Tuesday, August 25, 2026
spot_imgspot_img
spot_imgspot_img

ಉಪ್ಪಿನಂಗಡಿ: ಮಠದ ಹೆಸರಿನಲ್ಲಿ ಹಣ ಕಸಿಯಲು ಯತ್ನ – ಸಹಾಯಾರ್ಥಿಗೆ ಫೋನ್ ಮೂಲಕ ವಂಚನೆ

- Advertisement -
- Advertisement -

ಉಪ್ಪಿನಂಗಡಿ: ಆರೋಗ್ಯ ಸಂಬಂಧಿ ಸಂಕಷ್ಟದಲ್ಲಿದ್ದ ವ್ಯಕ್ತಿಗೆ ಆರ್ಥಿಕ ಸಹಾಯ ಬಯಸಿ ಸಹಾಯಕ್ಕಾಗಿ ಮನವಿ ಪ್ರಕಟವಾದಾಗ ಅದರಲ್ಲಿದ್ದ ಸಂಪರ್ಕ ಸಂಖ್ಯೆಯನ್ನು ಬಳಸಿ ಮಂತ್ರಾಲಯದ ಶ್ರೀ ಗುರು ರಾಯರ ಮಠದ ಹೆಸರನ್ನು ದುರ್ಬಳಕೆ ಮಾಡಿಕೊಂಡು ವಂಚಿಸಲು ಯತ್ನಿಸಿದ ಘಟನೆಯೊಂದು ವರದಿಯಾಗಿದೆ.

