


ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ 2002ನೇ ಸಾಲಿನ ಮತದಾರ ಪಟ್ಟಿಯನ್ನು 2025ರ ಮತದಾರರಪಟ್ಟಿಗೆ ಮ್ಯಾಪಿಂಗ್ ಮಾಡುವ ಕಾರ್ಯವು ಪ್ರಗತಿಯಲ್ಲಿದೆ ಎಂದು ಮುಖ್ಯ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ 2002ರ ನಂತರ ಮದುವೆಯಾಗಿ ಬಂದವರು ಅಥವಾ ಸ್ಥಳಾಂತರಗೊಂಡವರು, ಹೊಸದಾಗಿ ಸೇರ್ಪಡೆಯಾದವರು ತಮ್ಮ ವ್ಯಾಪ್ತಿಗೆ ಸಂಬಂಧಿಸಿದ ಬೂತ್ ಮಟ್ಟದ ಅಧಿಕಾರಿ(ಬಿ.ಎಲ್.ಒ) ಮುಖಾಂತರ ಮ್ಯಾಪಿಂಗ್ ಮಾಡಿಕೊಳ್ಳಬೇಕು.
ಇದಕ್ಕಾಗಿ, ತಾವು ಹಿಂದೆ ವಾಸ್ತವ್ಯವಿದ್ದ ತಮ್ಮ ಹಿಂದಿನ ವಿಧಾನಸಭಾ ಕ್ಷೇತ್ರದ ನಂಬರ್, ಭಾಗ(ಬೂತ್) ಸಂಖ್ಯೆ ಹಾಗೂ ತಮ್ಮ ಕ್ರಮ ಸಂಖ್ಯೆಯನ್ನು ಒಂದು ವೇಳೆ ನಿಮ್ಮ ಹೆಸರು 2002 ಮತದಾರ ಪಟ್ಟಿಯಲ್ಲಿ ಇಲ್ಲದಿದ್ದರೆ ನಿಮ್ಮ ತಂದೆ-ತಾಯಿಯವರ ಕ್ರಮ ಸಂಖ್ಯೆ ಅಥವಾ ಅಜ್ಜ-ಅಜ್ಜಿಯರ ಕ್ರಮ ಸಂಖ್ಯೆಯೊಂದಿಗೆ ಮಾಹಿತಿಯನ್ನು ಸಂಬಂಧಪಟ್ಟ ಬಿ.ಎಲ್.ಒ ರವರಲ್ಲಿ ನೀಡಿ ಮ್ಯಾಪಿಂಗ್ ಮಾಡಿಕೊಳ್ಳುವಂತೆ ತಿಳಿಸಿದೆ.
ಸಾರ್ವಜನಿಕ ಮಾಹಿತಿಗಾಗಿ ಮುಖ್ಯ ಚುನಾವಣಾಧಿಕಾರಿಯ ವೆಬ್‌ಸೈಟ್ https://ceo.karnataka.gov.in/voter_list 2002ನೆ ಸಾಲಿನ ಮತದಾರರ ಪಟ್ಟಿಯನ್ನು ಹಾಕಲಾಗಿದೆ. ಬಿ.ಎಲ್.ಒ ಗಳು ಮತದಾರರ ಮನೆಗಳಿಗೆ ಹೋಗಿ ಅವರ ಚುನಾವಣಾ ಗುರುತಿನ ಚೀಟಿ ಪರಿಶೀಲಿಸಿ, 2002ರ ಮತದಾರರ ಪಟ್ಟಿಯಲ್ಲಿನ ವಿವರಗಳಿಗೂ, ಈಗಿರುವ ವಿವರಗಳ ನಡುವಿನ ವ್ಯತ್ಯಾಸಗಳನ್ನು ಪರಿಶೀಲಿಸಲಿದ್ದಾರೆ.
