ಹಿರಿಯ ಪತ್ರಕರ್ತ ಯಶವಂತ ವಿಟ್ಲರಿಗೆ ಗೌರವ ಸನ್ಮಾನ



ವಿಟ್ಲ: ಕರ್ನಾಟಕ ಜರ್ನಲಿಸ್ಟ್ ಯೂನಿಯನ್ (ಆರ್.) ಪುತ್ತೂರು ತಾಲೂಕು ಸಮಿತಿಯ ವತಿಯಿಂದ ‘ಪತ್ರಿಕಾ ದಿನಾಚರಣೆ’ ಹಾಗೂ ಹಿರಿಯ ಪತ್ರಕರ್ತ, ಸಾಹಿತಿ ಯಶವಂತ್(ಯಶು) ವಿಟ್ಲ ಅವರಿಗೆ ‘ಗೌರವ ಸನ್ಮಾನ’ ಕಾರ್ಯಕ್ರಮವು (ನಾಳೆ)ಜುಲೈ 23 ಗುರುವಾರದಂದು ನಡೆಯಲಿದೆ.
ಇತ್ತೀಚೆಗೆ ಜುಲೈ 1ರಂದು ಕರ್ನಾಟಕ ಜರ್ನಲಿಸ್ಟ್ ಯೂನಿಯನ್‌ನ ಜಿಲ್ಲಾ ಸಮಿತಿಯ ವತಿಯಿಂದ ಮಂಗಳೂರಿನಲ್ಲಿ ಡಾ. ಹರ್ಮನ್ ಮೊಗ್ಲಿಂಗ್ ಅವರ ಪ್ರತಿಮೆಗೆ ಹಾರಾರ್ಪಣೆ ಮಾಡುವ ಮೂಲಕ ಪತ್ರಿಕಾ ದಿನಾಚರಣೆಯನ್ನು ಸಾಂಕೇತಿಕವಾಗಿ ಆಚರಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ನಾಳೆ ಪುತ್ತೂರು ತಾಲೂಕು ಘಟಕದ ವತಿಯಿಂದ ತಾಲೂಕು ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ಹಿರಿಯ ಪತ್ರಕರ್ತರ ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವು ಹಿರಿಯ ಪತ್ರಕರ್ತ ಯಶು ವಿಟ್ಲ ಅವರ ವಿಟ್ಲದ ಪಾಣೆಮಜಲು ಎಂಬಲ್ಲಿರುವ ಮನೆ ‘ಶ್ರವಣ’ ದಲ್ಲಿ ನಡೆಯಲಿದೆ. ಈ ಅಪೂರ್ವವಾದ ಕಾರ್ಯಕ್ರಮಕ್ಕೆ ಪತ್ರಿಕಾರಂಗದ ಬಂಧುಗಳು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ರಾಮದಾಸ್ ಶೆಟ್ಟಿ ಹಾಗೂ ಪ್ರಧಾನ ಕಾರ್ಯದರ್ಶಿ ಸಂತೋಷ್ ಮೊರಾಸ್ ಅವರು ಪ್ರಕಟಣೆಯಲ್ಲಿ ಪ್ರೀತಿಯ ಆಹ್ವಾನ ನೀಡಿದ್ದಾರೆ.
ಹಿರಿಯ ಪತ್ರಕರ್ತ ಯಶವಂತ ವಿಟ್ಲ (ಯಶು ವಿಟ್ಲ) ಇವರ ಪರಿಚಯ
ಮಾರ್ಚ್ 9, 1953 ರಲ್ಲಿ ಜನಿಸಿದ ಯಶವಂತ ವಿಟ್ಲ (ಬಿ.ಕಾಂ.ಡಿ.ಇ.ಜೆ) ಅವರು 3 ದಶಕಗಳಿಗೂ ಹೆಚ್ಚು ಕಾಲದಿಂದ ಪತ್ರಿಕಾರಂಗದಲ್ಲಿ ತನ್ನ ಬರಹಗಳಿಂದ ಬಹಳಷ್ಟು ಪ್ರಸಿದ್ದಿ ಪಡೆದವರು. ಅದರಂತೆ ಅದರ ಜೊತೆಯಾಗಿ, ಸಾಹಿತ್ಯ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದವರು.
