




ಚಿಕ್ಕಮಗಳೂರು: ಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐಟಿ ಉದ್ಯೋಗಿಯೊಬ್ಬರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಬನ್ನೂರು ಗ್ರಾಮದ ಬಳಿ ನಡೆದಿದೆ. ಗದಗ ಮೂಲದ, ಅಭಿಷೇಕ್ (27) ಮೃತ ಐಟಿ ಉದ್ಯೋಗಿ.
ಅಭಿಷೇಕ್ ತನ್ನ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಇತರೆ ಗೆಳೆಯರ ಜತೆ ಸೇರಿ ಬಾಳೆಹೊನ್ನೂರು ಸಮೀಪದ ಬನ್ನೂರು ಗ್ರಾಮಕ್ಕೆ ಬಂದಿದ್ದರು. ಸ್ನೇಹಿತರೊಂದಿಗೆ ಅದೇ ಗ್ರಾಮದಲ್ಲಿನ ಹೋಂ ಸ್ಟೇನಲ್ಲಿ ನೆಲೆಸಿದ್ದ ಇವರು, ಇಂದು ಬೇಳಿಗ್ಗೆ ಭದ್ರಾ ನದಿಗೆ ಈಜಲು ತೆರಳಿದ್ದರು. ಆ ವೇಳೆ ನೀರಿನ ಸೆಳೆತಕ್ಕೆ ಸಿಲುಕಿ ಅಭಿಷೇಕ್ ನಾಪತ್ತೆಯಾಗಿದ್ದರು.ಯುವಕ ನಾಪತ್ತೆಯ ಬಗ್ಗೆ ವಿಷಯ ತಿಳಿದ ತಕ್ಷಣ ಅಗ್ನಿಶಾಮಕ ದಳ ಸಿಬ್ಬಂದಿ ಮತ್ತು ಸ್ಥಳೀಯರು ಹುಡುಕಾಟ ನಡೆಸಿದ್ದರು. ಗಂಟೆಗಳ ಕಾಲ ನಡೆಸಿದ ಕಾರ್ಯಾಚರಣೆಯಿಂದ ಬನ್ನೂರು ಗ್ರಾಮದ ಸಮೀಪದ ನದಿಯಲ್ಲೇ ಅಭಿಷೇಕ್ ಅವರ ಮೃತದೇಹ ಪತ್ತೆಯಾಗಿದೆ.
ಈ ಘಟನೆ ಮದುವೆ ಸಂಭ್ರಮದಲ್ಲಿದ್ದ ಸ್ನೇಹಿತರು ಮತ್ತು ಕುಟುಂಬದವರಲ್ಲಿ ತೀವು ಶೋಕವನ್ನುಂಟು ಮಾಡಿದೆ. ಘಟನಾ ಸ್ಥಳಕ್ಕೆ ಧಾವಿಸಿದ ಬಾಳೆಹೊನ್ನೂರು ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು, ಪರಿಶೀಲನೆ ನಡೆಸಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








