- Advertisement -
- Advertisement -



ಬಾಗಲಕೋಟೆ: ಜೇಬಿನಲ್ಲಿಟ್ಟುಕೊಂಡಿದ್ದ ಪವರ್ ಬ್ಯಾಂಕ್ ಏಕಾಏಕಿ ಸ್ಫೋಟಗೊಂಡ ಪರಿಣಾಮ ಯುವಕನೊಬ್ಬ ಗಾಯಗೊಂಡಿರುವ ಘಟನೆ ಜಮಖಂಡಿಯಲ್ಲಿ ನಡೆದಿದೆ.
ಸ್ಥಳೀಯ ನಿವಾಸಿ ಸಿದ್ದು ಸಾಳೊಂಕಿ (21) ಗಾಯಗೊಂಡ ಯುವಕ. ಜಮಖಂಡಿ ನಗರದ ಬಸ್ ನಿಲ್ದಾಣದ ಬಳಿಯ ಎಟಿಎಂ ಹತ್ತಿರ ಈ ಘಟನೆ ಸಂಭವಿಸಿದೆ.
ತನ್ನ ಜೇಬಿನಲ್ಲಿ ಪವರ್ ಬ್ಯಾಂಕ್ ಇಟ್ಟುಕೊಂಡು ನಡೆದುಕೊಂಡು ಹೋಗುತ್ತಿದ್ದಾಗ, ಅದು ಇದ್ದಕ್ಕಿದ್ದಂತೆ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಸ್ಫೋಟದ ತೀವ್ರತೆಗೆ ಪವರ್ ಬ್ಯಾಂಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಯುವಕ ಧರಿಸಿದ್ದ ಟಿ-ಶರ್ಟ್ ಹಾಗೂ ಪ್ಯಾಂಟ್‌ಗೂ ಬೆಂಕಿ ವ್ಯಾಪಿಸಿದೆ.
ಪರಿಣಾಮವಾಗಿ ಯುವಕನ ಕಾಲು, ಹೊಟ್ಟೆ ಹಾಗೂ ಸೊಂಟದ ಭಾಗಕ್ಕೆ ಸುಟ್ಟ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆತನನ್ನು ರಕ್ಷಿಸಿ ಜಮಖಂಡಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಗಂಭೀರ ಪ್ರಾಣಾಪಾಯ ಸಂಭವಿಸಿಲ್ಲ, ಯುವಕ ಪ್ರಸ್ತುತ ಚೇತರಿಸಿಕೊಳ್ಳುತ್ತಿದ್ದಾನೆ ಎಂಬ ಮಾಹಿತಿ ಲಭಿಸಿದೆ.
- Advertisement -








