



ಪುತ್ತೂರು: ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ ಬಳಿಕ ಕಳೆದ ಮೂರು ತಿಂಗಳಿಂದ ತಲೆಮರೆಸಿಕೊಂಡಿದ್ದ ಪುತ್ತೂರು ತಹಶೀಲ್ದಾರ್ ಎಸ್.ಬಿ. ಕೂಡಲಗಿ ಅವರು ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದು. ರವಿವಾರ (ಡಿ.1) ದಂದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದಾರೆ.
ಈಶ್ವರಮಂಗಲದ ಅಜಿತ್ ಎಂಬವರು ಅಕ್ರಮ ಸಕ್ರಮ ಯೋಜನೆಯಡಿ ಮಂಜೂರಾದ ಜಮೀನಿನ ಪರಭಾರೆಗಾಗಿ ನಿರಾಕ್ಷೇಪಣಾ ಪತ್ರ (NOC) ಕೋರಿ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಭೂಮಿ ಶಾಖೆಯ ಕೇಸ್ ವರ್ಕರ್ ಸುನೀಲ್, ತಹಶೀಲ್ದಾರ್ ಸಹಿ ಹಾಕಲು 10,000 ರೂ. ಹಾಗೂ ತನಗೆ ಸ್ವಲ್ಪ ಹಣ ನೀಡಬೇಕೆಂದು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿತ್ತು. ಈ ಬಗ್ಗೆ ಅಜಿತ್ ನೀಡಿದ ದೂರಿನನ್ವಯ ಆಗಸ್ಟ್ 28ರಂದು ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರು, 12,000 ರೂ. ಲಂಚ ಪಡೆಯುವಾಗ ಸುನೀಲ್ ಅವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದರು.
ಈ ಪ್ರಕರಣದಲ್ಲಿ ತಹಶೀಲ್ದಾರ್ ಕೂಡಲಗಿ ಅವರ ಮೇಲೂ ಎಫ್‌ಐಆರ್ ದಾಖಲಾಗಿತ್ತು. ಅಂದಿನಿಂದ ಅವರು ಕಚೇರಿಗೆ ಗೈರಾಗಿದ್ದರು. ಕೆಳ ಹಂತದ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ತಿರಸ್ಕೃತಗೊಂಡಿತ್ತು. ಇದೀಗ ಹೈಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದ್ದರಿಂದ ಅವರು ಮತ್ತೆ ತಮ್ಮ ಹುದ್ದೆಯನ್ನು ಅಲಂಕರಿಸಿದ್ದಾರೆ.
ಕರ್ತವ್ಯಕ್ಕೆ ಮರಳಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಕೂಡಲಗಿ, “ನನ್ನ ಮೇಲೆ ಮಾಡಲಾದ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ. ದೂರುದಾರ ಅಜಿತ್ ಯಾರೆಂಬುದೇ ನನಗೆ ತಿಳಿದಿಲ್ಲ ಮತ್ತು ಸಂಬಂಧಪಟ್ಟ ಕಡತ ನನ್ನ ಬಳಿಗೆ ಬಂದೇ ಇಲ್ಲ. ಕಚೇರಿಯ ಸಿಬ್ಬಂದಿ ನನ್ನ ಹೆಸರು ಹೇಳಿ ಹಣ ವಸೂಲಿ ಮಾಡುವ ಕೆಲಸ ಮಾಡಿದ್ದಾರೆ. ನನ್ನ 30 ವರ್ಷಗಳ ಸೇವಾವಧಿಯಲ್ಲಿ ನಾನು ಇಂತಹ ಕೆಲಸ ಮಾಡಿಲ್ಲ. ವಿನಾಕಾರಣ ನನಗೆ ಚಿತ್ರಹಿಂಸೆ ನೀಡಲಾಗಿದೆ. ನನ್ನ ಬಳಿ ನಿರಪರಾಧಿ ಎಂದು ಸಾಬೀತುಪಡಿಸಲು ದಾಖಲೆಗಳಿದ್ದು, ಕಾನೂನು ಹೋರಾಟ ನಡೆಸುತ್ತೇನೆ.” ಎಂದು ಸ್ಪಷ್ಟಪಡಿಸಿದ್ದಾರೆ.
ತಹಶೀಲ್ದಾರ್ ಹೆಸರನ್ನು ದುರ್ಬಳಕೆ ಮಾಡಿಕೊಂಡು ಕೆಲ ಸಿಬ್ಬಂದಿ ಸಾರ್ವಜನಿಕರಿಂದ ಹಣ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಚೇರಿಯಲ್ಲಿ ಸುತ್ತೋಲೆಯೊಂದನ್ನು ಹೊರಡಿಸಿರುವ ತಹಶೀಲ್ದಾರ್. “ಇನ್ನು ಮುಂದೆ ಯಾರಾದರೂ ನನ್ನ ಹೆಸರು ಹೇಳಿ ಸಾರ್ವಜನಿಕರಿಗೆ ತೊಂದರೆ ನೀಡಿದರೆ ಅಥವಾ ಹಣಕ್ಕೆ ಬೇಡಿಕೆ ಇಟ್ಟರೆ. ಅದಕ್ಕೆ ಸಂಬಂಧಪಟ್ಟ ಸಿಬ್ಬಂದಿಯೇ ನೇರ ಹೊಣೆಗಾರರಾಗುತ್ತಾರೆ.” ಎಂದು ಎಚ್ಚರಿಕೆ ನೀಡಿದ್ದಾರೆ.








