


ಉಡುಪಿ: ಹಿಂಸಾತ್ಮಕವಾಗಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿರುವ ಸ್ಥಳಕ್ಕೆ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ, ಆಟಕ್ಕಾಗಿ ಬಳಸಿದ ಸಾವಿರಾರು ರೂ.ಗಳನ್ನು ವಶಪಡಿಸಿಕೊಂಡ ಘಟನೆ ಕೆಂಜೂರು ಗ್ರಾಮದ ಬಲ್ಲೆಬೈಲು ಎಂಬಲ್ಲಿ ನಡೆದಿದೆ.
ಕೆಂಜೂರು ಗ್ರಾಮದ ಬಲ್ಲೇಬೈಲು ಎಂಬಲ್ಲಿನ ಸರಕಾರಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಅಕ್ರಮವಾಗಿ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿದ್ದಾರೆಂದು ಬಂದ ಖಚಿತ ಮಾಹಿತಿಯಂತೆ ಬ್ರಹ್ಮಾವರ ಪೊಲೀಸರು ಸ್ಥಳಕ್ಕೆ ದಾಳಿ ನಡೆಸಿದ್ದರು.
ಸ್ಥಳದಲ್ಲಿ ಕೆಲವರು ಗುಂಪು ಸೇರಿ ಕೋಳಿಗಳ ಕಾಲಿಗೆ ಬಾಳ್ (ಕತ್ತಿ) ಕಟ್ಟಿ ಹಿಂಸ್ಮಾತಕವಾಗಿ ಅವುಗಳು ಕಾದಾಡು ವಂತೆ ಮಾಡಿ ಅವುಗಳ ಮೇಲೆ ಹಣವನ್ನು ಪಣವಾಗಿ ಕಟ್ಟುತ್ತಿರುವುದು ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದವರು ಕೋಳಿಗಳ ಕಾದಾಟವನ್ನು ನೋಡುತ್ತಾ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ಖಚಿತಪಡಿಸಿಕೊಂಡು ಬ್ರಹ್ಮಾವರ ಪೊಲೀಸರು ದಾಳಿ ಮಾಡಿದಾಗ ಪೊಲೀಸರನ್ನು ಕಂಡು ಜನರು ಓಡಿಹೋಗಿದ್ದು, ಕೆಲವರ ಸಹಾಯದಿಂದ ಓಡಿ ಹೋಗುತ್ತಿದ್ದವರ ಪೈಕಿ ಇಬ್ಬರನ್ನು ಹಿಡಿಯಲಾಯಿತು.
ಹಿಡಿದ ಇಬ್ಬರನ್ನು ವಿಚಾರಿಸಿದಾಗ ತಾವು ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದು, ಹೆಸರನ್ನು ಕೆಂಜೂರು ಗ್ರಾಮದ ಬಾರಾಳಿಯ ಪ್ರವೀಣ್ ಶೆಟ್ಟಿ(39), ಚಗರಿಬೆಟ್ಟಿನ ರಾಘವೇಂದ್ರ(35) ಎಂದು ತಿಳಿಸಿದ್ದರು. ಅವರಿಂದ ಆಟಕ್ಕೆ ಬಳಸಿದ ನಗದು 26,030ರೂ ಹಾಗೂ ಸ್ಥಳದಲ್ಲಿ ಜೂಜಿಗೆ ಕಟ್ಟಿದ 2 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಕಾಲಿಗೆ ಕಟ್ಟಿದ 2 ನೈಲಾನ್ ಹಗ್ಗವನ್ನು ವಶಪಡಿಸಿಕೊಳ್ಳ ಲಾಗಿದೆ. ದಿನೇಶ ಶೆಟ್ಟಿ, ಸುಂದರ ಶೆಟ್ಟಿ, ಸತೀಶ್ ಶೆಟ್ಟಿ ಬಲ್ಲೇಬೈಲು, ನಾಗರಾಜ, ಪ್ರಭಾಕರ ಹಾಗೂ ಇತರರು ಓಡಿಹೋಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.








