


ಸಿದ್ದಾಪುರ: ಸ್ವಿಫ್ಟ್ ಕಾರಿನ ಒಳಗೆ 3 ಗಂಡು ಕರುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಅಮಾಸೆಬೈಲು ಪೊಲೀಸರು ಬಂಧಿಸಿದ್ದು, ಕರುಗಳನ್ನು ರಕ್ಷಿಸಲಾಗಿದೆ.ಬಂಧಿತರು ಕಾರು ಚಾಲಕ ಕಂಡೂರು ನಿವಾಸಿ ಶಾಹೀದ್ ಕರಾಣಿ ಮತ್ತು ಆತನಿಗೆ ಮಾರ್ಗದರ್ಶಕನಾಗಿ ಬೈಕಿನಲ್ಲಿ ಸಾಗುತ್ತಿದ್ದ ಅಪ್ರಾಪ್ತ ವಯಸ್ಸಿನ ಬಾಲಕ ಎಂದು ತಿಳಿದು ಬಂದಿದೆ.ಅಮಾಸೆಬೈಲು ಗ್ರಾಮದ ಜಡ್ಡಿನಗದ್ದೆಯಿಂದ ಮಾಂಸಕ್ಕಾಗಿ ದನಗಳನ್ನು ಸಾಗಿಸುತ್ತಿರುವ ಕುರಿತು ಬಂದ ಖಚಿತ ಮಾಹಿತಿ ಆಧಾರದ ಮೇರೆಗೆ ಕಾರ್ಯಾಚರಣೆ ನಡೆಸಿದ ಪಿಎಸ್‌ಐ ಅಶೋಕ ಕುಮಾರ ಮತ್ತು ಸಿಬ್ಬಂದಿ ತಂಡನಡಂಬೂರು ಕ್ರಾಸ್ ಬಳಿ ಕಾರನ್ನು ತಡೆದು ನಿಲ್ಲಿಸಲು ಯತ್ನಿಸಿದರು. ಆದರೆ ಚಾಲಕನು ವೇಗವಾಗಿ ಕಾರನ್ನು ಚಲಾಯಿಸಿ ಪರಾರಿಯಾಗಲು ಯತ್ನಿಸಿದನು. ಕಾರನ್ನು ಬೆನ್ನಟ್ಟಿ ಬನ್ನೂರು ಬಳಿ ತಡೆದು ನಿಲ್ಲಿಸಿದಾಗ ಒಳಗೆ 3 ಗಂಡು ಕರುಗಳು ಇರುವುದು ಕಂಡು ಬಂದಿದೆ ಎಂದು ತಿಳಿದು ಬಂದಿದೆ.ಆರೋಪಿ ಚಾಲಕ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಾರಿನ ಮುಂದೆ ಮಾರ್ಗದರ್ಶಕನಾಗಿ ತನ್ನ ಪಲ್ಸರ್ ಬೈಕಿನಲ್ಲಿ ಸಾಗುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಂಡಾಗ ಆತ ಅಪ್ರಾಪ್ತ ವಯಸ್ಕನೆಂದು ತಿಳಿದುಬಂದಿದ್ದು ಆತನನ್ನು ನಿಟ್ಟೂರಿನಲ್ಲಿರುವ ಬಾಲ ನ್ಯಾಯಮಂಡಳಿಗೆ ಹಾಜರುಪಡಿಸಿದ್ದಾರೆ. ಆತ ಚಲಾಯಿಸುತ್ತಿದ್ದ ಬೈಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








