


ಬೆಂಗಳೂರು: ಯುವಕನನ್ನು ಅಡ್ಡಗಟ್ಟಿದ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಬೆದರಿಸಿ ಬರೋಬ್ಬರಿ 31.38 ಲಕ್ಷ ರೂಪಾಯಿ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಸಕಲವಾರ ರಸ್ತೆಯಲ್ಲಿ ರವಿವಾರ (ಫೆ.1) ವರದಿಯಾಗಿದೆ.
ಖಾಸಗಿ ಕಂಪೆನಿಯೊಂದರಲ್ಲಿ ಹಣ ಸಂಗ್ರಹಣಾ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಕೈಲಾಸ್ (27) ಎಂಬಾತ ದರೋಡೆಗೊಳಗಾದ ಯುವಕ ಎಂದು ಗುರುತಿಸಲಾಗಿದೆ.

ಫೆ.1ರ ರವಿವಾರ ಸಂಜೆ ಸುಮಾರು 4:20ರ ಸುಮಾರಿಗೆ ಕೈಲಾಸ್ ಅವರು ಕಂಪೆನಿಯ ವಿವಿಧ ಶಾಖೆಗಳಿಂದ ಒಟ್ಟು 31,38,625 ರೂ. ಹಣವನ್ನು ಸಂಗ್ರಹಿಸಿ, ತಮ್ಮ ದ್ವಿಚಕ್ರ ವಾಹನದಲ್ಲಿ ಇಟ್ಟುಕೊಂಡು ಸಕಲವಾರದಿಂದ ಬನ್ನೇರುಘಟ್ಟ ರಸ್ತೆಯತ್ತ ಬರುತ್ತಿದ್ದರು. ಈ ವೇಳೆ ಎರಡು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದ ನಾಲ್ವರು ಆರೋಪಿಗಳು, ಏಕಾಏಕಿ ಕೈಲಾಸ್ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ್ದಾರೆ. ಬಳಿಕ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ ಹಾಕಿ ಹಣವಿದ್ದ ದ್ವಿಚಕ್ರ ವಾಹನ ಸಮೇತ ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಆರೋಪಿಗಳು ಕೃತ್ಯ ನಡೆದ ಒಂದು ಕಿ.ಮೀ. ದೂರದಲ್ಲಿ ದ್ವಿಚಕ್ರ ವಾಹನವನ್ನು ಬಿಟ್ಟು, ಅದರಲ್ಲಿದ್ದ ನಗದು ಹಣದೊಂದಿಗೆ ಪರಾರಿಯಾಗಿದ್ದಾರೆ. ಈ ಘಟನೆಯ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಂತ್ರಸ್ತ ಕೈಲಾಸ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.








