Thursday, June 4, 2026
spot_imgspot_img
spot_imgspot_img

ಕೆಮ್ಮಿನ ಸಿರಪ್ ಸೇವಿಸಿ 11 ಮಕ್ಕಳು ಸಾವು: 2 ವರ್ಷದೊಳಗಿನ ಮಕ್ಕಳಿಗೆ ಸಿರಪ್ ನೀಡದಂತೆ ಕೇಂದ್ರ ಆದೇಶ

- Advertisement -
- Advertisement -

ನವದೆಹಲಿ: ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದ ಛಿಂದ್‌ವಾರಾ ಜಿಲ್ಲೆಯಲ್ಲಿ 9 ಮಕ್ಕಳು ಮತ್ತು ರಾಜಸ್ಥಾನದ ಭರತ್ ಹಾಗೂ ಸಿಕರ್‌ನಲ್ಲಿ 2 ಮಕ್ಕಳು ಸೇರಿ ಒಟ್ಟು 11 ಮಕ್ಕಳು ಮೃತಪಟ್ಟಿದ್ದು, ಈ ಘಟನೆ ದೇಶಾದ್ಯಂತ ಆತಂಕ ಸೃಷ್ಟಿಸಿದೆ.

ಈ ಘಟನೆಗಳ ಬೆನ್ನಲ್ಲೇ ರಾಜಸ್ಥಾನ ಸರ್ಕಾರವು ಕೇಸನ್ಸ್ ಫಾರ್ಮಾ ಕಂಪನಿಯ 19 ಔಷಧಿಗಳ ಮಾರಾಟ ಮತ್ತು ವಿತರಣೆಯನ್ನು ಸ್ಥಗಿತಗೊಳಿಸಿದೆ. ಅಲ್ಲದೆ, ರಾಜಸ್ಥಾನದ ಔಷಧ ನಿಯಂತ್ರಕರಾದ ರಾಜಾರಾಮ್ ಶರ್ಮಾ ಅವರನ್ನು ಅಮಾನತುಗೊಳಿಸಿದೆ. ಕೋಲ್ಡ್ರಿಫ್ ಮತ್ತು ನೆಕ್ಸ್ಟ್ರೋ-ಡಿಎಸ್ ಎಂಬ ಎರಡು ಕೆಮ್ಮಿನ ಸಿರಪ್‌ಗಳು ಮಕ್ಕಳ ಸಾವಿಗೆ ಕಾರಣವಾಗಿವೆ ಎಂದು ಹೇಳಲಾಗಿದೆ.

ಈ ಸಿರಪ್‌ಗಳನ್ನು ಸೇವಿಸಿದ ನಂತರ ಮಕ್ಕಳು ಚೇತರಿಸಿಕೊಳ್ಳುತ್ತಿರುವಂತೆ ತೋರುತ್ತಿತ್ತು. ಆದರೆ ಕೆಲವೇ ದಿನಗಳಲ್ಲಿ ಮತ್ತೆ ರೋಗ ಲಕ್ಷಣಗಳು ಮರಳಿದವು. ನಂತರ ಮೂತ್ರ ವಿಸರ್ಜನೆಯಲ್ಲಿ ಹಠಾತ್ ಇಳಿಕೆ ಕಂಡುಬಂದಿತು. ಮಕ್ಕಳ ಸ್ಥಿತಿಯು ಬೇಗನೆ ಹದಗೆಟ್ಟು ದೇಹದಲ್ಲಿ ಊತ ಕಾಣಿಸಿಕೊಂಡು, ಕಿಡ್ನಿ ವೈಫಲ್ಯಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಕೆಮ್ಮು, ಶೀತ ಇದ್ದರೆ ಪೋಷಕರು ವೈದ್ಯರ ಸಲಹೆಯಂತೆ ಸಿರಪ್‌ಗಳನ್ನು ನೀಡುವುದು ಸಹಜ. ಈ ಘಟನೆ ಪೋಷಕರಲ್ಲಿ ಭಯ ಹುಟ್ಟಿಸಿದೆ. ಈ ಘಟನೆಗಳ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಇಲಾಖೆ ತೀವ್ರ ಎಚ್ಚರಿಕೆ ವಹಿಸಿದೆ. ಎರಡು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಸಿರಪ್ ನೀಡದಂತೆ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದೆ.

ಇನ್ನು ಐದು ವರ್ಷದೊಳಗಿನ ಮಕ್ಕಳಿಗೆ ಕೆಮ್ಮು ಮತ್ತು ಶೀತಕ್ಕೆ ಸಾಮಾನ್ಯವಾಗಿ ಸಿರಪ್‌ಗಳ ಅಗತ್ಯ ಇರುವುದಿಲ್ಲ. ತೀರಾ ಅಗತ್ಯವಿದ್ದರೆ ಮಾತ್ರ ವೈದ್ಯರ ಸಲಹೆಯಂತೆ ಸೂಕ್ತ ಪ್ರಮಾಣದಲ್ಲಿ ನೀಡಬೇಕು ಎಂದು ನಿರ್ದೇಶನ ನೀಡಲಾಗಿದೆ.

- Advertisement -

Related news

error: Content is protected !!