




ಉತ್ತರ ಸೌದಿ ಅರೇಬಿಯಾದ ಗುಹೆಗಳಲ್ಲಿ ವಿಜ್ಞಾನಿಗಳು ನೈಸರ್ಗಿಕವಾಗಿ ಮಮ್ಮಿಗಳಾಗಿ ರೂಪಾಂತರಗೊಂಡ ಚೀತಾಗಳ ಅವಶೇಷಗಳನ್ನು ಪತ್ತೆಹಚ್ಚಿದ್ದು, ಇದು ಜಗತ್ತಿನಲ್ಲಿ ಇದೇ ಮೊದಲ ಬಾರಿಗೆ ನಡೆದ ಅಪರೂಪದ ಶೋಧವಾಗಿದೆ.

ಅವಶೇಷಗಳು ಸುಮಾರು 130 ರಿಂದ 1,800 ವರ್ಷಗಳ ಹಿಂದಿನವುಗಳಾಗಿದ್ದು, ಅರಾರ್ ನಗರದ ಸಮೀಪದ ಗುಹೆ ಪ್ರದೇಶದಲ್ಲಿ ಏಳು ಚೀತಾ ಮಮ್ಮಿಗಳು ಹಾಗೂ ಇತರ ಚೀತಾಗಳ 54 ಮೂಳೆಗಳು ಪತ್ತೆಯಾಗಿವೆ. ಮಮ್ಮಿಕರಣವು ಶವಗಳ ಕೊಳೆಯುವಿಕೆಯನ್ನು ನಿಧಾನಗೊಳಿಸಿ ದೀರ್ಘಕಾಲ ಸಂರಕ್ಷಿಸಲು ಸಹಾಯಕವಾಗುತ್ತದೆ. ಈಜಿಪ್ಟ್‌ನ ಮಮ್ಮಿಗಳು ಹೆಚ್ಚು ಪ್ರಸಿದ್ಧವಾಗಿದ್ದರೂ, ಮರಳುಗಾಡು, ಹಿಮಪ್ರದೇಶ ಮತ್ತು ಚೌಗು ಭೂಮಿಗಳಲ್ಲಿಯೂ ನೈಸರ್ಗಿಕ ಮಮ್ಮಿಕರಣ ಸಂಭವಿಸುತ್ತದೆ.
ಹೊಸಾಗಿ ಪತ್ತೆಯಾಗಿರುವ ಚೀತಾ ಮಮ್ಮಿಗಳು ಮಂಕಾದ ಕಣ್ಣುಗಳು, ಸಂಕುಚಿತ ಕಾಲುಗಳು ಹಾಗೂ ಒಣಗಿದ ಹೊಟ್ಟಿನಂತಹ ಆಕಾರವನ್ನು ಹೊಂದಿದ್ದು, ಅತ್ಯಂತ ಉತ್ತಮ ಸ್ಥಿತಿಯಲ್ಲಿ ಸಂರಕ್ಷಿತವಾಗಿವೆ. “ಇಂತಹ ದೃಶ್ಯವನ್ನು ನಾನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇನೆ” ಎಂದು ಇಟಲಿಯ ಫ್ಲಾರೆನ್ಸ್ ವಿಶ್ವವಿದ್ಯಾಲಯದ ವಿಜ್ಞಾನಿ ಜೋನ್ ಮಡುರೆಲ್–ಮಲಪೀರಾ ತಿಳಿಸಿದ್ದಾರೆ. ಅವರು ಈ ಸಂಶೋಧನೆಯಲ್ಲಿ ನೇರವಾಗಿ ಭಾಗಿಯಾಗಿರಲಿಲ್ಲ.
ಚೀತಾಗಳು ಇಷ್ಟೊಂದು ಸುಸ್ಥಿತಿಯಲ್ಲಿ ಹೇಗೆ ಉಳಿದಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ಗುಹೆಗಳಲ್ಲಿನ ಶುಷ್ಕ ಪರಿಸ್ಥಿತಿ ಹಾಗೂ ಸ್ಥಿರ ತಾಪಮಾನ ಮಮ್ಮಿಕರಣಕ್ಕೆ ನೆರವಾಗಿರಬಹುದು ಎಂದು ಸಂಶೋಧಕರು ಅಂದಾಜಿಸಿದ್ದಾರೆ. ಈ ಅಧ್ಯಯನದ ವರದಿ ಕಮ್ಯುನಿಕೇಷನ್ಸ್ ಅರ್ಥ್ ಅಂಡ್ ಎನ್ವಿರಾನ್ಮೆಂಟ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.
