Saturday, October 31, 2026
spot_imgspot_img
spot_imgspot_img

ತಮಿಳುನಾಡು | ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಗುಡ್ ನ್ಯೂಸ್: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ಸಡಿಲಿಕೆ ಘೋಷಿಸಿದ ಸಿಎಂ ವಿಜಯ್

- Advertisement -
- Advertisement -

ಚೆನ್ನೈ, ಅ.31: ತಮಿಳುನಾಡಿನಲ್ಲಿ ಸರ್ಕಾರಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಸಿಹಿಸುದ್ದಿ ನೀಡಿದ್ದಾರೆ. ಸರ್ಕಾರಿ ಉದ್ಯೋಗಗಳ ನೇಮಕಾತಿಗೆ ಸಂಬಂಧಿಸಿದ ಗರಿಷ್ಠ ವಯೋಮಿತಿಯಲ್ಲಿ ಐದು ವರ್ಷಗಳ ಸಡಿಲಿಕೆ ಘೋಷಿಸಿದ್ದಾರೆ.

ಸರ್ಕಾರಿ ಉದ್ಯೋಗಾಕಾಂಕ್ಷಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸಲು ಹೆಚ್ಚಿನ ಸಮಯಾವಕಾಶ ನೀಡಬೇಕೆಂದು ಸಲ್ಲಿಸಿದ್ದ ಮನವಿಗಳಿಗೆ ಸ್ಪಂದಿಸಿ ರಾಜ್ಯ ಸರ್ಕಾರ ಈ ನಿರ್ಧಾರ ಕೈಗೊಂಡಿದೆ.

ಈ ಹೊಸ ವಯೋಮಿತಿ ಸಡಿಲಿಕೆ ಐದು ವರ್ಷಗಳ ಕಾಲ ಜಾರಿಯಲ್ಲಿರಲಿದ್ದು, ಈಗಾಗಲೇ ಚಾಲ್ತಿಯಲ್ಲಿರುವ ವಯೋಮಿತಿ ರಿಯಾಯಿತಿಗಳಿಗೂ ಹೆಚ್ಚುವರಿಯಾಗಿ ಅನ್ವಯವಾಗಲಿದೆ.

ಪರಿಷ್ಕೃತ ನಿಯಮಗಳ ಪ್ರಕಾರ, ಗ್ರೂಪ್-1 ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 32ರಿಂದ 37 ವರ್ಷಕ್ಕೆ ಹಾಗೂ ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ 37ರಿಂದ 42 ವರ್ಷಕ್ಕೆ ಹೆಚ್ಚಿಸಲಾಗಿದೆ.
ಭಿನ್ನ ಸಾಮರ್ಥ್ಯದ ಅಭ್ಯರ್ಥಿಗಳಿಗೆ ಗ್ರೂಪ್-1 ಹುದ್ದೆಗಳ ಗರಿಷ್ಠ ವಯೋಮಿತಿಯನ್ನು ಸಾಮಾನ್ಯ ವರ್ಗದಲ್ಲಿ 42ರಿಂದ 47 ವರ್ಷಕ್ಕೆ ಹಾಗೂ ಮೀಸಲಾತಿ ವರ್ಗದಲ್ಲಿ 47ರಿಂದ 52 ವರ್ಷಕ್ಕೆ ಏರಿಸಲಾಗಿದೆ.

ಇನ್ನು ಗ್ರೂಪ್-2 ಮತ್ತು ಗ್ರೂಪ್-3ಎ ಹುದ್ದೆಗಳಿಗೆ ಸಾಮಾನ್ಯ ವರ್ಗದ ಅಭ್ಯರ್ಥಿಗಳ ಗರಿಷ್ಠ ವಯೋಮಿತಿಯನ್ನು 30ರಿಂದ 35 ವರ್ಷಕ್ಕೆ ಹೆಚ್ಚಿಸಲಾಗಿದೆ. ಭಿನ್ನ ಸಾಮರ್ಥ್ಯದ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40ರಿಂದ 45 ವರ್ಷಕ್ಕೆ ವಯೋಮಿತಿ ವಿಸ್ತರಿಸಲಾಗಿದೆ. ಮೀಸಲಾತಿ ವರ್ಗದ ಅಭ್ಯರ್ಥಿಗಳಿಗೆ ಈ ಹುದ್ದೆಗಳಲ್ಲಿ ಗರಿಷ್ಠ ವಯೋಮಿತಿ ಇರುವುದಿಲ್ಲ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ.

ಸರ್ಕಾರದ ಈ ನಿರ್ಧಾರದಿಂದ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಸಾವಿರಾರು ಅಭ್ಯರ್ಥಿಗಳಿಗೆ ಅನುಕೂಲವಾಗುವ ನಿರೀಕ್ಷೆಯಿದೆ.

- Advertisement -

Related news

error: Content is protected !!