Thursday, July 3, 2025
spot_imgspot_img
spot_imgspot_img

ವರ್ಷಧಾರೆಯ ನಡುವೆ ಶಾಲಾ ವರ್ಷಾರಂಭದ ಹರ್ಷ

- Advertisement -
- Advertisement -

🖊️ರಾಧಾಕೃಷ್ಣ ಎರುಂಬು

ಬೇಸಗೆಯ ಸುಡು ಬಿಸಿಲ ನಡುವೆ ಪರೀಕ್ಷೆಯೆಂಬ ತಲೆ ಬಿಸಿಯ ಉಸಿರು ಮಾಸಲು ಬಂದಿರುವ ಬೆಸುಗೆಯ ರಜಾದ ಮಜಾ ಹಲವರಿಗೆ ಕೆಲವು ಬಗೆ. ಅಜ್ಜ-ಅಜ್ಜಿಯರ, ನೆಂಟರಿಷ್ಟರ ಮನೆಗೆ ತೆರಳಿ ದಿನ ಹಲವು ಕಳೆಯುವುದು ಹಳೆಯ ಕಥೆ. ಆದರೂ ಇನ್ನೂ ಮಾಸದ ನಮ್ಮ ಅನುಭವಗಳು ಇಂದಿನ ಮುಗ್ಧ ಮನಸಿಗಿಲ್ಲ. ನಮ್ಮದೋ, ನೆರೆಮನೆಯದೋ ಅಂಗಳ, ಟಿವಿ, ಮೊಬೈಲ್, ಶಿಬಿರ, ಮದುವೆ, ಪಾರ್ಟಿ ಇಷ್ಟರಲ್ಲೇ ನಮ್ಮ ಮಕ್ಕಳ ರಜದ ಮಜಾ. ಮೊನ್ನೆಯಷ್ಟೇ ರಜಾ ಶುರುವಾದದ್ದು ಎಂಬ ದೀರ್ಘ ಉದ್ಘಾರ ಮುಗಿವಾಗಲೇ ಶುರುವಾದದ್ದು ಮಳೆ. ವಿಪರೀತ ಸೆಕೆಯ ನಡುವೆ ಬಂದ ಹನಿ ಹನಿ ನೀರು ಪರಿಸರದ ಜೊತೆ ಮನಸ್ಸನ್ನು ಬದಲಿಸಿತ್ತಲ್ಲ. ದೂರದ ಗಡಿಯಲ್ಲಿ ಅಚಾನಕ್ಕಾಗಿ ನಡೆದ ದುರಂತ ದೂರ ಪಯಣವನ್ನು ನಿಲ್ಲಿಸಿದ್ದರಿಂದ ಮಕ್ಕಳಿಗಂತೂ ಮನೆಯೇ ಜೈಲಾಯಿತು.

