Tuesday, July 21, 2026
spot_imgspot_img
spot_imgspot_img

ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡ ಪ್ರಸ್ತುತ ಪಡಿಸುವ “ಗೆಜ್ಜೆನಾದ-ಸೀಸನ್ 2 ” ಕಾರ್ಯಕ್ರಮದ ಬಗ್ಗೆ ಪತ್ರಿಕಾಗೋಷ್ಠಿ

- Advertisement -
- Advertisement -

ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡ ಧರ್ಮನಗರ ಕಂಬಳಬೆಟ್ಟು ಪ್ರಸ್ತುತ ಪಡಿಸುವ “ಗೆಜ್ಜೆನಾದ-ಸೀಸನ್ 2 ” ಏಕವ್ಯಕ್ತಿ ನೃತ್ಯ ಸ್ಪರ್ಧೆ ನವೆಂಬರ್ 02ನೇ ಆದಿತ್ಯವಾರ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ ನಡೆಯಲಿದ್ದು ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಯಿತು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಲಾತಪಸ್ವಿ ಸಾಂಸ್ಕೃತಿಕ ತಂಡ ನಿರ್ದೇಶಕ ಜೈದೀಪ್ ಅಮೈ “ಕಲೆ ಎನ್ನುವಂತದ್ದು ಯಾರಿಗೂ ಕೂಡ ಸುಲಭವಾಗಿ ಒಲಿಯುವಂತದ್ದಲ್ಲ.ಕಲೆ ಎನ್ನುವಂತದ್ದನ್ನು ಒಲಿಸಿಕೊಳ್ಳಬೇಕಾದಲ್ಲಿ ತಪಸ್ಸು ಮಾಡಲೇಬೇಕು. ಕಲೆಯನ್ನು ತಪಸ್ಸಿನ ಮೂಲಕ ಒಲಿಸಿಕೊಂಡ ಅದೆಷ್ಟೋ ಕಲಾವಿದರು ನಮ್ಮ ಮುಂದಿದ್ದಾರೆ. ಅಂತವರಿಗೊಂದು ವೇದಿಕೆಯನ್ನು ಕಲ್ಪಿಸಿಕೊಡಬೇಕು ಎನ್ನುವ ದ್ಯೇಯೋದ್ದೇಶದಿಂದ ಕಳೆದ ಮೂರು ವರ್ಷಗಳ ಹಿಂದೆ ಆರಂಭವಾದ ತಂಡವೇ ನಮ್ಮ ಕಲಾತಪಸ್ವಿ ಸಾಂಸ್ಕೃತಿಕ ತಂಡ. ಕಳೆದ ಮೂರು ವರ್ಷಗಳಿಂದ ಸುಮಾರು 50ಕ್ಕೂ ವಿಭಿನ್ನ ಕಾರ್ಯಕ್ರಮಗಳೊಂದಿಗೆ ಕರಾವಳಿ ಕರ್ನಾಟಕದಾದ್ಯಂತ ಪ್ರಶಂಸೆಯನ್ನು ನಮ್ಮ ತಂಡ ಪಡೆದಿರುತ್ತದೆ. ಸುಮಾರು 30ಕ್ಕಿಂತ ಹೆಚ್ಚು ಸದಸ್ಯರು ನಮ್ಮ ತಂಡದಲ್ಲಿದ್ದಾರೆ. ಹಲವಾರು ವೇದಿಕೆಗಳಲ್ಲಿ ನೃತ್ಯ ಸಂಗೀತ, ನಾಟಕ ಹೀಗೆ ಎಲ್ಲಾ ಪ್ರಕಾರದ ಸಾಂಸ್ಕೃತಿಕ ವೈಭವಗಳನ್ನು ಪ್ರದರ್ಶಿಸಿ, ತನ್ನದೇ ವಿಶೇಷ ಶೈಲಿಯೊಂದಿಗೆ ಜನಮನ್ನಣೆಯನ್ನು ತಂಡ ಪಡೆದಿರುತ್ತದೆ. ಕೇವಲ ಕಾರ್ಯಕ್ರಮವನ್ನು ನೀಡುವುದು ಮಾತ್ರವಲ್ಲದೆ ಕಷ್ಟದಲ್ಲಿರುವವರಿಗೆ ನೆರವಾಗುವ ದೃಷ್ಟಿಯಲ್ಲಿ 1,00,000ಕ್ಕೂ ಮಿಕ್ಕಿದ ಮೊತ್ತದ ಸೇವಾನಿಧಿಯನ್ನು ತಂಡ ನೀಡಿರುತ್ತದೆ. ಹಾಗೆಯೇ 15 ಕ್ಕೂ ಹೆಚ್ಚು ವಿವಿಧ ಬಗೆಯ ಆನ್ಲೈನ್ ಸ್ಪರ್ಧೆಗಳನ್ನು ಯಶಸ್ವಿಯಾಗಿ ನಡೆಸಿದ್ದೇವೆ. ಕಳೆದ ಜನವರಿ ತಿಂಗಳಲ್ಲಿ ಕಲಾತಪಸ್ವಿ ಸಾಂಸ್ಕೃತಿಕ ತಂಡವು ವಿನೂತನ ಶೈಲಿಯೊಂದಿಗೆ ಹೆಜ್ಜೆ ಹಾಕಲು ಮುಂದೆ ಬಂದು ಸಾಂಸ್ಕೃತಿಕ ರಂಗದಲ್ಲಿ ವಿಭಿನ್ನತೆಯನ್ನು ಸಾರುವ ದೃಷ್ಟಿಯಲ್ಲಿ ಗೆಜ್ಜೆನಾದ ನಾಮಾಂಕಿತ ಏಕವ್ಯಕ್ತಿ ನೃತ್ಯ ಸ್ಪರ್ಧೆಯನ್ನು ಆಯೋಜಿಸಿ ಯಶಸ್ವಿಯಾಗಿತ್ತು ಎಂದು ಹೇಳಿದರು.

