚರ್ಚ್ ಪಾದ್ರಿಯಲ್ಲಿ ಮಾತನಾಡುವಂತೆ ಹೇಳಿರುತ್ತಾರೆ. ಚರ್ಚ್ ಪಾದ್ರಿಯಲ್ಲಿ ಮಾತನಾಡಲು ಈ ಸಂದರ್ಭದಲ್ಲಿ ಸಾಧ್ಯವಾಗಲಿಲ್ಲ ಯಾಕೆಂದರೆ ಅವರ ನಿವಾಸದಲ್ಲಿ ಸುಮಾರು 25 ಜನ ಗಂಡಸರು ಹೆಂಗಸರು ಸೇರಿ ಇದ್ದು ಅಲ್ಲಿ ಮಧ್ಯಪಾನವನ್ನು ಸರಬರಾಜು ಮಾಡಲಾಗಿತ್ತು. ನಾವು ಅಲ್ಲಿಗೆ ಹೋದರೆ ಗಲಬೆ ನಡೆಯುವ ಸಾಧ್ಯತೆಯಿತ್ತು. ಪಾದ್ರಿ ಅವರೇ ಹೇಳಿದಂತೆ ಚರ್ಚ್ಲ್ಲಿ 700 ಕುಟುಂಬಗಳು ಮತ್ತು ವಠಾರದಲ್ಲಿ 2000 ವಿದ್ಯಾರ್ಥಿಗಳು ಇರುವುದು ಅಲ್ಲಿ ಪರೀಕ್ಷಾ ಕೇಂದ್ರ ಇರುವುದು ತಿಳಿದಿರಲಿಲ್ಲವೇ ಚಿತ್ರ ತಂಡಕ್ಕೆ ಯಾವ ಆಧಾರದಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು. ಯಾವ ಆಡಳಿತ ಮಂಡಳಿಯಲ್ಲಿ ಚರ್ಚಿಸಲಾಗಿದೆ. ಹಣ ಸಿಗುತ್ತದೆ. ಎಂಬ ಉದ್ದೇಶದಿಂದ ಅನುಮತಿ ನೀಡಿರುವುದೇ ಅಥವಾ ಉದ್ಧಟತನವೇ, ಸರ್ವಾಧಿಕಾರವೇ. ಕ್ರಿಶ್ಚನರ ಪವಿತ್ರ ಲೆಂಟ್ ದಿನಗಳಾದ ಈ ಕೊನೆಯ ವಾರದಲ್ಲಿ ತರಾತುರಿಯಲ್ಲಿ ಗೇಟಿಗೆ ಬೀಗ ಹಾಕುವ ಸಮಯವನ್ನು ಬದಲಿಸುವ ನಿರ್ಧಾರವನ್ನು ಯಾಕೆ ಕೈಗೊಂಡರು. ಭಕ್ತರು ಬಂದು ಪ್ರಾರ್ಥನೆ ಮಾಡಬಾರದೆಂದು ಈ ನಿರ್ಧಾರವೇ. ಸಂಜೆ 7 ಗಂಟೆಗೆ ಶಾಲೆ ಇರುತ್ತದೆಯೇ ಇದೇ ಆವರಣದಲ್ಲಿ ಸರಕಾರದಿಂದ ಅನುದಾನ ಪಡೆದು ಸಮುದಾಯ ಭವನ ನಿರ್ಮಿಸುವ ಅಗತ್ಯ ಏನಿತ್ತು ಈ ಎಲ್ಲಾ ಪ್ರಶ್ನೆಗಳಿಗೆ ಧರ್ಮಗುರುಗಳು ಉತ್ತರಿಸಬೇಕು ಎಂದು ಆಗ್ರಹಿಸಿದರು. ಇದೇ ಲಾರೆನ್ಸ್ ಮಸ್ಕರೇನ್ಹಸ್ ರವರು ಮಡಂತ್ಯಾರಿನಲ್ಲಿ, ಅಲ್ಲಿಪಾದೆಯಲ್ಲಿ, ಅಮ್ಮೆಂಬಳ ಚರ್ಚ್ ನಲ್ಲೂ ಸಮುದಾಯದವರನ್ನು ಪರಸ್ಪರ ಎತ್ತಿ ಕಟ್ಟುವ ಮೂಲಕ ಇಡೀ ಕ್ರೈಸ್ತ ಸಮುದಾಯವನ್ನು ಕೆಡಿಸಿರುತ್ತಾರೆ.
