


ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ತಂದು ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆಯ ಪರಿಸರದಲ್ಲಿ ಮಾರಾಟ ಮಾಡುತ್ತಿದ್ದ ಕುಖ್ಯಾತ ದನಕಳ್ಳನನ್ನು ಮಂಗಳೂರು ಸಿಸಿಬಿ ಪೊಲೀಸರು ಸೆರೆ ಹಿಡಿದು 12.05 ಗ್ರಾಂ ಎಂಡಿಎಂಎ ಅನ್ನು ವಶಪಡಿಸಿಕೊಂಡಿರುತ್ತಾರೆ.
ಸೆರೆಯಾದ ಆರೋಪಿಯನ್ನು ಮಂಗಳೂರಿನ ಕಸಬಾ ಬೆಂಗ್ರೆಯ ಅಬ್ದುಲ್ ಕಬೀರ್ / ಪಾರಿವಾಳ ಕಬೀರ್(36) ಎಂದು ಗುರುತಿಸಲಾಗಿದೆ.
ಮಂಗಳೂರು ನಗರಕ್ಕೆ ಬೆಂಗಳೂರು/ಮುಂಬೈಯಿಂದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ ನ್ನು ತರಿಸಿಕೊಂಡು ಅದನ್ನು ಮಂಗಳೂರು ನಗರದ ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಬಿಳಿ ಬಣ್ಣದ ಸ್ವೀಪ್ಟ್ ಕಾರಿನಲ್ಲಿ ಮುಡಿಪು ಕಂಬಳ ಪದವು ಕೆಐಡಿಬಿ ರಸ್ತೆಯಲ್ಲಿ ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿಯನ್ನು ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಿನಾಂಕ: 03-07-2025 ರಂದು ಎಂಡಿಎಂಎ ಮಾದಕ ವಸ್ತುವನ್ನು ಹೊಂದಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಕಾರನ್ನು ಪತ್ತೆ ಹಚ್ಚಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ಆತನ ವಶದಿಂದ ರೂ. 1,20,000/- ಮೌಲ್ಯದ 12.05 ಗ್ರಾಂ ತೂಕದ ನಿಷೇದಿತ ಮಾದಕ ವಸ್ತುವಾದ ಎಂಡಿಎಂಎ, ಡಿಜಿಟಲ್ ತೂಕ ಮಾಪನ, ಮೊಬೈಲ್ ಫೋನ್, KA-25-MA-8950ನೇ ನಂಬ್ರದ ಬಿಳಿ ಬಣ್ಣದ ಸ್ವೀಪ್ಟ್ ಕಾರು ಸಹಿತ ಒಟ್ಟು ರೂ. 4,31,250/- ಮೌಲ್ಯದ ಸೊತ್ತುಗಳನ್ನು ವಶಪಡಿಸಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಅಬ್ದುಲ್ ಕಬೀರ್ / ಪಾರಿವಾಳ ಕಬೀರ್ ಎಂಬಾತನ ವಿರುದ್ದ ಮಂಗಳೂರು ನಗರದ ಪಣಂಬೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮಂಗಳೂರು ಪೂರ್ವ, ಕಂಕನಾಡಿ ನಗರ, ಉಳ್ಳಾಲ, ಬಜ್ಪೆ, ಹಾಗೂ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಉಪ್ಪಿನಂಗಡಿ ಪೊಲೀಸ್ ಠಾಣೆ, ಕೊಡಗು ಜಿಲ್ಲಾ ವ್ಯಾಪ್ತಿಯ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ 15 ಕ್ಕಿಂತ ಹೆಚ್ಚು ದನ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ನ್ಯಾಯಾಲಯಕ್ಕೆ ಹಾಜರಾಗದೇ ಸುಮಾರು 2 ವರ್ಷಗಳಿಂದ ತಲೆಮರೆಸಿಕೊಂಡಿದ್ದನು. ಆರೋಪಿಯ ಪತ್ತೆ ಕಾರ್ಯದಲ್ಲಿ ಸಿಸಿಬಿ ಘಟಕದ ಅಧಿಕಾರಿ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದರು ಎಂದು ಮೂಲಗಳು ತಿಳಿಸಿವೆ.