




ದಾವಣಗೆರೆ: ಸುಟ್ಟು ಕರಕಲಾದ ಸ್ಥಿತಿಯಲ್ಲಿ ಬಿಜೆಪಿಯ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ ಶವ ಕಾರಿನಲ್ಲಿ ಪತ್ತೆಯಾಗಿದೆ. ದಾವಣಗೆರೆಯ 43ನೇ ವಾರ್ಡ್ ಮಾಜಿ ಕಾರ್ಪೊರೇಟರ್ ಆಗಿದ್ದ ಚಂದ್ರಶೇಖರ್ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಮತ್ತೊಂದೆಡೆ ಅವರ ಇಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದುಬಂದಿದೆ.
ದಾವಣಗೆರೆ ಹೊರವಲಯ ಹದಡಿ ರಸ್ತೆಯ ಬಳಿಯ ತೋಟದ ಬಳಿ ನಿಲ್ಲಿಸಿದ್ದ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಚಂದ್ರಶೇಖರ್ ಮೃತದೇಹ ಪತ್ತೆಯಾಗಿದೆ. ಕಾರಿನಲ್ಲಿ ಕುಳಿತು ಮಾಜಿ ಕಾರ್ಪೊರೇಟರ್ ಚಂದ್ರಶೇಖರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಅವರ ಮಗ 20 ವರ್ಷದ ನರೇಶ್ ಹಾಗೂ ಮಗಳು 23 ವರ್ಷದ ಪವಿತ್ರಾ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದು, ಇಬ್ಬರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ನಿನ್ನೆ ರಾತ್ರಿ ಮನೆಯಲ್ಲಿ ಸಾಲದ ವಿಚಾರವಾಗಿ ಮಾಜಿ ಕಾರ್ಪೊರೇಟರ್ ಸಂಕೋಳ್ ಚಂದ್ರಶೇಖರ್ ಹಾಗೂ ಮಕ್ಕಳ ನಡುವೆ ವಾಗ್ವಾದ ನಡೆದಿದ್ದು, ಬಳಿಕ ಚಂದ್ರಶೇಖರ್, ನಾಗನೂರು ಹೊರ ವಲಯದ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.