ಚರ್ಚ್ ಸಮುದಾಯ ಭವನದಲ್ಲಿ ಮದುವೆ ಇನ್ನಿತರ ಶುಭ ಕಾರ್ಯಗಳು ನಡೆಯುತ್ತಿರುತ್ತವೆ. ಈ ಸಂದರ್ಭದಲ್ಲಿ ಅಲ್ಲಿ ಶಾಲಾ ವಠಾರವಾದರೂ ಇಲ್ಲಿ ಮದ್ಯ ಸರಬರಾಜು ನಡೆಯುತ್ತಿದೆ. ಚರ್ಚ್ ಪಾದ್ರಿಯವರು ಮದ್ಯ ಸರಬರಾಜು ಮಾಡಲು ಇಲಾಖೆಗೆ ನಿರಾಕ್ಷೇಪಣೆ ಪತ್ರವನ್ನು ನೀಡಿರುತ್ತಾರೆ. ಶಾಲಾ ವಠಾರ ಅಥವಾ ಚರ್ಚ್ ವಠಾರದಲ್ಲಿ ಮದ್ಯ ಸರಬರಾಜು ಮಾಡುವುದೇ ಸರಿಯೇ?. ಇದೇ ಧರ್ಮಗುರು ಮಡಂತ್ಯಾರಿನಲ್ಲಿ ಭಕ್ತರೊಳಗೆ ಜಗಳ ಹಚ್ಚಿದ ನಿದರ್ಶನಗಳಿವೆ. ಎರಡು ಗುಂಪುಗಳನ್ನು ಕೋರ್ಟ್ ಕೇಸ್ ಮಾಡಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರು ಅಲ್ಲಿನ ಸಮನ್ವಯ ಸಹಕಾರಿ ಸಂಘದ ವಿರುದ್ಧ ಇನ್ನೊಂದು ಸಹಕಾರಿ ಸಂಘ ಕಟ್ಟಿ ಖಾಯಂ ಅದರ ಗೌರವಾಧ್ಯಕ್ಷರಾಗಿದ್ದಾರೆ.ಇದಕ್ಕೆ ಯಾರು ಅನುಮತಿ ಕೊಟ್ಟದ್ದು?. ಅವರು ಚರ್ಚ್ ನ ಪೂಜೆಯ ಸಂದರ್ಭದ ಪ್ರಕಟಣೆಯಲ್ಲಿ ವೈಯಕ್ತಿಕವಾಗಿ ಜನರನ್ನು ಕೆರಳಿಸುವ ರೀತಿಯಲ್ಲಿ ಪ್ರಕಟಣೆ ನೀಡಿರುತ್ತಾರೆ. ಇದನ್ನು ಪ್ರಶ್ನಿಸಲು ಅಥವಾ ಸಂವಾದ ನಡೆಸಲು ಅವಕಾಶವಿರುವುಲ್ಲ.
