




ಧಾರವಾಡ/ಬೆಂಗಳೂರು: ಯಾವುದೇ ಸರ್ಕಾರಿ ಅಥವಾ ಖಾಸಗಿ ಉದ್ಯೋಗಿಯ ಜಾತಿ ಕುರಿತು ವಿಚಾರಿಸುವ ಅಥವಾ ಮಾಹಿತಿ ಸಂಗ್ರಹಿಸುವ ಅಧಿಕಾರ ಉದ್ಯೋಗದಾತರಿಗೆ ಇಲ್ಲ ಎಂದು ಹೈಕೋರ್ಟ್ನ ಧಾರವಾಡ ಪೀಠ ಮಹತ್ವದ ಆದೇಶ ನೀಡಿದೆ.
ಕಾರವಾರದ ಅಗ್ನಿಶಾಮಕ ದಳದ ಅಧಿಕಾರಿ ರಾಜು ತಳವಾರ (27) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಪುರಸ್ಕರಿಸಿದ್ದು, ಉದ್ಯೋಗದಾತರು ಜಾತಿ ವಿಚಾರಿಸುವುದು ಕಾನೂನುಬಾಹಿರ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ
ರಾಜು ತಳವಾರ ಅವರನ್ನು ಹಿಂದುಳಿದ ವರ್ಗಗಳ (ಒಬಿಸಿ-1) ಮೀಸಲಾತಿ ಅಡಿ ಅಗ್ನಿಶಾಮಕ ದಳದ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಬಳಿಕ ತಳವಾರ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಿದ ಹಿನ್ನೆಲೆಯಲ್ಲಿ ಅವರು ಪರಿಶಿಷ್ಟ ಪಂಗಡ ಮೀಸಲಾತಿ ಅಡಿ ಬಡ್ತಿ ಪಡೆದಿದ್ದರು. ಆದರೆ, ಈ ಸಂಬಂಧ 2025ರ ಜನವರಿಯಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿಯು ಅವರ ನೇಮಕಾತಿ ಸಂಬಂಧ ಜಾತಿ ವಿಚಾರಣೆ ನಡೆಸುವ ಉದ್ದೇಶದಿಂದ ನೋಟಿಸ್ ಜಾರಿ ಮಾಡಿದ್ದನ್ನು ಪ್ರಶ್ನಿಸಿ ತಳವಾರ ಹೈಕೋರ್ಟ್ ಮೆಟ್ಟಿಲೇರಿದ್ದರು.
ನ್ಯಾಯಾಲಯ ತನ್ನ ಆದೇಶದಲ್ಲಿ, ಉದ್ಯೋಗಿಯ ಜಾತಿ ಪರಿಶೀಲಿಸುವ ಅಧಿಕಾರ ಉದ್ಯೋಗದಾತರಿಗೆ ಇಲ್ಲ. ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ಮಾತ್ರ ಈ ಅಧಿಕಾರವಿದೆ. ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರೆ ಹಿಂದುಳಿದ ವರ್ಗಗಳ ಕಾಯಿದೆ–1990ರ ಅಡಿ ಮಾತ್ರ ಜಾತಿ ಮಾಹಿತಿ ಕೇಳಬಹುದು ಎಂದು ಸ್ಪಷ್ಟಪಡಿಸಿದೆ.
ಕರ್ನಾಟಕ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಸೇರಿದಂತೆ ಯಾವುದೇ ಇಲಾಖೆ ಸ್ವಯಂಪ್ರೇರಿತವಾಗಿ ಉದ್ಯೋಗಿಯ ಜಾತಿ ವಿಚಾರಿಸಲು ಸಾಧ್ಯವಿಲ್ಲ ಎಂದು ಪೀಠ ತೀರ್ಪಿನಲ್ಲಿ ಖಡಕ್ ಸಂದೇಶ ನೀಡಿದೆ. ಈ ತೀರ್ಪು ಮುಂದಿನ ದಿನಗಳಲ್ಲಿ ಸರ್ಕಾರಿ ನೌಕರರ ಹಕ್ಕುಗಳ ರಕ್ಷಣೆಗೆ ಮಹತ್ವದ ಮಾರ್ಗದರ್ಶಿಯಾಗಲಿದೆ








