ವಿಟ್ಲ ಕನ್ಯಾನ ನಿವಾಸಿ ಸಹಿತ ಮೂವರು ಆರೋಪಿಗಳ ಬಂಧನ
ಖಲಂದರ್ ಶಾಫಿ ವಿರುದ್ಧ ವಿಟ್ಲ ಠಾಣೆಯಲ್ಲಿ ಎರಡು ಗಾಂಜಾ ಮತ್ತು ಕೊಲೆಯತ್ನ ಪ್ರಕರಣದ ಹಿನ್ನೆಲೆ.
ಪುತ್ತೂರು: ವಾಹನದಲ್ಲಿ ಗಾಂಜಾ ಸಾಗಾಟ ಮಾಡುತ್ತಿದ್ದ ಅಂತಾರಾಜ್ಯ ನಟೋರಿಯಸ್ ತಂಡವನ್ನು ಪತ್ತೆ ಹಚ್ಚಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬೆಳಿಗ್ಗೆ ಸಮಯ ಸುಮಾರು 06.30 ಗಂಟೆಗೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ತಮ್ಮ ಠಾಣಾ ಎಸೈ ಹಾಗೂ ಠಾಣಾ ಸಿಬ್ಬಂದಿಗಳೊಂದಿಗೆ ಬಂಟ್ವಾಳ ತಾಲೂಕು ಕೆದಿಲ ಗ್ರಾಮದ ಪಾಟ್ರಕೋಡಿ ಎಂಬಲ್ಲಿ ಪಿಕ್ ಆಪ್ ವಾಹನ ಮತ್ತು ಕಾರೊಂದರಲ್ಲಿ ಅಕ್ರಮವಾಗಿ ಅಪಾರ ಪ್ರಮಾಣದ ಗಾಂಜಾ ಸಾಗಾಟ ಮಾಡುತ್ತಿದ್ದಾಗ ದಾಳಿ ನಡೆಸಿ ರೂ 17,50,000 ಮೌಲ್ಯದ ಸುಮಾರು 175 ಕೆ.ಜಿ ಗಾಂಜಾ, ಪಿಕಪ್ ವಾಹನ ಹಾಗೂ ಕಾರು ಸಹಿತ ಒಟ್ಟು ರೂ 24,50,000 ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಕೇರಳದ ಮಿಜಾ ಮಂಜೇಶ್ವರ ನಿವಾಸಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು( 26), ಮಂಜೇಶ್ವರ ಹೊಸಂಗಡಿ ಮಿಜಿರ ಪಳ್ಳ ನಿವಾಸಿ ಮೊಹಮ್ಮದ್ ಶಫಿಕ್(31), ವಿಟ್ಲದ ಕನ್ಯಾನ ಗ್ರಾಮದ ಮಡಕುಂಜ ನಿವಾಸಿ ಖಲಂದರ್ ಶಾಫಿ(26) ಬಂಧಿತ ಆರೋಪಿಗಳು.
ಆರೋಪಿಗಳ ಪೈಕಿ ಇಬ್ರಾಹಿಂ ಯಾನೆ ಅರ್ಷದ್ ಯಾನೆ ಅಚ್ಚು ಎಂಬಾತನ ವಿರುದ್ದ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ 7 ಪ್ರಕರಣ, ಕುಂಬಳೆ ಠಾಣೆಯಲ್ಲಿ 2 ಪ್ರಕರಣ ಹಾಗೂ ಖಲಂದರ್ ಶಾಫಿ ಎಂಬಾತನ ವಿರುದ್ದ ವಿಟ್ಲ ಪೊಲೀಸ್ ಠಾಣೆಯಲ್ಲಿ 2 ಅಕ್ರಮ ಗಾಂಜಾ ಪ್ರಕರಣ ಹಾಗು 1 ಕೊಲೆ ಯತ್ನ ಪ್ರಕರಣ ಮತ್ತು ಕಾವೂರು ಠಾಣೆಯಲ್ಲಿ 1 ಅಕ್ರಮ ಗಾಂಜಾ ಸಾಗಾಟ ಪ್ರಕರಣ ದಾಖಲಾಗಿರುತ್ತದೆ.