ಇತ್ತೀಚೆಗೆ ಒಬ್ಬ ಅಂಗವಿಕಲ ವ್ಯಕ್ತಿ ಚರ್ಚ್ ಆವರಣದಲ್ಲಿ ನಡೆದ ನಾಟಕ ಚೆನ್ನಾಗಿಲ್ಲ ಇದರಿಂದ ಯಾವುದೇ ಒಳ್ಳೆಯ ಸಂದೇಶವಿಲ್ಲ ಎಂದು ಪಾದ್ರಿಯವರಲ್ಲಿ ಪ್ರಶ್ನಿಸಿದಾಗ ಆತನ ಮೇಲೆ ಹಲ್ಲೆ ಮಾಡಿರುತ್ತಾರೆ. ಒಬ್ಬ ಕಾರ್ಯಕ್ರಮ ನಿರೂಪಣೆ ಮಾಡುವ ವ್ಯಕ್ತಿಗೆ ಕಾರ್ಯಕ್ರಮಗಳನ್ನು ನೀಡಬಾರದೆಂದು ಹಾಗೂ ಇನ್ನೊಂದು ಕುಟುಂಬಕ್ಕೆ ಯಾವುದೇ ಕಾರ್ಯಕ್ರಮಗಳಲ್ಲಿ ಫೋಟೊಗ್ರಫಿ ವಿಡಿಯೋಗಳಿಗೆ ಚಿತ್ರಿಕರಿಸಲು ಅವಕಾಶ ನೀಡಬಾರದೆಂದು ನೀಡಿದರೆ ನಾನು ಆ ಕಾರ್ಯಕ್ರಮವನ್ನು ಬಹಿಸ್ಕರಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಒಬ್ಬ ಮಾಹಿತಿ ಹಕ್ಕು ಕಾರ್ಯಕರ್ತ ಸಂತ ಫಿಲೋಮಿನಾ ಹೈಸ್ಕೂಲಿನ ಸಿಬ್ಬಂದಿಯೋರ್ವರ ಮಾಹಿತಿಯನ್ನು ಕೇಳಿದಕ್ಕೆ ಅವನ ಹೆಂಡತಿ ಮಗನನ್ನು ಚರ್ಚ್ ಗೆ ಕರೆಯಿಸಿ ಬೆದರಿಸಿ ತಪ್ಪೊಪ್ಪಿಗೆಯನ್ನು ಹೇಳಿಕೆಯನ್ನು ಪಡೆದಿರುತ್ತಾರೆ. ಒಬ್ಬ ಕ್ಯಾನ್ಸರ್ ರೋಗಿಯು ಮನೆ ಕಟ್ಟಲು ಸಹಾಯಕೋರಿ ಚರ್ಚ್ ಹೋದಾಗ ಆತನನ್ನು ನೀನು ನನ್ನ ವಿರೋಧಿಗಳ ಜತೆ ಶಾಮಿಲಾಗಿದ್ದಿ ಎಂದು ಹೇಳಿ ಸಹಾಯ ನೀಡಲು ನಿರಾಕರಿಸಿರುತ್ತಾರೆ. ಮತ್ತೆ ಅವರಿಗೆ ಧನಸಹಾಯ ನೀಡಲು ಸಮಿತಿಯವರು ಮಧ್ಯ ಪ್ರವೇಶ ಮಾಡಲಾಯಿತು. ಇವರ ಬಗ್ಗೆ ಬಿಷಪ್ರಿಗೆ ಸುಮಾರು 50 ಜನ ಸದಸ್ಯರು ಲಿಖಿತ ದೂರು ನೀಡಿದರೆ ಬಿಷಪರು ಆ ದೂರನ್ನು ಅವರಿಗೆ ಹಿಂದಿರುಗಿಸಿ ಕಳುಹಿಸಿದ್ದಾರೆ. ಧರ್ಮಗುರುಗಳು ಈ ದೂರನ್ನು ಸದಸ್ಯರ ಆಧ್ಯಾತ್ಮಿಕ ಹಾಗೂ ಶುಭ ಕಾರ್ಯಗಳಿಗೆ ಅವರ ಬಳಿ ಮಾತನಾಡಲು ಹೋದಾಗ ನೀನು ನನ್ನ ಬಗ್ಗೆ ಬಿಷಪರಿಗೆ ದೂರು ನೀಡಿದ್ದಿ ನಿನ್ನ ಕಾರ್ಯಕ್ರಮಕ್ಕೆ ನಾನು ಯಾಕೆ ಬರಬೇಕು ಎಂದು ಪ್ರಶ್ನಿಸುತ್ತಾ ಹೀಯಾಳಿಸುತ್ತಾರೆ ಎಂದು ಅವರು ಆರೋಪಿಸಿದರು.
ಸುದ್ಧಿಗೋಷ್ಠಿಯಲ್ಲಿ ಕ್ರಿಶ್ಚನ್ ಯೂನಿಯನ್ ಪುತ್ತೂರು ಉಪಾಧ್ಯಕ್ಷ ಜೋನ್ ಕೆನ್ಯೂಟ್ ಮಸ್ಕರೇನ್ಹಸ್, ಸದಸ್ಯರಾದ ವಿನ್ಸೆಂಟ್ ತಾವ್ರೋ, ಅರುಣ್ ಪಿಂಟೋ, ರೋಶನ್ ಲಸ್ರಾದೋ ಉಪಸ್ಥಿತರಿದ್ದರು.








