Sunday, June 29, 2025
spot_imgspot_img
spot_imgspot_img

ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ; ಪ್ರಕರಣ ರದ್ದಿಗೆ ಸೋನು ನಿಗಂ ಮನವಿ

- Advertisement -
- Advertisement -

ಮುಂಬೈ: ಕನ್ನಡದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಘಟನೆಗೆ ಸಂಬಂಧಿಸಿದಂತೆ ಖ್ಯಾತ ಗಾಯಕ ಸೋನು ನಿಗಂ ವಿರುದ್ಧ ದೂರು ದಾಖಲಾಗಿತ್ತು. ಜೊತೆಗೆ ಪೊಲೀಸರು ಸೋನು ನಿಗಂಗೆ ನೊಟೀಸ್ ಕಳಿಸಿ, ನೋಟೀಸ್‌ಗೆ ಉತ್ತರ ನೀಡುವಂತೆ ಸೂಚಿಸಿದ್ದರು. ಆದರೆ ಇದೀಗ ಸೋನು ನಿಗಂ ಅವರು ತಮ್ಮ ವಿರುದ್ಧ ದಾಖಲಾಗಿರುವ ದೂರನ್ನು ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದಾರೆ.

ಕೆಲ ದಿನಗಳ ಹಿಂದೆ ಬೆಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ಲೈವ್ ಶೋ ಮಾಡುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿಕೊಂಡಿದ್ದಾನೆ. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನು ಹಾಡಿರುತ್ತೇನೆ ಎಂದಿದ್ದಾರೆ.

ಆದರೆ ಆ ಬಳಿಕ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ವಿವಾದಾತ್ಮಕವಾಗಿ ಹೇಳಿಕೆ ನೀಡಿ ಅನಾವಶ್ಯಕವಾಗಿ ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದರು.

ಸೋನು ನಿಗಂ ಅವರ ಈ ಹೇಳಿಕೆ ವಿರುದ್ಧ ಹಲವು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಫಿಲಂ ಚೇಂಬರ್ ಸಹ ಈ ಬಗ್ಗೆ ಸಭೆ ನಡೆಸಿ ತಾವು ಸೋನು ನಿಗಂ ವಿರುದ್ಧ ಅಸಹಕಾರ ಪ್ರದರ್ಶಿಸುವುದಾಗಿ ಹೇಳಿತು. ಜೊತೆಗೆ ಪೊಲೀಸ್ ಠಾಣೆಯಲ್ಲಿ ಸೋನು ನಿಗಂ ವಿರುದ್ಧ ದೂರು ದಾಖಲಿಸಿದ್ದವು. ದೂರು ಸ್ವೀಕರಿಸಿದ್ದ ಪೊಲೀಸರು ಇ-ಮೇಲ್ ಮೂಲಕ ಸೋನು ನಿಗಂಗೆ ನೊಟೀಸ್ ಕಳಿಸಿದ್ದು, ನೊಟೀಸ್‌ಗೆ ಉತ್ತರಿಸಲು ಏಳು ದಿನ ಗಡುವು ನೀಡಿದ್ದರು. ಇನ್ನು ಈ ನೋಟೀಸ್‌ಗೆ ಗಾಯಕ ಉತ್ತರಿಸದ ಹಿನ್ನೆಲೆ ಎರಡನೇ ನೊಟೀಸ್ ಕಳಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.

ಇನ್ನು ಪ್ರಕರಣ ಗಂಭೀರ ಸ್ವರೂಪ ಪಡೆಯುತ್ತಿದ್ದಂತೆ ಸೋನು ನಿಗಂ ಕನ್ನಡಿಗರಲ್ಲಿ ಕ್ಷಮೆಯಾಚಿಸಿದ್ದರು. ಇದೀಗ ಸೋನು ನಿಗಂ ತಮ್ಮ ಮೇಲೆ ದಾಖಲಾಗಿರುವ ಪ್ರಕರಣವನ್ನು ರದ್ದು ಮಾಡಬೇಕು ಎಂದು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇನ್ನು ಗಾಯಕ ಸೋನು ನಿಗಂ ಅರ್ಜಿಯ ವಿಚಾರಣೆ ಶೀಘ್ರ ನಡೆಯಲಿದೆ ಎಂದು ತಿಳಿದುಬಂದಿದೆ.

- Advertisement -

Related news

error: Content is protected !!