ಈಗ ಅದೇ ಯಶಸ್ಸಿನ ಮುಂದುವರಿದ ಭಾಗವಾಗಿ ನವೆಂಬರ್ 02ನೇ ಆದಿತ್ಯವಾರ ವಿಠಲ ಪದವಿಪೂರ್ವ ಕಾಲೇಜಿನ ಸುವರ್ಣ ರಂಗಮಂದಿರದಲ್ಲಿ “ಗೆಜ್ಜೆನಾದ-ಸೀಸನ್ 2 ” ಏಕವ್ಯಕ್ತಿ ನೃತ್ಯ ಸ್ಪರ್ಧೆ ನಡೆಯಲಿದೆ. ಈಗಾಗಲೇ 35 ಸ್ಪರ್ಧಿಗಳು ತಮ್ಮ ಹೆಸರನ್ನು ಸ್ಪರ್ಧೆಯಲ್ಲಿ ನೋಂದಾಯಿಸಿಕೊಂಡಿದ್ದು, ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತ ಪಟ್ಟವನ್ನು ಅಲಂಕರಿಸುವ ಕನಸು ಕಾಣುತ್ತಿದ್ದಾರೆ.

ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ರೂಪದಲ್ಲಿ
ಪ್ರಥಮ Rs:-10,000 ಮತ್ತು ಗೆಜ್ಜೆನಾದ ಟ್ರೋಫಿ
ದ್ವಿತೀಯ Rs:-5,000 ಮತ್ತು ಗೆಜ್ಜೆನಾದ ಟ್ರೋಫಿ
ತೃತೀಯ Rs:-3,000 ಮತ್ತು ಗೆಜ್ಜೆನಾದ ಟ್ರೋಫಿ
ಚತುರ್ಥ :- ಗೆಜ್ಜೆನಾದ ಟ್ರೋಫಿ
ಪಂಚಮ:- ಗೆಜ್ಜೆನಾದ ಟ್ರೋಫಿ
ನೀಡಿ ಗೌರವಿಸಲಾಗುವುದು.