ಹೇಗೋ ಎರಡು ತಿಂಗಳಿದ್ದ ಧೀರ್ಘ ರಜೆ.. ಕಿರಿದಾಗಿ ಮತ್ತೆ ಶಾಲಾ ದಿನಚರಿ ಆರಂಭದ ಕ್ಷಣ. ಮುಗಿಲೇರಿ ವರ್ಷ ಧಾರೆ ಈ ಬಾರಿ ಶಾಲಾ ದಿನವನ್ನು ಇನ್ನಷ್ಟು ಹತ್ತಿರ ತಂದಿದೆ. ಮುಂದಿನ ವರ್ಷದ ತಮ್ಮ ಮಗುವಿಗೊಪ್ಪುವ ಶಾಲೆ, ಶುಲ್ಕ, ಸಮವಸ್ತ್ರ, ಪುಸ್ತಕ ಇವೆಲ್ಲವುಗಳ ಆಯ್ಕೆಯಲ್ಲಿ ಹೈರಾಣಾದ ಪೋಷಕರ ಗಂಟಲ ತುತ್ತು ಇಂದು ಹೊಟ್ಟೆ ಸೇರಲಿದೆ. ಅಬ್ಬಬ್ಬಾ ಎಂದರೂ ದುಡಿತದ ಗರಿಷ್ಠ ಸಂಪಾದನೆ ತನ್ನ ಮಗುವಿನ ಶಾಲಾ ಹರ್ಷತೆಗೆ ಧಾರೆಯೆರೆಯುತ್ತಾನೆ. ಹೊಟ್ಟೆಗಿಲ್ಲದಿದ್ದರೂ ಪರವಾಗಿಲ್ಲ ಶಾಲೆಯಲ್ಲಿ ಇತರ ಮಗುವಿಗಿಂತ ತನ್ನ ಮಗು ಕಡಿಮೆಯಾಗಬಾರದೆಂಬ ತುಡಿತ. ತಪ್ಪಲ್ಲ, ಆದರೂ 25 ವರ್ಷಗಳ ಹಿಂದಿನ 47.75 ಪೈಸೆಯ ಶಾಲಾ ಶುಲ್ಕ, ಹೊಸದಾಗಿ ಹೊಲಿಸಿ ಸೋಮವಾರದ ದಿನ ಮಾತ್ರ ಹಾಕುತಿದ್ದ ನೀಲಿಬಿಳಿ ಸಮವಸ್ತ್ರ ಹೊಸದಾಗಿ ತೆಗೆದುಕೊಂಡ ನೀಲಿ ಬಣ್ಣದ ಸ್ಲಿಪ್ಪರ್, ಸಾಲುಗಟ್ಟಿ ಪೇಟೆಯ ಪುಸ್ತಕದಂಗಡಿಯಲ್ಲಿ ನಿಂತು ಪಡೆದ ಬರೆಯುವ ಪುಸ್ತಕ, ಹೊಸ ನಟರಾಜ ಪೆನ್ಸಿಲು, ಪದೇ ಪದೇ ಶಾಯಿ ತುಂಬಿಸುವ ಪೆನ್ನು, ಬೆನ್ನಿಗೇರಿಸುತ್ತಿದ್ದ ಸಪೂರ ನೈಲಾನ್ ಹಗ್ಗದ ಚೀಲಗಳ ಪರಿಮಳ ಇನ್ನೂ ಮಾಸದೆ ಉಳಿದ ಅಹ್ಲಾದಕರ ನೆನಪು ಖಂಡಿತ ಇಂದಿನ ಮಕ್ಕಳಿಗಿರಲಿಕ್ಕಿಲ್ಲ. ದಿನ ಸೂಟ್ ಬೂಟ್, ಟೈ ಕಟ್ಟಿಕೊಂಡು, ಕೈಯಲ್ಲಿ ವಾಟರ್ ಕ್ಯಾನ್, ಟಿಫಿನ್ ಬಾಕ್ಸ್ ಹಿಡಿದು ಮಾರುದ್ಧದಲ್ಲಿ ಶಾಲೆಯಿದ್ದರೂ ಸ್ಕೂಲ್ ಬಸ್‌ಗೆ ಕಾಯುತ್ತಾ, ರಸ್ತೆವರೆಗೆ ಪೋಷಕರು, ಮತ್ತೆ ವಾಹನ ನಿರ್ವಾಹಕರು ಹೆಗಲೇರಿಸುವ ಸಾವಿರ ಬೆಲೆಯ ಚೀಲ, ಪುಸ್ತಕಗಳಿದ್ದರೂ ಮಗುವಿಗೆ ಇವೆಲ್ಲ ಇಂದು ಯಾತ್ರಿಕತೆಯೇ ಹೌದು. ಯಾಕೆಂದರೆ ಅವೆಲ್ಲವೂ ಅವರಿಗೆ ಸಾಮಾನ್ಯವೇ. ಆ ಎಲ್ಲವೂ ಪೋಷಕರ ಆಯ್ಕೆಯೇ ಅಲ್ಲದೆ ಮಗುವಿನದ್ದಲ್ಲ. ಸರಕಾರ ಮಕ್ಕಳಿಗೆ ಸಂತಸ ತರಲಿ ಪೋಷಕರಿಗೆ ಹೊರೆಯಾಗದಿರಲೆಂದು ಶಾಲಾ ಸಮವಸ್ತ್ರ, ಪುಸ್ತಕ, ಬಿಸಿಯೂಟ, ಪಾಯಸ ಕೊಟ್ಟು ಸಂಭ್ರಮದ ಪ್ರಾರಂಭೋತ್ಸವದ ವ್ಯವಸ್ಥೆ ಮಾಡಿ ಸಂತಸವನ್ನು ಒತ್ತಾಯವಾಗಿ ನೀಡುವ ಪ್ರಯತ್ನ ಮಾಡಿ ಸಫಲತೆ ಕಂಡಿದೆ.

