




ನವದೆಹಲಿ: ಯುಎಸ್ ಸುಂಕ ಸಮರದ ನಡುವೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಕುಟುಂಬ ಸಮೇತರಾಗಿ ಇಂದು ಭಾರತಕ್ಕೆ ಬಂದಿಳಿದಿದ್ದಾರೆ. ಅಮೆರಿಕದ ಅಧ್ಯಕ್ಷರಾಗಿ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಅಮೆರಿಕ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ಭಾರತಕ್ಕೆ ನೀಡುತ್ತಿರುವ ಮೊದಲ ಭೇಟಿ ಇದಾಗಿದೆ.
ಜೆ.ಡಿ ವ್ಯಾನ್ಸ್, ಪತ್ನಿ ಉಷಾ ವ್ಯಾನ್ಸ್ ಹಾಗೂ ಮೂವರು ಮಕ್ಕಳಾದ ಇವಾನ್, ವಿವೇಕ್ ಮತ್ತು ಮಿರಾಬೆಲ್ ಇಂದು ಬೆಳಗ್ಗೆ 10 ಗಂಟೆಗೆ ದೆಹಲಿಯ ಪಾಲಂ ಏರ್‌ಪೋರ್ಟ್‌ಗೆ ಬಂದಿಳಿದಿದ್ದು, ಇಂದಿನಿಂದ ನಾಲ್ಕು ದಿನಗಳ ಕಾಲ ಭಾರತ ಪ್ರವಾಸ ಮಾಡಲಿದ್ದಾರೆ.
ಪಾಲಂ ಏರ್‌ಪೋರ್ಟ್‌ನಲ್ಲಿ ಕೇಂದ್ರದ ಹಿರಿಯ ಸಚಿವರು ವ್ಯಾನ್ಸ್ ಕುಟುಂಬವನ್ನು ರಾಜಸ್ಥಾನಿ ಶೈಲಿಯಲ್ಲಿ ಸ್ವಾಗತಿಸಿದರು. ಬಳಿಕ ದೆಹಲಿಯ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ವ್ಯಾನ್ಸ್ ಕುಟುಂಬವು ಹಾರ ಹಾಕಿಕೊಂಡು ಪೋಸ್ ನೀಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ದೆಹಲಿ ನಂತರ ಜೈಪುರ ಹಾಗೂ ಆಗ್ರಾಕ್ಕೆ ವ್ಯಾನ್ಸ್ ಕುಟುಂಬ ಭೇಟಿ ನೀಡಲಿದೆ.
ಇಂದು ಸಂಜೆ 6:30ರ ಸುಮಾರಿಗೆ ಜೆಡಿ ವ್ಯಾನ್ಸ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಭಾರತ-ಯುಎಸ್ ದ್ವಿಪಕ್ಷೀಯ ಮಾತುಕತೆ ನಡೆಯಲಿದ್ದು, ವ್ಯಾಪಾರ ಒಪ್ಪಂದಗಳ ಕುರಿತು ಮಾತುಕತೆ ನಡೆಸಲಿದ್ದಾರೆ. ಜೊತೆಗೆ ಇದೇ ವೇಳೆ ಭಾರತದ ಮೇಲಿನ ಸುಂಕದ ಬಗ್ಗೆಯೂ ಚರ್ಚೆ ನಡೆಯಲಿದೆ. ಮಾತುಕತೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ವ್ಯಾನ್ಸ್ ಕುಟುಂಬ ಮತ್ತು ಅವರ ಜೊತೆಗಿರುವ ಅಮೆರಿಕದ ಅಧಿಕಾರಿಗಳಿಗೆ ವಿಶೇಷ ಔತಣಕೂಟ ಆಯೋಜಿಸಿದ್ದಾರೆ.
ನಾಳೆ ಕೈಗಾರಿಕಾ ನಾಯಕರು, ಶಿಕ್ಷಣ ತಜ್ಞರು, ರಾಜತಾಂತ್ರಿಕರು, ವಿದೇಶಾಂಗ ನೀತಿ ತಜ್ಞರು ಮತ್ತು ಭಾರತೀಯ ಸರ್ಕಾರಿ ಅಧಿಕಾರಿಗಳೊಂದಿಗೆ ವ್ಯಾನ್ಸ್ ಸಭೆ ನಡೆಸಲಿದ್ದಾರೆ.