Thursday, July 23, 2026
spot_imgspot_img
spot_imgspot_img

ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ್ದಕ್ಕಾಗಿ ಸರಕಾರಿ ಬ್ಯಾಂಕುಗಳಿಂದ ಐದು ವರ್ಷಗಳಲ್ಲಿ 8,621.12 ಕೋಟಿ ರೂ.ದಂಡ ಸಂಗ್ರಹ: ಅತಿ ಹೆಚ್ಚು ದಂಡ ವಸೂಲಿ ಮಾಡಿರುವ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ನಾಲ್ಕನೇ ಸ್ಥಾನ: ವರದಿ

- Advertisement -
- Advertisement -

ಹೊಸದಿಲ್ಲಿ: ಸಾರ್ವಜನಿಕ ವಲಯದ ಬ್ಯಾಂಕುಗಳು 2020-21 ಮತ್ತು 2024-25ರ ನಡುವೆ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ್ದಕ್ಕಾಗಿ ಗ್ರಾಹಕರಿಂದ 8,621.12 ಕೋಟಿ ರೂ.ದಂಡವನ್ನು ಸಂಗ್ರಹಿಸಿದ್ದು, ಉತ್ತರ ಪ್ರದೇಶ, ತಮಿಳುನಾಡು ಮತ್ತು ಮಹಾರಾಷ್ಟ್ರಗಳು ಪಟ್ಟಿಯ ಅಗ್ರಸ್ಥಾನಗಳಲ್ಲಿವೆ ಎಂದು ಸಂಸದೀಯ ಸಮಿತಿಯೊಂದರ ಮುಂದೆ ಮಂಡಿಸಲಾದ ಅಂಕಿಅಂಶಗಳು ತೋರಿಸಿವೆ ಎಂದು deccanherald.com ವರದಿ ಮಾಡಿದೆ.


ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದವರಿಗೆ ದಂಡ ವಿಧಿಸುವುದನ್ನು ಕೈ ಬಿಡುವಂತೆ ಬ್ಯಾಂಕುಗಳಿಗೆ ಲೋಕಸಭೆಯ ಅರ್ಜಿಗಳ ಕುರಿತ ಸಮಿತಿಯು ಆಗ್ರಹಿಸಿದೆ. ಅತಿ ಹೆಚ್ಚು ದಂಡವನ್ನು ವಸೂಲಿ ಮಾಡಿರುವ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕರ್ನಾಟಕ ನಾಲ್ಕನೇ ಮತ್ತು ಬಿಹಾರ ಐದನೇ ಸ್ಥಾನಗಳಲ್ಲಿವೆ.

ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಉತ್ತರ ಪ್ರದೇಶದಲ್ಲಿ ಸರಕಾರಿ ಬ್ಯಾಂಕುಗಳು ಐದು ವರ್ಷಗಳಲ್ಲಿ 1,233.97 ಕೋ.ರೂ.ಗಳ ದಂಡವನ್ನು ಸಂಗ್ರಹಿಸಿದ್ದರೆ,ನಂತರದ ಸ್ಥಾನಗಳಲ್ಲಿ ತಮಿಳುನಾಡು (1221.38 ಕೋಟಿ ರೂ.),ಮಹಾರಾಷ್ಟ್ರ (1,088.18 ಕೋಟಿ ರೂ.),ಕರ್ನಾಟಕ (529.20 ಕೋಟಿ ರೂ.) ಮತ್ತು ಬಿಹಾರ (464.53 ಕೋಟಿ ರೂ.) ರಾಜ್ಯಗಳಿವೆ.

2020-21 ಮತ್ತು 2023-24ರ ನಡುವೆ ದಂಡ ಸಂಗ್ರಹದಲ್ಲಿ ಏರಿಕೆಯಾಗಿದ್ದರೆ,2024-25ರಲ್ಲಿ ಕಡಿಮೆಯಾಗಿದೆ ಎಂದು ವಿಶ್ಲೇಷಣೆಯು ತೋರಿಸಿದೆ.

ಎಸ್‌ಬಿಐ ಮಾರ್ಚ್ 2020ರಲ್ಲಿ ದಂಡ ವಿಧಿಸುವುದನ್ನು ಹಿಂದೆಗೆದುಕೊಂಡಿದ್ದರೂ,2020-21ರಲ್ಲಿ 1,148.71 ಕೋಟಿ ರೂ.ಗಳಷ್ಟಿದ್ದ ಸರಕಾರಿ ಬ್ಯಾಂಕುಗಳಿಂದ ವಾರ್ಷಿಕ ದಂಡ ಸಂಗ್ರಹ ಮುಂದಿನ ಮೂರು ಹಣಕಾಸು ವರ್ಷಗಳಲ್ಲಿ ಅನುಕ್ರಮವಾಗಿ 1415.65 ಕೋಟಿ ರೂ.,1785.90 ಕೋಟಿ ರೂ. ಮತ್ತು 2,225.10 ಕೋಟಿ ರೂ.ಗೆ ಏರಿಕೆಯಾಗಿತ್ತು,ಆದರೆ 2024-25ರಲ್ಲಿ 2.045.74 ಕೋಟಿ ರೂ.ಗೆ ಇಳಿದಿತ್ತು.

2024-25ರಲ್ಲಿ ಒಟ್ಟಾರೆ ದಂಡ ಸಂಗ್ರಹದಲ್ಲಿ ಕುಸಿತ ಕಂಡು ಬಂದಿದ್ದರೂ,2023-24ಕ್ಕೆ ಹೋಲಿಸಿದರೆ ಆರು ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ 2024-25ರಲ್ಲಿ ದಂಡ ಸಂಗ್ರಹದಲ್ಲಿ ಏರಿಕೆ ಕಂಡು ಬಂದಿತ್ತು.

ಉಳಿತಾಯ ಖಾತೆಗಳಲ್ಲಿ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ ಗ್ರಾಹಕರಿಗೆ ದಂಡ ವಿಧಿಸುವುದನ್ನು ಕೈಬಿಡುವ ಕೆಲವು ಬ್ಯಾಂಕುಗಳ ನಿರ್ಧಾರ ಸಂಬಂಧಿಸಿದ ಎಲ್ಲರ ಅತ್ಯುತ್ತಮ ಹಿತಾಸಕ್ತಿಗೆ ಅನುಗುಣವಾಗಿದೆ ಎಂಬ ದೃಢವಾದ ಅಭಿಪ್ರಾಯವನ್ನು ತಾನು ಹೊಂದಿರುವುದಾಗಿ ಸಂಸದೀಯ ಸಮಿತಿಯು ಹೇಳಿದೆ.

ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಬ್ಯಾಂಕುಗಳು ಚಾಲ್ತಿ ಖಾತೆಗಳನ್ನು ಹೊಂದಿರುವ ಸಣ್ಣ ಉದ್ಯಮಿಗಳು,ಸ್ವಯಂ ಉದ್ಯೋಗಿಗಳು ಮತ್ತು ಸಣ್ಣ ವ್ಯಾಪಾರಿಗಳನ್ನು ಸಕಾರಾತ್ಮಕವಾಗಿ ನೋಡಬೇಕು,ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳದ್ದಕ್ಕಾಗಿ ಪದೇಪದೇ ದಂಡಗಳನ್ನು ವಿಧಿಸುವ ಮೂಲಕ ಅವರಿಗೆ ತೊಂದರೆ ನೀಡಬಾರದು ಎಂದೂ ಸಮಿತಿಯು ಹೇಳಿದೆ.

- Advertisement -

Related news

error: Content is protected !!