ಹಿಂದೆ ರಷ್ಯಾದಲ್ಲಿ ಬಾಗುಕತ್ತಿಯಂತಹ ಹಲ್ಲುಗಳನ್ನು ಹೊಂದಿದ್ದ ಬೆಕ್ಕಿನ ಮರಿ ಸೇರಿದಂತೆ ಇತರ ಬೆಕ್ಕುಗಳ ಮಮ್ಮಿಗಳು ಪತ್ತೆಯಾಗಿದ್ದರೂ, ಚೀತಾದಂತಹ ದೊಡ್ಡ ಪ್ರಾಣಿಗಳು ಇಷ್ಟೊಂದು ಉತ್ತಮ ಸ್ಥಿತಿಯಲ್ಲಿ ಸಿಕ್ಕಿರುವುದು ಅತ್ಯಂತ ಅಪರೂಪ. ಇದಕ್ಕೆ ಅನುಕೂಲಕರ ವಾತಾವರಣದ ಜೊತೆಗೆ ಹಕ್ಕಿಗಳು, ಹೈನಾಗಳಂತಹ ಕೊಳೆತ ಪದಾರ್ಥಗಳನ್ನು ತಿನ್ನುವ ಪ್ರಾಣಿಗಳಿಂದ ಶವಗಳು ತಪ್ಪಿಸಿಕೊಂಡಿರುವುದೂ ಕಾರಣವಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
ಈ ಪತ್ತೆಯಿಂದಾಗಿ ಈ ಪ್ರದೇಶದಲ್ಲಿ ಪ್ರಾಚೀನ ಕಾಲದಲ್ಲಿ ಚೀತಾಗಳು ವಾಸವಾಗಿದ್ದುದಕ್ಕೆ ಬಲವಾದ ಸಾಕ್ಷ್ಯ ದೊರೆತಿದೆ. “ಜಗತ್ತಿನ ಈ ಭಾಗದಲ್ಲಿ ಇಷ್ಟೊಂದು ಸುಸ್ಥಿತಿಯಲ್ಲಿರುವ ಚೀತಾ ಅವಶೇಷಗಳ ಪತ್ತೆ ಅಭೂತಪೂರ್ವ” ಎಂದು ವರದಿಯ ಲೇಖಕರಾಗಿರುವ ಸೌದಿ ಅರೇಬಿಯಾದ ರಾಷ್ಟ್ರೀಯ ವನ್ಯಜೀವಿ ಕೇಂದ್ರದ ಅಹ್ಮದ್ ಬೌಗ್ ಹೇಳಿದ್ದಾರೆ.
ಒಂದು ಕಾಲದಲ್ಲಿ ಚೀತಾಗಳು ಆಫ್ರಿಕಾದಾದ್ಯಂತ ಮತ್ತು ಏಷ್ಯಾದ ಭಾಗಗಳಲ್ಲಿ ವ್ಯಾಪಕವಾಗಿ ವಾಸವಾಗಿದ್ದವು. ಆದರೆ ಇಂದಿನ ದಿನಗಳಲ್ಲಿ ಅವುಗಳ ಸಂಖ್ಯೆ ಹಿಂದಿನ ಮಟ್ಟದ ಕೇವಲ ಶೇ.9ರಷ್ಟಿಗೆ ಇಳಿದಿದ್ದು, ದಶಕಗಳಿಂದಲೇ ಅರೇಬಿಯನ್ ಪರ್ಯಾಯ ದ್ವೀಪಗಳಿಂದ ಮಾಯವಾಗಿವೆ. ಆವಾಸಸ್ಥಾನ ನಷ್ಟ, ಬೇಟೆ ಮತ್ತು ಆಹಾರದ ಕೊರತೆ ಅವುಗಳ ಅವನತಿಗೆ ಪ್ರಮುಖ ಕಾರಣಗಳಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈ ಶೋಧದಿಂದ ವಿಜ್ಞಾನಿಗಳಿಗೆ ಇದೇ ಮೊದಲ ಬಾರಿಗೆ ನೈಸರ್ಗಿಕವಾಗಿ ಮಮ್ಮಿಕೃತ ದೊಡ್ಡ ಬೆಕ್ಕುಗಳ ವಂಶಾವಳಿಯ ಅಧ್ಯಯನ ಸಾಧ್ಯವಾಗಿದೆ. ಪತ್ತೆಯಾದ ಚೀತಾಗಳು ಏಷ್ಯಾ ಮತ್ತು ವಾಯುವ್ಯ ಆಫ್ರಿಕಾದ ಆಧುನಿಕ ಚೀತಾಗಳೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ. ಈ ಮಾಹಿತಿಯು ಭವಿಷ್ಯದಲ್ಲಿ ಚೀತಾಗಳು ಅಸ್ತಿತ್ವದಲ್ಲಿರದ ಪ್ರದೇಶಗಳಲ್ಲಿ ಅವುಗಳನ್ನು ಮರಳಿ ಪರಿಚಯಿಸುವ ಸಂರಕ್ಷಣಾ ಪ್ರಯತ್ನಗಳಿಗೆ ಮಹತ್ವದ ಮಾರ್ಗದರ್ಶನ ನೀಡಲಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.








