




ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಂಡೇಬಲ್ ಜಿಲ್ಲೆಯಲ್ಲಿ ʻಆಪರೇಷನ್ ಅರಹಮಾʼ ಕಾರ್ಯಾಚರಣೆ ನಡೆಯುತ್ತಿದ್ದು, ಉಗ್ರರ ವಿರುದ್ಧ ಭಾರತೀಯ ಸೈನಿಕರು ಸಮರ ಸಾರಿದ್ದಾರೆ. ರಾತ್ರಿಯಿಡೀ ನಡೆದ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ಓರ್ವ ಪಾಕಿಸ್ತಾನಿ ಮೂಲದ ಉಗ್ರ ಸಾವನ್ನಪ್ಪಿದ್ದಾನೆ ಎಂದು ಭಾರತೀಯ ಸೇನೆ ತಿಳಿಸಿದೆ.
ಗಂಡೇಬಲ್ ಜಿಲ್ಲೆಯ ಅರಹಮಾ ಪ್ರದೇಶದಲ್ಲಿ ʻಆಪರೇಷನ್ ಅರಹಮಾʼ ಕಾರ್ಯಾಚರಣೆ ಮುಂದುವರಿದಿದ್ದು, ಭದ್ರತಾ ಪಡೆಗಳು ಶೋಧ ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ ಜೊತೆಗೆ ಭಾರತೀಯ ಸೇನೆಯ ಎರಡು ಅಸ್ಸಾಂ ರೆಜಿಮೆಂಟ್‌ಗಳು ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.
ಮಾರ್ಚ್ 31 ರ ರಾತ್ರಿ ಉಗ್ರರ ಗುಂಪು ಏಕಾಏಕಿ ಗುಂಡಿನ ದಾಳಿ ನಡೆಸಲು ಶುರು ಮಾಡಿದವು. ಬಳಿಕ ಸೇನೆಯಿಂದಲೂ ಪ್ರತಿದಾಳಿ ನಡೆಸಲಾಯಿತು. ಗುಂಡಿನ ಚಕಮಕಿ ವೇಲೆ ಓರ್ವ ಉಗ್ರ ಹತ್ಯೆಯಾಗಿದ್ದು, ಇಬ್ಬರು ಅಥವಾ ಮೂವರು ಉಗ್ರರು ಸಿಕ್ಕಿಬಿದ್ದಿದ್ದಾರೆ. ಕಾರ್ಯಾಚರಣೆ ಇನ್ನೂ ಪ್ರಗತಿಯಲ್ಲಿದೆ ಎಂದು ಶ್ರೀನಗರದ ಚಿನಾರ್ ಕಾರ್ಪ್ಸ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಉಗ್ರರ ಉಪಸ್ಥಿತಿಯ ಬಗ್ಗೆ ಗುಪ್ತಚರ ಮೂಲಗಳಿಂದ ಖಚಿತ ಮಾಹಿತಿ ಪಡೆದ ಸೇನೆ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ(CRPF)ಯೊಂದಿಗೆ ಮಾ.31 ರ ರಾತ್ರಿ ಗಂಡರ್‌ಬಾಲ್‌ನ ಅರಹಮ್ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಅನುಮಾನಾಸ್ಪದ ಚಲನವಲನಗಳನ್ನ ಗಮನಿಸಿದ ಭದ್ರತಾ ಸಿಬ್ಬಂದಿ, ಶಂಕಿತರನ್ನ ಪ್ರಶ್ನೆ ಮಾಡಿದ್ರು. ಪ್ರಶ್ನೆ ಮಾಡುತ್ತಿದ್ದಂತೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇತ್ತ ಭದ್ರತಾ ಪಡೆಗಳಿಂದಲೂ ಪ್ರತಿದಾಳಿ ನಡೆಯಿತು.
ಬುಧವಾರ (ಇಂದು) ಸತತ 2ನೇ ದಿನವೂ ಜಂಟಿ ಕಾರ್ಯಾಚರಣೆ ಮುಂದುವರಿದಿದ್ದು, ಇಡೀ ಪ್ರದೇಶದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಅಲ್ಲದೇ ಉಗ್ರರು ಹೆಚ್ಚಿನ ಸಂಖ್ಯೆಯಲ್ಲಿರುವ ಶಂಕೆಯಿದ್ದು, ಗೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ. ಜೊತೆಗೆ ಇಲ್ಲಿನ ನಾಗರಿಕರ ಸುರಕ್ಷತೆಯನ್ನೂ ಖಚಿತಪಡಿಸಿಕೊಳ್ಳಲಾಗುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.








