


ಮಂಡ್ಯ: ಇಲ್ಲಿರುವ ಮಹಿಳಾ ಸರ್ಕಾರಿ ಕಾಲೇಜು ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ದಾಖಲೆ ನಿರ್ಮಿಸಿದ್ದು, 2025-26 ನೇ ಸಾಲಿನ ವಿವಿಧ ಪದವಿ ಪರೀಕ್ಷೆಗಳ ಮೌಲ್ಯಮಾಪನ ಕಾರ್ಯವನ್ನ, ಕೊನೆಯ ಪರೀಕ್ಷೆ ಮುಗಿದ ದಿನವೇ ಫಲಿತಾಂಶ ಪ್ರಕಟಿಸುವ ಮೂಲಕ ರಾಜ್ಯದ ಗಮನ ಸೆಳೆದಿದೆ.
ಸರ್ಕಾರಿ ಸಂಸ್ಥೆಯೊಂದು ಇಷ್ಟೊಂದು ವೇಗವಾಗಿ ಫಲಿತಾಂಶ ನೀಡಿರುವುದು ಕಾಲೇಜಿನ ಪರಿಶ್ರಮದ ಹೆಗ್ಗುರುತಾಗಿದೆ. ಕಾಲೇಜಿನ ಬಿಎ, ಬಿಕಾಂ, ಬಿಬಿಎ, ಬಿಎಸ್ಸಿ, ಬಿಸಿಎ, ಬಿಎಫ್ಎಸ್ಐ, ಇ-ಕಾಮರ್ಸ್ ಪದವಿ ಪರೀಕ್ಷೆಗಳು ಕಳೆದ ಜನವರಿ 2 ರಿಂದ ಜನವರಿ 31 ರ ವರೆಗೆ ನಡೆದಿದ್ದವು ಪರೀಕ್ಷೆಗಳು ಜನವರಿ 31 ರಂದು ಮುಕ್ತಾಯಗೊಂಡಿದ್ದು ಅದೇ ದಿನ ಸಂಜೆ 4:00 ಕ್ಕೆ ಮೌಲ್ಯಮಾಪನ ಪ್ರಕ್ರಿಯೆಯನ್ನ ಯಶಸ್ವಿಯಾಗಿ ಮುಕ್ತಾಯಗೊಳಿಸಲಾಯಿತು. ವಿಶೇಷವೆಂದರೆ ಮೌಲ್ಯಮಾಪನ ಮುಗಿದ ಕೇವಲ 1 ಗಂಟೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಗುರುರಾಜ ಪ್ರಭು ಕೆ. ಅವರು ಫಲಿತಾಂಶವನ್ನ ಬಿಡುಗಡೆ ಮಾಡಿದರು.
ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ಶಿಸ್ತುಬದ್ದ ಕೆಲಸ ಹಾಗೂ ತಂತ್ರಜ್ಞಾನದ ಸಮರ್ಪಕ ಬಳಕೆಯಿಂದಾಗಿ ಈ ಸಾಧನೆಯನ್ನ ಸರ್ಕಾರಿ ಪದವಿ ಕಾಲೇಜು ಮಾಡಲು ಸಾಧ್ಯವಾಗಿದೆ ಎಂದು ವರದಿ ಮೂಲಕ ತಿಳಿದು ಬಂದಿದೆ.