ಗೆಜ್ಜೆನಾದ ಸ್ಪರ್ಧೆಯನ್ನು ಬೆಳಿಗ್ಗೆ 9:00 ಗಂಟೆಗೆ ಸರಿಯಾಗಿ ರಾಜತಾದ್ರಿ ಚಾಮುಂಡೇಶ್ವರಿ ಕ್ಷೇತ್ರ ಮುಂಡ್ರಬೈಲು ಇಲ್ಲಿನ ಧರ್ಮದರ್ಶಿಗಳಾದ ಶ್ರೀ ಕೃಷ್ಣಪ್ಪ ಪೂಜಾರಿ ಇವರು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಜಪ ಪುತ್ತೂರು ಗ್ರಾಮಾಂತರ ಮಂಡಲ ಇದರ ಅಧ್ಯಕ್ಷರಾದ ದಯಾನಂದ ಶೆಟ್ಟಿ ಉಜಿರೆಮಾರು,ವಿಜಯ ಸಾಮ್ರಾಟ್ ಪುತ್ತೂರು ಇದರ ಸ್ಥಾಪಕಾಧ್ಯಕ್ಷರದ ಶ್ರೀ ಸಹಜ್ ರೈ ಬಳೆಜ್ಜ,ತುಳು ಚಲನಚಿತ್ರ ನಟಿ ಕು.ಧನ್ಯಾ ಪೂಜಾರಿ,ರಂಗಭೂಮಿ ಹಾಗೂ ಚಲನಚಿತ್ರ ಕಲಾವಿದರದ ಶ್ರೀ ಉತ್ಸವ್ ವಾಮಂಜೂರು,ಗುರುಕುಲ ಕಲಾಕೇಂದ್ರ ರಿ. ಪುತ್ತೂರು ಇದರ ಸಂಚಾಲಕಿ ಶ್ರೀಮತಿ ಗುರುಪ್ರಿಯ ಶಿವಾನಂದ ಕಾಮತ್,ಹಿರಿಯ ರಂಗಭೂಮಿ ಕಲಾವಿದರಾದ ಶ್ರೀ ರಮೇಶ್ ರೈ ಕುಕ್ಕುವಳ್ಳಿ,ಇಡ್ಕಿದು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಶ್ರೀ ಸುಧಾಕರ್ ಶೆಟ್ಟಿ ಬೀಡಿನಮಜಲು,ಹಿನ್ನೆಲೆ ಗಾಯಕಿ ಕು. ದಿವ್ಯನಿಧಿ ರೈ ಎರುಂಬು, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಇದರ ಅಧ್ಯಕ್ಷರಾದ ಶ್ರೀ ರಾಮ್‌ ದಾಸ್ ಶೆಟ್ಟಿ,ಅಂಬಿಕಾ ಪದವಿಪೂರ್ವ ಕಾಲೇಜು ಪುತ್ತೂರು ಇಲ್ಲಿನ ಉಪನ್ಯಾಸಕರಾದ ಶ್ರೀ ಸುಬ್ರಹ್ಮಣ್ಯ ಕೆ.,ಆಕೃತಿ ಕನ್‌ಸ್ಟ್ರಕ್ಷನ್ ಕಂಬಳಬೆಟ್ಟು ಇದರ ಮಾಲಕರಾದ ಶ್ರೀ ದಿನೇಶ್ ಗೌಡ ಮಾಡೇಲು,ಶ್ರೀ ಸುಬ್ರಹ್ಮಣ್ಯ ಸಹಕಾರ ಸಂಘ ನಿ. ವಿಟ್ಲ ಶಾಖೆ ಇದರ ಶಾಖಾ ವ್ಯವಸ್ಥಾಪಕರಾದ ಶ್ರೀ ರಾಜೇಶ್ ಕಂಟ್ರಮಜಲು ಭಾಗವಹಿಸಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಲಿದ್ದಾರೆ.

