


ಉಳ್ಳಾಲ: ಪೂರ್ವಭಾವಿ ಸಭೆಯಲ್ಲಿ ಅಭಿವೃದ್ಧಿ ಕುರಿತು ಚರ್ಚೆ ನಡೆಯಬೇಕು. ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಯೋಜನೆ ರೂಪಿಸಬೇಕು. ಸಭೆಯಲ್ಲಿ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ನಿಮ್ಮ ವಾರ್ಡ್‌ನ ಪ್ರಮುಖ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದರೆ ಅವುಗಳಿಗೆ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದು ಉಳ್ಳಾಲ ನಗರಸಭೆ 2026-27 ಸಾಲಿನ ಬಜೆಟ್ ಮಂಡನೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿದ್ದ, ಉಳ್ಳಾಲ ನಗರಸಭೆಯ ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಸಲಹೆ ನೀಡಿದರು. ಸಭೆಯಲ್ಲಿ ಉಳ್ಳಾಲ ಬೈಲ್, ಸುಭಾಷ್ ನಗರ, ಚೆಂಬುಗುಡ್ಡೆ, ಕೃಷ್ಣ ನಗರ ಮುಂತಾದ ಪ್ರದೇಶಗಳಲ್ಲಿ ಚರಂಡಿ ಸಮಸ್ಯೆಯಿಂದ ಉಂಟಾಗುತ್ತಿರುವ ತೊಂದರೆ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಯ ಗಮನ ಸೆಳೆದರು.ಇತ್ತೀಚೆಗೆ ನಿರ್ಮಾಣಗೊಂಡ ಸ್ಮಶಾನದಲ್ಲಿ ಮೂರು ಲಕ್ಷ ರೂ. ಮೌಲ್ಯದ ಕಬ್ಬಿಣ ಕಳುವಾಗಿದೆ. ಇದಕ್ಕೆ ಹೊಣೆ ಯಾರು? ಜನನ-ಮರಣ ಪ್ರಮಾಣಪತ್ರಗಳನ್ನು ಇಂಟರ್‌ನೆಟ್‌ನಲ್ಲಿ ಪಡೆಯುವ ವ್ಯವಸ್ಥೆ ರಾಜ್ಯದಲ್ಲೂ ಜಾರಿಯಾಗಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷ ಹನೀಫ್ ಮಾತನಾಡಿ, ಮೀನುಗಾರಿಕೆ ನಡೆಯುವ ಸ್ಥಳಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಇದಕ್ಕೆ ಪರಿಹಾರ ಏಕೆ ಇಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ನಾಯಿಗಳಿಗೆ ಶೆಡ್ ನಿರ್ಮಾಣ ಮಾಡಲು ಸರ್ಕಾರದ ಆದೇಶವಿದೆ. ನಾಯಿಗಳಿಂದ ಹೆಚ್ಚಿನ ತೊಂದರೆ ಆಗುತ್ತಿರುವುದರಿಂದ ಶೆಡ್ ನಿರ್ಮಾಣ ಮಾಡಲಾಗುವುದು. ದಾರಿಯಲ್ಲಿ ಯಾರೂ ನಾಯಿಗಳಿಗೆ ಆಹಾರ ಹಾಕಬಾರದು ಎಂದು ಸೂಚಿಸಿದರು.ಅಕ್ಕರೆ ಕೆರೆಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗುತ್ತದೆ. ಇದಕ್ಕೆ ಪರಿಹಾರ ಸಿಗುತ್ತಿಲ್ಲ. ಚರಂಡಿ ವ್ಯವಸ್ಥೆ ಕಲ್ಪಿಸಿ ಪರಿಹಾರ ಒದಗಿಸಬೇಕು ಎಂದು ಮಹಿಳೆಯೊಬ್ಬರು ಮನವಿ ಮಾಡಿದರು.ಸುಭಾಷ್ ನಗರ ವಾರ್ಡ್‌ನಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಹಲವು ಮನೆಗಳಿಗೆ ಹಾನಿಯಾಗುತ್ತಿದೆ. ಕೈಕೋ ಪ್ರದೇಶದಲ್ಲಿ ಅಂಗನವಾಡಿ ನಿರ್ಮಾಣಕ್ಕಾಗಿ ಅರ್ಜಿ ಸಲ್ಲಿಸಿ ಮೂರು ವರ್ಷವಾದರೂ ಕಾಮಗಾರಿ ಆರಂಭವಾಗಿಲ್ಲ. ಈ ಬಗ್ಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಮಾಜಿ ಕೌನ್ಸಿಲರ್ ಬಶೀರ್ ಮನವಿ ಮಾಡಿದರು.ಉಳಿಯದಲ್ಲಿ ಜಲಸಿರಿ ಯೋಜನೆಯಡಿ ಪೈಪ್‌ಲೈನ್ ಕಾಮಗಾರಿ ಕೆಲವು ಮನೆಗಳಿಗೆ ಆಗಿಲ್ಲ. ಇದರಿಂದ ಅನೇಕ ಕುಟುಂಬಗಳಿಗೆ ತೊಂದರೆ ಉಂಟಾಗಿದೆ. ಈ ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮಾಜಿ ಕೌನ್ಸಿಲರ್ ವೀಣಾ ಜಿಲ್ಲಾಧಿಕಾರಿಯ ಗಮನ ಸೆಳೆದರು. ಜಲಸಿರಿ ಯೋಜನೆಯಡಿ ಕುಡಿಯುವ ನೀರಿನ ಕಾಮಗಾರಿಯಿಂದ ರಸ್ತೆಗಳನ್ನು ಅಗೆದು ಬಿಟ್ಟು ಕೇಬಲ್ ಕತ್ತರಿಸಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ನಿಝಾಮ್ ವಿನಂತಿಸಿದರು.ಬಡವರು ತೆರಿಗೆಗಳನ್ನು ಸಮಯಕ್ಕೆ ಪಾವತಿಸುತ್ತಾರೆ, ಆದರೆ ಬಲಾಢ್ಯರು ಪಾವತಿಸುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಜೋರಾಗಿ ಮಳೆ ಬಂದಾಗ ಹಲವು ಮನೆಗಳಿಗೆ ಹಾನಿಯಾಗುತ್ತದೆ. ರಾಜಕಾಲುವೆ ಸಮಸ್ಯೆ ಶೀಘ್ರ ಇತ್ಯರ್ಥಗೊಳ್ಳಬೇಕು ಎಂದು ಮಾಜಿ ಉಪಾಧ್ಯಕ್ಷ ಅಯ್ಯೂಬ್ ಜಿಲ್ಲಾಧಿಕಾರಿಯ ಗಮನ ಸೆಳೆದರು.ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದರುನಗರಸಭೆಯ 31 ವಾರ್ಡ್‌ಗಳಲ್ಲಿ ಕೆಲವೇ ಮಾಜಿ ಕೌನ್ಸಿಲರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ತಮ್ಮ ತಮ್ಮ ವಾರ್ಡ್‌ಗಳ ಸಮಸ್ಯೆಗಳನ್ನು ಜಿಲ್ಲಾಧಿಕಾರಿಯ ಮುಂದಿಟ್ಟರು.ಪೌರಾಯುಕ್ತ ಸಂತೋಷ್ ಹಾಗೂ ಲೆಕ್ಕಾಧಿಕಾರಿ ವಾಸುದೇವ ಸಭೆಯಲ್ಲಿ ಉಪಸ್ಥಿತರಿದ್ದರು.








