


ಸಿದ್ದರಾಮಯ್ಯನವರ ಸರಕಾರ ಕೊಟ್ಟ ಅನ್ನಭಾಗ್ಯ ಯೋಜನೆಗೆ ಕಾಂಗ್ರೆಸ್ ಸರಕಾರವೇ ಕನ್ನ ಹಾಕುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದ್ದಾರೆ.
ಇಂದು ಇಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿದ್ದರು. ಅದನ್ನು 5 ಕೆಜಿಗೆ ಇಳಿಸಿದರು. ಈಗ ಅದನ್ನೂ ನಿಲ್ಲಿಸುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕರ್ನಾಟಕ ರಾಜ್ಯವು ಇವತ್ತು ಆರ್ಥಿಕ ದಿವಾಳಿಯತ್ತ ಸಾಗುತ್ತಿದೆ ಎಂದು ಅವರು ವಿಶ್ಲೇಷಿಸಿದರು.
ರಾಜ್ಯ ಸರಕಾರ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹಣ ಕ್ರೋಡೀಕರಿಸಲು ಸಾಧ್ಯವಾಗುತ್ತಿಲ್ಲ. ಸರಕಾರಿ ನೌಕರರಿಗೆ ಸಂಬಳ ಕೊಡಲು ಕೂಡ ಸರಕಾರ ಪರದಾಡುತ್ತಿದೆ. ಅಭಿವೃದ್ಧಿಗೆ ಹಣ ಸಿಗದೆ ಆಡಳಿತ ಪಕ್ಷದ ಶಾಸಕರೇ ಬೀದಿಗಿಳಿಯುವ ಹಾಗೂ ಹೋರಾಟ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ವಿವರಿಸಿದರು.ಒಂದು ಕಡೆ ರಾಜ್ಯ ಸರಕಾರ, ಮುಖ್ಯಮಂತ್ರಿಗಳು, ಅವರ ಸಚಿವ ಸಂಪುಟವು ಕೊಟ್ಟಂಥ ಭರವಸೆ ಈಡೇರಿಸಿದ್ದಾಗಿ ಅವರಿಗೆ ಅವರೇ ಶಹಬ್ಬಾಸ್‍ಗಿರಿ ಕೊಡುತ್ತಿದ್ದಾರೆ. ಆದರೆ, ವಾಸ್ತವಿಕ ಸತ್ಯ ಏನೆಂದರೆ ಇವತ್ತು ಮಹಾನಗರ ಪಾಲಿಕೆ ವಿಚಾರದಲ್ಲಿ ಬೀದಿಗಿಳಿದು ಹೋರಾಟ ನಡೆಸುತ್ತಿದ್ದಾರೆ. ಲಾರಿ ಮಾಲೀಕರಿಗೆ ಮೂರ್ನಾಲ್ಕು ತಿಂಗಳಿಂದ ಬಾಡಿಗೆ ಕೊಡಲು ಸಾಧ್ಯವಾಗದೆ ಅವರು ಕೂಡ ಬೀದಿಗಿಳಿದು ಹೋರಾಟ ಪ್ರಾರಂಭಿಸಿದ್ದಾರೆ ಎಂದರು.