ಹಾಗೆಯೇ 170 ಗಂಟೆಗಳ ಕಾಲ ನಿರಂತರವಾಗಿ ಭರತನಾಟ್ಯವನ್ನು ಮಾಡಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಸಾಧನೆಯನ್ನು ಮಾಡಿದ ಕು. ರೆಮೋನಾ ಇವೆಟ್ ಪಿರೇರಾರವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಹಾಗೆಯೇ ಗೆಜ್ಜೆನಾದ ನೃತ್ಯ ಸ್ಪರ್ಧೆಯ ಪ್ರಯುಕ್ತ ಆಯೋಜಿಸಿದ ದಂಪತಿಗಳ ಆನ್ಲೈನ್ ಭಾವಚಿತ್ರ ಸ್ಪರ್ಧೆ “ರಾಜರಾಣಿ-2025” ಇದರ ಬಹುಮಾನ ವಿತರಣಾ ಕಾರ್ಯಕ್ರಮ ಹಾಗೂ ಲಕ್ಕಿಡಿಪ್ ಅದೃಷ್ಟವಂತರ ಆಯ್ಕೆ ಕೂಡ ನಡೆಯಲಿದೆ.

ದಿನಪೂರ್ತಿ ನಡೆಯುವ ಗೆಜ್ಜೆನಾದ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಲಾಭಿಮಾನಿಗಳು ಭಾಗವಹಿಸಿ, ನಮ್ಮನ್ನು ಪ್ರೋತ್ಸಾಹಿಸುವಂತೆ ಈ ಮೂಲಕ ಕೇಳಿಕೊಳ್ಳುತ್ತಿದ್ದೇವೆ ಎಂದು ತಿಳಿಸಿದರು.

