ಬೆಳ್ತಂಗಡಿ: ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಈಗಾಗಲೇ 3923 ಪುಟಗಳ ಆರು ಸಂಪುಟದ ವರದಿಯನ್ನು ಕೋರ್ಟ್ ಗೆ ಸಲ್ಲಿಸಿದ್ದು, ಕೇಸ್ ನಲ್ಲಿ ಚಿನ್ನಯ್ಯ ಸೇರಿದಂತೆ ಮಹೇಶ್ ಶೆಟ್ಟಿ ತಿಮರೋಡಿ, ಜಯಂತ್ ಟಿ, ವಿಠಲ್ ಗೌಡ, ಗಿರೀಶ್ ಮಟ್ಟಣ್ಣನವರ್ ಸೇರಿದಂತೆ ಸುಜಾತ ಭಟ್ ಮೇಲೆ ಷಡ್ಯಂತರ ಆರೋಪವಿರುವ ವರದಿಯನ್ನು ಬೆಳ್ತಂಗಡಿ ಅಧಿಕ ಸಿಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ವರದಿಯ ಹಿನ್ನೆಲೆಯಲ್ಲಿ ಇಂದು (ನ.21) ಬೆಳ್ತಂಗಡಿ ನ್ಯಾಯಾಲಯದಲ್ಲಿ ವಾದ ಪ್ರತಿವಾದ ನಡೆಯಿತು.
ಆರೋಪಿ ಚಿನ್ನಯ್ಯನಿಗೆ ಜಾಮೀನು ನೀಡಬೇಕೆಂದು ಕಾನೂನು ಸೇವಾ ಪ್ರಾಧಿಕಾರದ ಪ್ರತಿರಕ್ಷಣಾ ವಕೀಲರು ಅರ್ಜಿ ಕೋರ್ಟ್ ಗೆ ಸಲ್ಲಿಸಿದ್ದರು. ಇದಕ್ಕೆ ತಕರಾರು ತೆಗೆದ ಎಸ್ಐಟಿ ಪರ ಸರ್ಕಾರಿ ವಕೀಲರಾದ ದಿವ್ಯರಾಜ್ ಹೆಗ್ಡೆ, ಈ ಪ್ರಕರಣದ ಬಗ್ಗೆ ಎಸ್ಐಟಿ ತನಿಖೆ ಮಾಡಿ ಸಂಪೂರ್ಣ ಮಾಹಿತಿ ಉಳ್ಳ ವರದಿ ಕೋರ್ಟ್ ಗೆ ಸಲ್ಲಿಸಿದೆ. ಅದರಲ್ಲಿ ಆರೋಪಿ ಚಿನ್ನಯ್ಯ ವಿರುದ್ಧ ಸಾಕ್ಷಾಧಾರ ಕಂಡುಬಂದಿದ್ದು, ಆರೋಪಿಗೆ ಜಾಮೀನು ನೀಡಬಾರದು ಮತ್ತು ಹೆಚ್ಚಿನ ಲಿಖಿತ ತಕರಾರು ಮತ್ತು ವಾದ ಮಂಡಿಸಲು ಸಮಯಾವಕಾಶ ನೀಡಬೇಕೆಂದು ಕೋರಿದರು. ಈ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ವಿಜಯೇಂದ್ರ ಟಿ ಎಚ್ ಅವರು ನ.24ರ ಸೋಮವಾರಕ್ಕೆ ಸಮಯ ನಿಗದಿಪಡಿಸಿದ್ದಾರೆ.








