


ಮಂಗಳೂರು: ಉಳ್ಳಾಲದಿಂದ ಬಾಲಕಿಯೊಬ್ಬಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿ ದಂಪತಿ ಸಹಿತ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಅಪಹರಿಸಲು ಪ್ರಮುಖ ಆರೋಪಿಗೆ ದಂಪತಿ ನೆರವಾಗಿದ್ದರು ಎನ್ನಲಾಗಿದೆ.
16ರ ಹರೆಯದ ಮಗಳು ಮನೆಯಿಂದ ಹೊರ ಹೋದವಳು ನಂತರ ನಾಪತ್ತೆಯಾಗಿದ್ದು, ಆಕೆಯನ್ನು ಅಪಹರಿಸಿರುವುದಾಗಿ ಬಾಲಕಿಯ ತಂದೆ ಉಳ್ಳಾಲ ಠಾಣೆಗೆ ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿಯನ್ನು ಅಪಹರಿಸಿದ ಆರೋಪಿ ದೇರಳಕಟ್ಟೆ ಸಮೀಪದ ರೆಂಜಾಡಿ ನಿವಾಸಿ ಶಹಬಾಝ್ (27) ಹಾಗೂ ಆತನಿಗೆ ಸಹಕರಿಸಿದ ಕೊಣಾಜೆ ನಿವಾಸಿಗಳಾದ ಅಮೀರ್ ಸೊಹೆಲ್ ಮತ್ತು ಅವನ ಪತ್ನಿ ನಿಶಾಳನ್ನು ಬಂಧಿಸಿದ್ದಾರೆ.
ಜುಲೈ 5ರಂದು ಸಂಜೆ 4 ಗಂಟೆಗೆ ಉಳ್ಳಾಲ ಠಾಣಾ ವ್ಯಾಪ್ತಿಯ ಬಾಡಿಗೆಯ ಮನೆಯಲ್ಲಿ ನೆಲೆಸಿದ್ದ ಬಾಲಕಿ ಮನೆಯಿಂದ ಹೊರ ಹೋದವಳು ಹಿಂತಿರುಗಿರಲಿಲ್ಲ. ಈ ಬಗ್ಗೆ ಬಾಲಕಿಯ ತಂದೆ ಉಳ್ಳಾಲ ಠಾಣೆಯಲ್ಲಿ ದೂರು ನೀಡಿದರು. ತನಿಖೆ ನಡೆಸಿದ ಉಳ್ಳಾಲ ಪೊಲೀಸರು ಬಾಲಕಿ ಮತ್ತು ಆಕೆಯನ್ನು ಅಪಹರಿಸಿದ್ದ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.