ಸ್ಪರ್ಧೆಯ ನಿಯಮಗಳು ಮತ್ತು ನಿಬಂಧನೆಗಳು:
*ಸ್ಪರ್ಧೆಯಲ್ಲಿ ಭಾಗವಹಿಸಲು ಸ್ಪರ್ಧಿಗಳು ಅಕ್ಟೋಬರ್ 20-2025ರ ಒಳಗೆ ಪ್ರವೇಶ ಶುಲ್ಕವನ್ನು ನೀಡಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳತಕ್ಕದ್ದು.
*ಹೆಸರು ನೋಂದಾಯಿಸಿಕೊಳ್ಳುವ ಮೊದಲ 60 ಸ್ಪರ್ಧಿಗಳಿಗೆ ಮೊದಲ ಆದ್ಯತೆ ನೀಡಲಾಗುವುದು.
*ಸ್ಪರ್ಧೆಗೆ ಬಳಸುವ ಹಾಡು ಕನ್ನಡ ಅಥವಾ ತುಳು ಭಾಷೆಯಲ್ಲಿರಬೇಕು.
ಇತರೆ ಭಾಷೆಯ (ಹಿಂದಿ, ತಮಿಳು, ಇಂಗ್ಲೀಷ್ ಇತ್ಯಾದಿ) ಹಾಡುಗಳನ್ನು ಬಳಸುವಂತಿಲ್ಲ.
*ಜನಪದ ಹಾಡುಗಳು ಅಥವಾ ಭಕ್ತಿಗೀತೆಗಳನ್ನು ಸೇರಿಸಬಹುದು, ಆದರೆ ಅವು ಕೂಡ ಕನ್ನಡ/ತುಳು ಭಾಷೆಯಲ್ಲಿರಬೇಕು.
*ಯಾವುದೇ ನೃತ್ಯ ಶೈಲಿಯನ್ನು ಬಳಸಬಹುದು – ಭರತನಾಟ್ಯ, ಫೋಕ್, ಫ್ರೀಸ್ಟೈಲ್, ಸೆಮಿ-ಕ್ಲಾಸಿಕಲ್, ವೆಸ್ಟರ್ನ್ ಅಥವಾ ಫ್ಯೂಶನ್.
*ಶೈಲಿಯಲ್ಲಿ ಸ್ವಾತಂತ್ರ್ಯವಿದೆ, ಆದರೆ ಹಾಡಿನ ಥೀಮ್‌ಗೆ ಹೊಂದಿಕೊಳ್ಳಬೇಕು.
*ಪ್ರದರ್ಶನವು 4+1 ನಿಮಿಷಗಳಿಗೆ ಸೀಮಿತವಾಗಿರುತ್ತದೆ. ಹಾಗೂ ವೇದಿಕೆಯಲ್ಲಿ ಸಿದ್ಧತೆಯನ್ನು ಮಾಡಲು ಹೆಚ್ಚುವರಿ 1 ನಿಮಿಷವನ್ನು ನೀಡಲಾಗುತ್ತದೆ.
*ಯಾವುದೇ ರೀತಿಯ ಅಸಭ್ಯತೆ, ಅನುಚಿತ ಭಾಷೆ, ದೇವತೆಗಳು, ರಾಷ್ಟ್ರ, ಜಾತಿ ಅಥವಾ ಯಾವುದೇ ಸಮುದಾಯದ ಅವಹೇಳನಕಾರಿಯಾದ ವಿಷಯಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
*ತಮ್ಮ ಭಾಗವಹಿಸುವಿಕೆಯನ್ನು ಖಚಿತಪಡಿಸಲು ಸ್ಪರ್ಧಿಗಳು ಸ್ಪರ್ಧೆಗೆ 15 ನಿಮಿಷಗಳ ಮೊದಲು ಆಗಮಿಸಬೇಕಾಗುತ್ತದೆ. ಸ್ಪರ್ಧೆಗೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.
*ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಿಗಳು ಆಡಿಯೋ ಅಗತ್ಯಗಳಿಗಾಗಿ ಪೆನ್ ಡ್ರೈವ್‌ಗಳನ್ನು ಬಳಸಬೇಕಾಗುತ್ತದೆ. ಯಾವುದೇ ರೀತಿಯ ತಾಂತ್ರಿಕ ದೋಷಗಳು ಉಂಟಾದಲ್ಲಿ ಸಂಘಟಕರು ಜವಾಬ್ದಾರರಾಗಿರುವುದಿಲ್ಲ.
*ಬೆಂಕಿ ಅಥವಾ ಇತರ ಅಪಾಯಕಾರಿ ಸಾಧನಗಳನ್ನು ಬಳಸುವಂತಿಲ್ಲ.
*ಅಗತ್ಯ ಧ್ವನಿ ಮತ್ತು ಬೆಳಕಿನ ಸಾಧನಗಳನ್ನು ಒದಗಿಸಲಾಗುತ್ತದೆ.
*ಅನುಚಿತ ವರ್ತನೆಯನ್ನು ಪ್ರದರ್ಶಿಸುವ ಸ್ಪರ್ಧಿಗಳು ಅನರ್ಹತೆಯನ್ನು ಎದುರಿಸಬೇಕಾಗುತ್ತದೆ.
*ಪ್ರವೇಶ ಶುಲ್ಕವನ್ನು ನೀಡಿ ಸ್ಪರ್ಧಿಗಳು ಸ್ಪರ್ಧೆಗೆ ಭಾಗವಹಿಸದೆ ಇದ್ದಲ್ಲಿ ಯಾವುದೇ ಕಾರಣಕ್ಕೂ ಪ್ರವೇಷ ಶುಲ್ಕವನ್ನು ಹಿಂತಿರುಗಿಸಲಾಗುವುದಿಲ್ಲ.
*ತೀರ್ಪುಗಾರರ ನಿರ್ಧಾರಗಳೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಜೈದೀಪ್ ಅಮೈ: 7090615880

- Advertisement -

Related news

error: Content is protected !!