ಸಮಾಜಮುಖಿ ಜೀವನ ನಡೆಸುತ್ತಿದ್ದ ಗೋಳಿತೊಟ್ಟು ಗ್ರಾಮದ ಸುಲ್ತಾಜೆ ಮನೆ ನಿವಾಸಿ ಪ್ರಸಾದ್ ಕೆ.ಪಿ.ಯವರು ಪ್ರಸಕ್ತ ಆರೋಗ್ಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದು, ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಅವರ ಸಮಸ್ಯೆಯನ್ನು ಮುಂದಿರಿಸಿ ಸಹೃದಯೀ ಬಂಧುಗಳ ಆರ್ಥಿಕ ಸಹಕಾರವನ್ನು ಆಪೇಕ್ಷಿಸಿ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಲಾಗಿತ್ತು. ಈ ವೇಳೆ ನೀಡಲಾದ ಪ್ರಸಾದ್‌ರವರ ಪತ್ನಿಯ ಮೊಬೈಲ್ ಸಂಖ್ಯೆಯನ್ನು ಬಳಸಿ ಶುಕ್ರವಾರದಂದು ಅವರಿಗೆ ಪೋನ್ ಕರೆ ಬಂದಿದ್ದು, ಕರೆಯಲ್ಲಿ ತಾವು ಮಂತ್ರಾಲಯದ ಶ್ರೀ ರಾಯರ ಮಠದಿಂದ ಮಾತನಾಡುತ್ತಿದ್ದೇವೆ ಎಂದೂ, ನಿಮ್ಮ ಸಮಸ್ಯೆಯ ಬಗ್ಗೆ ತಿಳಿದುಕೊಂಡೆವು. ಮಠದಿಂದ ನಿಮಗೆ 3 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುತ್ತೇವೆ. ಆದರೆ ಸರಕಾರಿ ನಿಯಮದಂತೆ ಶೇ. 10 ರಷ್ಟು ತೆರಿಗೆ ಪಾವತಿಸಬೇಕಾಗಿರುವುದರಿಂದ ನೀವು 30 ಸಾವಿರ ರೂಪಾಯಿ ಹಣವನ್ನು ಮೊದಲಾಗಿ ನಮಗೆ ಪಾವತಿಸಬೇಕಾಗುತ್ತದೆ ಎಂದು ತಿಳಿಸಲಾಯಿತು.ಮಠಕ್ಕೆ ಯಾವುದೇ ವಿದ್ಯುಕ್ತ ಮನವಿ ಸಲ್ಲಿಸದೆ 3 ಲಕ್ಷದಷ್ಟು ಮೊತ್ತವನ್ನು ಪಾವತಿ ಮಾಡುವ ವ್ಯವಸ್ಥೆಯ ಬಗ್ಗೆ ಸಂಶಯಿತರಾದ ಆಕೆ ಈ ವಿಚಾರವನ್ನು ತಕ್ಷಣವೇ ಮಾಧ್ಯಮದ ಪ್ರತಿನಿಧಿಗಳ ಗಮನಕ್ಕೆ ತಂದರು. ಮಾಧ್ಯಮದ ಮಂದಿ ನೀಡಲಾದ ಮೊಬೈಲ್ ಸಂಖ್ಯೆಗೆ ಕರೆ ಮಾಡಿದಾಗಲೂ ತಾನು ಶ್ರೀ ಮಠದಿಂದ ಮಾತನಾಡುತ್ತಿದ್ದೇನೆಂದೂ, ನಾವು ಹಣ ಪಾವತಿಸಿದ ಬಳಿಕ ಕೆಲವರು ತೆರಿಗೆ ಹಣವನ್ನು ನಮಗೆ ವಾಪಾಸು ಕಳುಹಿಸದ ಕಾರಣಕ್ಕೆ ಮುಂಗಡ ಹಣವನ್ನು ನಾವು ಬಯಸಿರುವುದಾಗಿ ಆ ವ್ಯಕ್ತಿ ತಿಳಿಸಿದ. ಈತನ ಮಾತನ್ನು ಕೇಳಿ ಸಂಶಯಿತರಾದ ಮಾಧ್ಯಮದ ಮಂದಿ ಈ ವಿಚಾರದ ಬಗ್ಗೆ ಪೊಲೀಸ್‌ ಅಧಿಕಾರಿಗಳಿಗೆ ಹಾಗೂ ಮಂತ್ರಾಲಯದ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ ಟೂ ಕಾಲ‌ರ್ ನಲ್ಲಿ ಮೊಬೈಲ್ ಸಂಖ್ಯೆಯನ್ನು ಪರಿಶೀಲಿಸಿದಾಗ ಸದ್ರಿ ಮೊಬೈಲ್ ಸಂಖ್ಯೆ ಸಾಯೀದಾ ತಸ್ಲಿಮ್ ಎಂಬಾಕೆಯ ಹೆಸರಿನಲ್ಲಿರುವುದು ಕಂಡು ಬಂದಿದೆ. ಮಂತ್ರಾಲಯ ಮಠದ ಅಧಿಕಾರಿಗಳು ಈ ಮೊಬೈಲ್ ಸಂಖ್ಯೆಯಾಗಲಿ, ಈ ರೀತಿಯ ಹಣ ಪಾವತಿಸುವ ವ್ಯವಸ್ಥೆಯಾಗಲಿ ನಮ್ಮಲ್ಲಿ ಇರುವುದಿಲ್ಲವೆಂದು ತಿಳಿಸಿದ್ದು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕೆಂದು ತಿಳಿಸಿದ್ದಾರೆ.ಪ್ರಖ್ಯಾತ ಧಾರ್ಮಿಕ ಕ್ಷೇತ್ರದ ಹೆಸರನ್ನು ದುರ್ಬಳಕೆ ಮಾಡಿಕೊಂಡು, ಸಾಮಾಜಿಕ ಜಾಲತಾಣಗಳಲ್ಲಿ ಅವರ ಸಂಪರ್ಕ ಸಂಖ್ಯೆಯನ್ನು ಧಾರ್ಮಿಕ ಕ್ಷೇತ್ರದ ಸಂಖ್ಯೆಯಂತೆ ಬಿಂಬಿಸಿ, ಆರ್ಥಿಕ ಸಹಕಾರದ ನೆಪದಲ್ಲಿ ಸಂಕಷ್ಟದಲ್ಲಿರುವ ಮಂದಿಯನ್ನು ವಂಚಿಸಲು ಯತ್ನಿಸುವ ದುರುಳರನ್ನು ಪತ್ತೆ ಹಚ್ಚಿ ಕಾನೂನು ಕ್ರಮಕ್ಕೆ ಒಳಪಡಿಸುವ ಬಗ್ಗೆ ಪೊಲೀಸ್‌ ಇಲಾಖೆ ಗಮನ ಹರಿಸಬೇಕಾಗಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ

- Advertisement -

Related news

error: Content is protected !!