ಬಿ.ಎಲ್.ಒ ಗಳು ಮನೆಗಳಿಗೆ ಭೇಟಿ ನೀಡಿದಾಗ ವಿಶೇಷ ಕ್ಯೂಆರ್ ಕೋಡ್ ಇರುವಂತಹ ಎರಡು ಅರ್ಜಿ ನಮೂನೆಗಳನ್ನು ಮತದಾರರಿಗೆ ನೀಡಿ ಅಗತ್ಯ ಮಾಹಿತಿಯನ್ನು ಕ್ರೋಢೀಕರಿಸಲಿದ್ದಾರೆ. ಒಂದು ನಮೂನೆಯನ್ನು ಬಿ.ಎಲ್.ಒ ಗಳು ಸಹಿ ಮಾಡಿ ಮತದಾರರಿಗೆ ಹಿಂದಿರುಗಿಸಲಿದ್ದಾರೆ. ಮತ್ತೊಂದು ನಮೂನೆಯನ್ನು ಮುಖ್ಯ ಚುನಾವಣಾಧಿಕಾರಿ ಕಚೇರಿಗೆ ತಲುಪಿಸಿ, ಅದನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಹಾಕುತ್ತಾರೆ.
ಇದನ್ನೂ ಓದಿ ಪ್ರವಾಸಿ ತಾಣವಾಗಿ ಮಹಾತ್ಮಗಾಂಧಿ ಭೇಟಿ ನೀಡಿದ್ದ ಬದನವಾಳು ಖಾದಿ ಕೇಂದ್ರ ಅಭಿವೃದ್ಧಿ ಪ್ರಿಯಾಂಕ್ ಖರ್ಗೆ
- ಮತದಾರರ ಹೆಸರು ಒಂದಕ್ಕಿಂತ ಹೆಚ್ಚಿನ ಮತಗಟ್ಟೆಯಲ್ಲಿದ್ದರೆ ಫೋಟೋ ಸ್ಕ್ಯಾನಿಂಗ್ ತಂತ್ರಜ್ಞಾನದ ಮೂಲಕ ಪತ್ತೆ ಹಚ್ಚಿ ‘ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಮತದಾರರ ಗುರುತಿನ ಚೀಟಿಯಲ್ಲಿರುವ ಭಾವಚಿತ್ರ ಅಸ್ಪಷ್ಟವಾಗಿದ್ದರೆ ಮತದಾರರು ಹೊಸ ಭಾವಚಿತ್ರವನ್ನು ನಿಗದಿತ ಅರ್ಜಿ ನಮೂನೆಯೊಂದಿಗೆ ನೀಡಬೇಕು.
“ರಾಜ್ಯದಲ್ಲಿ ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಶೇ.60ರಷ್ಟು ಪೂರ್ಣಗೊಂಡಿದೆ. ಚುನಾವಣಾ ಆಯೋಗದಲ್ಲಿ ಹೆಚ್ಚಿನ ಸಿಬ್ಬಂದಿಗಳು ಇರುವುದಿಲ್ಲ. ಆದುದರಿಂದ, ಸರಕಾರದ ಬೇರೆ ಬೇರೆ ಇಲಾಖೆಯ ಸಿಬ್ಬಂದಿಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಿಕೊಂಡು ಕೆಲಸ ಮಾಡುತ್ತೇವೆ. 2025ರ ಜನವರಿ 1ರಂದು ರಾಜ್ಯದ ಅರ್ಹ ಮತದಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದೇವೆ. ಪ್ರತಿಯೊಬ್ಬ ಮತದಾರರೂ ಮುಖ್ಯ ಚುನಾವಣಾಧಿಕಾರಿ ವೆಬ್‌ಸೈಟ್‌ನಲ್ಲಿರುವ 2002ರ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇದೆಯೇ, ಇಲ್ಲವೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಒಂದು ವೇಳೆ ಇಲ್ಲದಿದ್ದರೆ ಮತದಾರರ ಪಟ್ಟಿಯಲ್ಲಿರುವ ಅವರ ಪೋಷಕರು, ಸಂಬಂಧಿಕರ ವಿವರಗಳನ್ನು ನಿಗದಿತ ಅರ್ಜಿ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಿದರೆ, ಅದನ್ನು ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಲಾಗುವುದು..
ಎಸ್.ಯೋಗೇಶ್ವರ್, ಜಂಟಿ ಮುಖ್ಯ ಚುನಾವಣಾಧಿಕಾರಿ








