Thursday, July 23, 2026
spot_imgspot_img
spot_imgspot_img

ವಿಜಯಪುರ: ಟ್ರ್ಯಾಕರ್, ಜಿಪಿಎಸ್ ಹೊಂದಿದ್ದ ರಣಹದ್ದು ಪತ್ತೆ…!

- Advertisement -
- Advertisement -

ವಿಜಯಪುರ : ಚಡಚಣ ತಾಲೂಕಿನ ಗೋಟ್ಯಾಳ ಗ್ರಾಮದ ತೋಟದಲ್ಲಿ ಟ್ರಾಕರ್, ಜಿಪಿಎಸ್ ಹಾಗೂ ಕ್ಯಾಮರಾ ಮಾದರಿಯ ಉಪಕರಣಗಳನ್ನು ಹೊಂದಿದ್ದ ರಣಹದ್ದು ಪತ್ತೆಯಾಗಿದೆ. ತೋಟದಲ್ಲಿ ಅಸಹಜ ಸ್ಥಿತಿಯಲ್ಲಿ ಕುಳಿತಿದ್ದ ದೊಡ್ಡ ಪಕ್ಷಿಯನ್ನು ಕಂಡ ಸ್ಥಳೀಯರು ತಕ್ಷಣ 112ಗೆ ಕರೆ ಮಾಡಿದರು. ಸ್ಥಳಕ್ಕೆ ಬಂದ 112 ಪೊಲೀಸರು ರಣಹದ್ದನ್ನು ವಶಕ್ಕೆ ಪಡೆದು, ಝಳಕಿ ಪೊಲೀಸ್‌ ಠಾಣೆಗೆ ಸ್ಥಳಾಂತರಿಸಿದರು. ರಣಹದ್ದಿನ ಕಾಲಿನಲ್ಲಿ ಗುರುತಿನ ಸಂಖ್ಯೆಯ ಟ್ಯಾಗ್ ಅಳವಡಿಸಿರುವುದು ಕಂಡು ಬಂದಿದ್ದು, ಪಕ್ಷಿಯ ಮೇಲೆ ವೈಜ್ಞಾನಿಕ ಅಧ್ಯಯನ ನಡೆಯುತ್ತಿರುವುದು ಸ್ಪಷ್ಟವಾಗಿದೆ ಎನ್ನಲಾಗಿದೆ.

ಪೊಲೀಸ್‌ ಠಾಣೆಗೆ ಭೇಟಿ ನೀಡಿದ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸಿ, ಈ ರಣಹದ್ದು ಮಹಾರಾಷ್ಟ್ರದ ನಾಗಪೂರ ಸಮೀಪದ ಮೇಲಘಾಟ ಪ್ರದೇಶದಿಂದ ಬಂದಿರುವುದಾಗಿ ಹಾಗೂ ಮಹಾರಾಷ್ಟ್ರ ಅರಣ್ಯ ಇಲಾಖೆಯು ರಣಹದ್ದುಗಳ ಜೀವನ ಶೈಲಿ, ಸಂಚರಣೆ ಮಾರ್ಗ ಹಾಗೂ ಇತರೆ ಪಕ್ಷಿಗಳ ಕುರಿತು ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಜಿಪಿಎಸ್ ಮತ್ತು ಟ್ರ್ಯಾಕರ್ ಅಳವಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಜಿಪಿಎಸ್‌ ಮತ್ತು ಟ್ರ್ಯಾಕರ್‌ಗಳ ಭಾರದಿಂದ ಹಾರಲು ಸಾಧ್ಯವಾಗದೆ, ರಣಹದ್ದು ಬಸವಳಿದ ಸ್ಥಿತಿಯಲ್ಲಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ರಣಹದ್ದನ್ನು ತಮ್ಮ ಸುಪರ್ಧಿಗೆ ಪಡೆದು ಅಗತ್ಯ ಆರೈಕೆ ನೀಡುತ್ತಿದ್ದಾರೆ.

ಸದ್ಯ ರಣಹದ್ದಿನ ಆರೋಗ್ಯ ಸ್ಥಿತಿಯನ್ನು ನೋಡಿಕೊಂಡು ಸಂಪೂರ್ಣ ಚೇತರಿಸಿಕೊಂಡ ಬಳಿಕ ಹಾರಲು ಬಿಡುವ ಕುರಿತು ಮಹಾರಾಷ್ಟ್ರ ಅರಣ್ಯಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದ್ದು, ಅವರ ಸೂಚನೆಗಳಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ಜಿಲ್ಲಾ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ..

- Advertisement -

Related news

error: Content is protected !!