ಮಕ್ಕಳೇ ಹೇಗಿದ್ದೀರಿ? ರಜೆ ಗಮ್ಮತ್ತ ಎಂದು ತವಕದಿಂದ ಕೇಳುವ ಶಿಕ್ಷಕ ವೃಂದ ಕಾತರದಿಂದ ರಜದ ಬಿಡುವಿನ ದಿನಗಳನ್ನು ಅನುಭವಿಸಿ ಬದಿಗೆ ದೂಡಿ ಭಾರವಾದ ಹೆಜ್ಜೆಗಳೊಂದಿಗೆ ಒತ್ತಡಗಳ ಸುಳಿಯೊಳಗೆ ಬೀಳಲು ಸಮವಸ್ತ್ರದೊಂದಿಗೆ ಸಜ್ಜಾಗಿದ್ದಾರೆ.

ಕಟ್ಟಡದ ಶುಚಿತ್ವಕ್ಕೆಂದೆ ದಿನವಿರಿಸಿದ ಶಾಲಾ ಸ್ವಚ್ಛತಾ ದಿನ ಪೂರ್ಣವಾಗಿ ಇಂದು ಆರಂಭೋತ್ಸವ. ಮುಗ್ದ ಹಸುಳೆಗಳ ಕಿರುಚಾಟ, ಪೋಷಕರ ತವಕ, ಹಿರಿಯ ಮಕ್ಕಳ ರಜದ ಮಜದ ಹಂಚುವಿಕೆ, ಶಾಲಾ ಬಸ್ಸುಗಳ ಓಡಾಟ ಮತ್ತೆ ಶುರು. ಮಗುವಿಲ್ಲದ ಶಾಲೆ ನೀರಿಲ್ಲದ ಕೆರೆಯಂತೆ. ಬರಿದಾದ ಶಾಲಾ ಕೊಠಡಿ ಇಂದು ಸಂತಸ ಪಡುತ್ತಿದೆ. ಮತ್ತೆ ಮನೆಯೊಳಗೆ ಮನೆಯೊಡೆಯ ಬರುವ ಸಂಭ್ರಮ. ಆದರೆ ಈ ಬಾರಿ ವರ್ಷಧಾರೆ ಮಗುವಿನ ಹರ್ಷಕ್ಕೆ ಮುನ್ನುಡಿ ಮೊದಲೇ ಬರೆದು ಸಿದ್ದವಾಯಿತು. ಮುಗಿಲೇರಿದ ಶಾಲಾರಂಭದ ನಗುವಿಗೆ ಕಾರ್ಮುಗಿಲು ಬಾನಂಗಳದಲ್ಲಿ ತೋರಣ ಕಟ್ಟಿದೆ.. ಶಾಲೆಯು ಮಳೆಯ ರಜೆಗೆ ಅಣಿಯಾಗುತಿದೆಯೋ… ಎನ್ನುವಷ್ಟರಲ್ಲಿ ರಜೆ ಸಿಕ್ಕೇ ಬಿಡ್ತು. ಇರಲಿ ನಾಳೆಯಾದರೂ ಆರಂಭೋತ್ಸವದ ಸಂಭ್ರಮವಿದೆ. ಮುದ್ದು ಮಕ್ಕಳೇ ” ಮಳೆಯಾರ ಬಂದೈತಿ… ಹೊಳೆಯಾರ ತುಂಬೈತಿ…. ಜೋಕೆ. ಶಾಲಾರಂಭ ಹರ್ಷ ತರಲಿ.

🖊️ರಾಧಾಕೃಷ್ಣ ಎರುಂಬು

- Advertisement -

Related news

error: Content is protected !!