ಸುಮಾರು 33 ವರ್ಷಗಳ ಕಾಲ ‘ಉದಯವಾಣಿ’ ದಿನಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿರುವ ಇವರು, ಗ್ರಾಮೀಣ ಬದುಕಿನ ನೋವು-ನಲಿವುಗಳು, ಸಾರ್ವಜನಿಕ ಸಮಸ್ಯೆಗಳು ಹಾಗೂ ಅಭಿವೃದ್ಧಿ ಪರ ಸುದ್ದಿಗಳನ್ನು ನಿಷ್ಪಕ್ಷಪಾತವಾಗಿ ಸಮಾಜದ ಮುಂದಿಟ್ಟಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲೂ ಗಮನಾರ್ಹ ಕೃಷಿ ಮಾಡಿರುವ ಇವರು ಹಲವು ಕೃತಿಗಳ ರಚನೆಯಲ್ಲಿ ಕನ್ನಡ ಸಾಹಿತ್ಯ ಲೋಕಕ್ಕೆ ಕೊಡುಗೆ ನೀಡಿದ್ದಾರೆ.
ಸಾಧನೆಗಳು: ‘ಉದಯವಾಣಿ’ ದಿನಪತ್ರಿಕೆಯಲ್ಲಿ ‘ಸಮಾಚಾರ ಡೈರಿ’ ವರದಿಗಾರನ ಡೈರಿ ಎಂಬ 350ಕ್ಕೂ ಹೆಚ್ಚಿನ ಅಂಕಣ ಬರಹಗಳನ್ನು ಬರೆದಿದ್ದಾರೆ. ಔಷಧೀಯ ಸಸ್ಯಗಳ ಪರಿಚಯದ ‘ಮೂಲಿಕೆ-ಮಾಲಿಕೆ’ ಚಿತ್ರ ಮಾಹಿತಿ -ಸುಮಾರು 250 ಲೇಖನಗಳನ್ನು ಪ್ರಕಟಿಸಿದ್ದಾರೆ. ಪತ್ರಕರ್ತರ ಹಕ್ಕುಗಳ ರಕ್ಷಣೆಗಾಗಿ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ನಿರಂತರವಾಗಿ ಶ್ರಮಿಸಿರುವ ಇವರ ಅತ್ಯಮೂಲ್ಯ ಸೇವೆಯನ್ನು ಗುರುತಿಸಿ ಹಲವು ಸಂಘ-ಸಂಸ್ಥೆಗಳು ಹಾಗೂ ಧಾರ್ಮಿಕ ಸಂಸ್ಥೆಗಳು ಈಗಾಗಲೇ ವಿವಿಧ ಪ್ರಶಸ್ತಿ-ಸನ್ಮಾನ ನೀಡಿ ಗೌರವಿಸಿವೆ.
ಸೇವೆಗಳು ಮತ್ತು ಹುದ್ದೆಗಳು:ವರದಿಗಾರ: 33 ವರ್ಷಗಳ ಕಾಲ ‘ಉದಯವಾಣಿ’ ದಿನಪತ್ರಿಕೆಯ ವರದಿಗಾರ.
ಕಾರ್ಯದರ್ಶಿ: ವಿಠಲ ವಿದ್ಯಾಸಂಸ್ಥೆ, ವಿಟ್ಲ – ಇದರ ಕಾರ್ಯದರ್ಶಿಯಾಗಿ ಕಳೆದ 15 ವರ್ಷಗಳಿಂದ ಸೇವೆ.
ನಿರ್ದೇಶಕ: ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್‌ನ ನಿರ್ದೇಶಕ (14 ವರ್ಷಗಳಿಂದ).
ಉಪಾಧ್ಯಕ್ಷ: ವಿಟ್ಲ ಭಾರತ್ ಸೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷ.
ಆಡಳಿತ ಸಮಿತಿ ಸದಸ್ಯ: ವಿಠಲ ಸುಪ್ರಜೀತ್ ಐ.ಟಿ.ಐ. ಆಡಳಿತ ಸಮಿತಿಯ ಸದಸ್ಯ.
ಜಿರ್ಣೋದ್ಧಾರ ಸಮಿತಿ ಕಾರ್ಯದರ್ಶಿ: ವಿಟ್ಲ ಸೀಮೆ ದೇಗುಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ಬ್ರಹ್ಮಕಲಶೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ.
ಸ್ಥಾಪಕ ಅಧ್ಯಕ್ಷ: ವಿಟ್ಲ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು








