Wednesday, July 22, 2026
spot_imgspot_img
spot_imgspot_img

ಬೇಸಿಗೆ ರಜೆ ಹೀಗಿರಲಿ…

- Advertisement -
- Advertisement -

ಅಯ್ಯೋ ‘ಈ ಏಪ್ರಿಲ್, ಮೇ ತಿಂಗಳುಗಳು ಬಂದೇ ಬಿಡ್ತಲ್ಲ… ಇನ್ನಂತೂ ಬೇಸಿಗೆ ರಜಾ ದಿನಗಳು ಶುರು. ಹೇಗಪ್ಪಾ ಈ ಮಕ್ಕಳ ಕಾಟ ತಡ್ಕೊಳ್ಳೋದು’ ಎನ್ನುವ ದೊಡ್ಡ ಯೋಚನೆ ಎಲ್ಲರಿಗೂ ಶುರು ಆಗುವ ಕಾಲವೊಂದಿತ್ತು. ಮಕ್ಕಳನ್ನು ಮನೆಯಲ್ಲಿ ಕೂಡಿ ಹಾಕಿದರೆ ಟಿವಿ ನೋಡುತ್ತಾ ಕಾರ್ಟೂನ್ ಚಾನೆಲ್ ಗಳಿಗಾಗಿ ಜಗಳ ಶುರುವಾಗುವುದು ದಿನನಿತ್ಯದ ಗೋಳಾಗಿತ್ತು. ಹಿರಿಯರಿಗಂತೂ ಅವರ ಜಗಳ ಬಿಡಿಸುವುದಲ್ಲಿಯೇ ಅರ್ಧ ದಿನ ಕಳೆದುಹೋಗಿ ‘ಯಾಕಾದರೂ ಶಾಲೆಗಳಿಗೆ ಇಷ್ಟು ರಜೆ ಕೊಡ್ತಾರೋ’ ಅನಿಸಿದ ದಿನಗಳೂ ಇಲ್ಲದಿಲ್ಲ. ಆದರೆ ಮರುಕ್ಷಣ ಬಾಲ್ಯ ನೆನಪಾಗಿ ಮೊಗದಿ ಕಿರುನಗೆ ಹೊಮ್ಮುತ್ತಿತ್ತು.

ಹೌದು… ಇದೀಗ ಮತ್ತೆ ಏಪ್ರಿಲ್ ತಿಂಗಳು ಕಾಲಿಟ್ಟಿದೆ. ಪರೀಕ್ಷೆಗಳೆಲ್ಲಾ ಮುಗಿದಿವೆ. ಮಕ್ಕಳ ಸಂಭ್ರಮ ಮೆಲ್ಲನೆ ಗರಿಗೆದರಲು ಆರಂಭವಾಗಿದೆ. ಅವರಿಗಂತೂ ಎಲ್ಲಿಲ್ಲದ ಸಂಭ್ರಮ. ಇನ್ನೆರಡು ತಿಂಗಳು ಅವರ ಸಂತಸದ ಪರ್ವಕಾಲ. ಈ ಅವಧಿಯಲ್ಲಿ ಅವರಿಗೆ ಹೋಂವರ್ಕ್ ಕಾಟ ಇಲ್ಲ. ಪರೀಕ್ಷೆಗೆ ಓದಬೇಕಿಲ್ಲ. ಮೊದಲೆಲ್ಲಾ ಪರೀಕ್ಷೆ ಮುಗಿದ ತಕ್ಷಣ ಒಂದೋ ಅಮ್ಮನ ಅಮ್ಮ ಅಜ್ಜಿ ಮನೆಗೆ ಅಥವಾ ಇನ್ನಾರಾದರೂ ನೆಂಟರ ಮನೆಗೆ ಮಕ್ಕಳ ಸವಾರಿ ಹೊರಟಿತೆಂದೇ ಅರ್ಥ. ಆದರೀಗ ಕಾಲ ಹಿಂದಿನಂತಿಲ್ಲ. ಅಪ್ಪ-ಅಮ್ಮ, ಅಜ್ಜ-ಅಜ್ಜಿ ಎಲ್ಲರೂ ಬಿಝಿಯೋ ಬಿಝಿ.

ಮಕ್ಕಳ ಬಾಲ್ಯದಲ್ಲಿನ ಈ ಬೇಸಿಗೆ ರಜೆಗಳು ಬಹಳ ವಿಶೇಷವಾದವು. ಶಾಲೆಯ ಒತ್ತಡದಿಂದ ವಿರಾಮ ಸಿಗುವ ಈ ದಿನಗಳಲ್ಲಿ ಮಕ್ಕಳು ತಮ್ಮ ಮನಸ್ಸಿಗೆ ಇಷ್ಟವಾದ ಕೆಲಸಗಳನ್ನು ಸಾಧ್ಯವಾಗುವ ಕ್ಷಣ. ಆದರೆ ಅದೇಕೋ ಇಂದು ಹಿಂದಿನಂತೆ ಮಕ್ಕಳ ನಗು, ಕೇಕೆಯ ಸದ್ದು ಕೇಳಿಸುತ್ತಿಲ್ಲ. ಎಲ್ಲೋ ಅವರ ಬಾಲ್ಯದ ಈ ಸವಿ ಸಮಯವೂ ಯಾವುದರ ನೆಪದಲ್ಲೋ ಬಂಧಿಯಾದ ಹಾಗಿದೆ.

ಹಿಂದೆ ನಾವೆಲ್ಲ ಬೇಸಿಗೆ ರಜೆಯಲ್ಲಿ ಏನೆಲ್ಲಾ ಮಾಡಬೇಕೆಂದು ಅಕ್ಕಪಕ್ಕದ ಗೆಳೆಯ-ಗೆಳತಿಯರೊ೦ದಿಗೆ ಚರ್ಚಿಸಿ ಅದಾಗಲೇ ಪಟ್ಟಿ ಮಾಡಿಕೊಂಡಿರುತ್ತಿದ್ದೆವು. ಹಿತ್ತಲಿನ ಮರದ ಕೊಂಬೆಗೆ ಉಯ್ಯಾಲೆ ಬಿಗಿದು ತೂಗುವುದರಿಂದ ಹಿಡಿದು ಕುಂಟೇಬಿಲ್ಲೆ, ಲಗೋರಿ, ಕಥೆ ಪುಸ್ತಕ ಓದುವುದು ಹೀಗೆ ಒಂದೇ ಎರಡೇ.. ಆಗ ಈಗಿನಂತೆ ಟಿ.ವಿ. ಮೊಬೈಲುಗಳಿಲ್ಲ. ಸ್ನೇಹಿತರು ಆಟಕ್ಕೆ ಬಾರದ ಸಂದರ್ಭ ಪುಸ್ತಕಗಳೇ ಸಂಗಾತಿ. ಮನೆಗೆ ಬಂದ ಯಾವುದೇ ಪೇಪರ್ ತುಂಡಿನಿಂದ ತೊಡಗಿ ಸಿಕ್ಕಸಿಕ್ಕ ಎಲ್ಲಾ ಪುಸ್ತಕಗಳ ಅಕ್ಷರ ಅಕ್ಷರ ಓದಿ ಮುಗಿಸುತ್ತಿದ್ದೆವು. ತೋಟದ ಬದಿಯಲ್ಲಿ ಹರಿಯುವ ನದಿಯಲ್ಲಿ ಈಜು ಕಲಿತು ಅರಿವಿಲ್ಲದೆಯೇ ಪ್ರಕೃತಿಯನ್ನೂ ಬದುಕನ್ನೂ ಸ್ವೀಕರಿಸುತ್ತಿದ್ದೆವು. ಹೀಗಿರುವ ನಾವು ನಮ್ಮ ಮಕ್ಕಳಿಗೆ ಬೇಸಿಗೆಯ ರಜೆಯ ಸಮಯ ನಮ್ಮಂತೆಯೇ ಸಿಗುತ್ತಿದೆಯೇ ಎಂಬ ಯೋಚನೆಯ ಗೊಡವೆಗೆ ಹೋಗುತ್ತಲೇ ಇಲ್ಲ. ನಮ್ಮ ಬಾಲ್ಯದ ಆ ಸವಿ ನೆನಪುಗಳನ್ನು ನಮಗಷ್ಟೇ ಮೀಸಲಾಗಿರಿಸಿಕೊಂಡಿದ್ದೇವೆ.

ಬದಲಾದ ಕಾಲಘಟ್ಟದ ತಿರುವಿನಲ್ಲಿ ಬಂದು ನಿಂತಿರುವ ನಮಗೆ ಕಾಲವನ್ನು ತಿರುಗಿಸಲಾಗದಿದ್ದರೂ ಪರಿಸ್ಥಿತಿಯನ್ನು ಬದಲಾಯಿಸುವ ಸಾಮರ್ಥ್ಯವಿದೆ. ಆದರೆ ನಾವೋ… ಬೇಸಿಗೆ ರಜೆ ಸಿಗುವ ಮುನ್ನವೇ ನಮ್ಮ ಮಕ್ಕಳ ಹೆಸರನ್ನು ಬೇಸಿಗೆ ಶಿಬಿರಕ್ಕೆ ನೋಂದಾಯಿಸಿ ಬಿಟ್ಟಿರುತ್ತೇವೆ. ರಜೆಯ ತುಂಬಾ ಡಾನ್ಸ್, ಸಂಗೀತ, ಚಿತ್ರಕಲೆ ಹೀಗೆ ನೂರಾರು ಕ್ಲಾಸುಗಳು. ಎಲ್ಲಿ ನಮ್ಮ ಮಗ ಅಥವಾ ಮಗಳು ಉಳಿದವರಿಗಿಂತ ಹಿಂದುಳಿದು ಬಿಡುತ್ತಾರೋ ಎಂಬಂತೆ ಅನಾವಶ್ಯಕವಾಗಿ ಚಿಂತಿಸುತ್ತಾ ಸಾಗುತ್ತಿದ್ದೇವೆ. ಅಂತೂ ಇಂತೂ ಮಕ್ಕಳನ್ನು ವಿವಿಧ ರೀತಿಯ ಚಟುವಟಿಕೆಗಳಲ್ಲಿ ಸಕ್ರೀಯಗೊಳಿಸಿ, ಪಠ್ಯೇತರವಾಗಿ ಕ್ರಿಯಾಶೀಲಗೊಳಿಸುವುದಕ್ಕೆ ಇದೊಂದು ಮಾರ್ಗವೆಂದೇ ಪೋಷಕರು ನಂಬಿದ್ದಾರೆ.

ಆದರೆ ಈ ರಜೆಯಿಡೀ ಬಿಡುವಿಲ್ಲದ ದಿನಚರಿಗಳನ್ನು ಅವರ ಮೇಲೆ ಹೋರಿಸಬೇಕೇ? ಕೊನೆಯ ಪಕ್ಷ ಈ ಬೇಸಿಗೆ ರಜೆಯ ತುಂಬಾ ಮಕ್ಕಳು ಮನೆಯಲ್ಲಿಯೇ ಅವರಿಗಿಷ್ಟ ಬಂದ ಹಾಗೆ ಸಮಯ ಕಳೆಯುವ ಹಾಗೆ. ಮಾಡಿದಲ್ಲಿ ಅದೆಷ್ಟು ಚಂದ? ಮನೆಯಲ್ಲಿ ಹಿರಿಯರ ಜೊತೆಗೆ ಸಮಯ ಕಳೆಯುತ್ತಾ, ಅವರ ಮಾತುಗಳನ್ನು ಕೇಳುತ್ತಾ, ಮಧುರ ಬಾಂಧವ್ಯ ಬೆಸೆಯುತ್ತಾ ಕಾಲ ಕಳೆಯಲು ಅವಕಾಶ ಹೊಂದಿಸಲು ಸಾಧ್ಯತೆ ಇದೆಯೇ ಎಂಬುದನ್ನು ಸ್ವಲ್ಪವಾದರೂ ಯೋಚಿಸೋಣವೇ?

ಇಂದು ಬೇಸಿಗೆ ಶಿಬಿರಗಳ ಕಾಲ. ಹಾಗಾಗಿ ಬೇಸಿಗೆಯ ಈ ರಜೆಯಲ್ಲಿ ರಾಜ್ಯದೆಲ್ಲೆಡೆ ನೂರಾರು ಶಿಬಿರಗಳೂ ನಡೆಯುತ್ತವೆ. ಆದರೆ ಪ್ರತಿಯೊಬ್ಬರ ಬದುಕಿನಲ್ಲಿ ಬಾಲ್ಯದ ಮರೆಯಲಾಗದ ದಿನಗಳೆಂದರೆ ಅದು ಬೇಸಿಗೆಯ ರಜಾ ದಿನಗಳು. ಬಾಲ್ಯದ ಅನುಭವದ ರಸಪಾಕವೇ ನಮ್ಮ ಬದುಕನ್ನು ರೂಪಿಸುವುದು. ಹೊರನೋಟಕ್ಕೆ ಮಕ್ಕಳು ನಾವು ಹೇಳಿದ್ದನ್ನು ಮಾಡುವಂತೆ ಕಂಡರೂ ಒತ್ತಡ ಅವರನ್ನೂ ಕಾಡಬಹುದು. ಹೀಗಿರುವಾಗ ಕೇವಲ ಶಿಬಿರಗಳಿಗೆ ಮಾತ್ರ ದುಬಾರಿ ಹಣವನ್ನು ತೆತ್ತು ಅವರ ಕ್ರಿಯಾಶೀಲತೆಯನ್ನು ಒರೆಗೆ ಹಚ್ಚುವ ಬದಲಿಗೆ ಅವರು ಸಹಜವಾಗಿ ಎಲ್ಲರೊಂದಿಗೆ ಬೆರೆಯಲಿ. ಆಡಿ ನಲಿಯಲಿ. ಬೇಸಿಗೆಯ ಸುಡು ಬಿಸಿಲು ತಂಪು ನೆಳಲಾಗಲಿ. ಅನುಭವದ ಜೋಳಿಗೆಯಲ್ಲಿ ಸಾಕಷ್ಟು ನೆನಪಿನ ಬುತ್ತಿಯಿರಲಿ ಎಂಬುದನ್ನು ಕೂಡಾ ಬಯಸೋಣವೇ?

ಹಾಗೆಂದು ಇಂದಿನ ಕಾಲಘಟ್ಟದಲ್ಲಿ ಬೇಸಿಗೆ ರಜೆಯನ್ನು ಕೇವಲ ಟಿವಿ ನೋಡುವುದು ಅಥವಾ ಮೊಬೈಲ್ ಬಳಕೆಯಲ್ಲೇ ಕಳೆಯುವುದಕ್ಕಿಂತ ಅದನ್ನು ಉಪಯುಕ್ತವಾಗಿಸಿಕೊಳ್ಳುವುದು ಅತ್ಯಂತ ಮುಖ್ಯ. ಉದಾಹರಣೆಗೆ, ಬೆಳಿಗ್ಗೆ ಬೇಗ ಎದ್ದು ಆರೋಗ್ಯಕ್ಕೆ ಪೂರಕವಾದ ವ್ಯಾಯಾಮ ಅಥವಾ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು. ಅದರಲ್ಲೂ ಪುಸ್ತಕ ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಲು ಇದು ಅತ್ಯುತ್ತಮ ಸಮಯ. ಪಾಠಪುಸ್ತಕಗಳ ಹೊರತಾಗಿ ಕಥೆಪುಸ್ತಕಗಳು, ವಿಜ್ಞಾನ ಸಂಬಂಧಿತ ಪುಸ್ತಕಗಳು, ಜೀವನ ಚರಿತ್ರೆಗಳು ಮುಂತಾದವುಗಳನ್ನು ಓದುವುದರಿಂದ ಜ್ಞಾನ ಹೆಚ್ಚುವುದು ಮಾತ್ರವಲ್ಲ, ಕಲ್ಪನಾಶಕ್ತಿ ವೃದ್ಧಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಹೊಸ ವಿಚಾರಗಳನ್ನು ತಿಳಿಯುವ ಆಸಕ್ತಿ ಮೂಡುತ್ತದೆ.

ಹೊಸ ಕೌಶಲ್ಯಗಳನ್ನು ಕಲಿಯಲು ಈ ಬೇಸಿಗೆ ರಜೆ ಬಹಳ ಸೂಕ್ತ ಸಮಯ. ಚಿತ್ರಕಲೆ, ಸಂಗೀತ, ನೃತ್ಯ, ಕಂಪ್ಯೂಟರ್ ಇತ್ಯಾದಿಗಳನ್ನು ಕಲಿಯಬಹುದು. ಇವು ಮಕ್ಕಳ ಸೃಜನಶೀಲತೆಯನ್ನು ಹೆಚ್ಚಿಸುವುದಲ್ಲದೆ ಅವರ ಭವಿಷ್ಯದಲ್ಲೂ ಉಪಯೋಗವಾಗುವಂತಹವು. ಪ್ರಕೃತಿಯೊಂದಿಗೆ ಸಮಯ ಕಳೆಯುವುದು, ಹಿರಿಯರಿಂದ ಕಥೆಗಳನ್ನು ಕೇಳುವುದು ಮೊದಲಾದವುಗಳು ಮಕ್ಕಳಲ್ಲಿ ಸಂಸ್ಕಾರ ಮತ್ತು ಸಂವೇದನೆಗಳನ್ನು ಬೆಳೆಸುತ್ತವೆ. ನಗರ ಜೀವನದ ಗದ್ದಲದಿಂದ ದೂರ ಹೋಗಿ ಸ್ವಲ್ಪ ಶಾಂತಿಯನ್ನು ಅನುಭವಿಸಲು ಇದು ಸಹಾಯಕ. ಹಾಗೆಂದು ಇವುಗಳಿಗಾಗಿ ಪೂರ್ಣ ದಿನದ ಬೇಸಿಗೆ ಶಿಬಿರಗಳು ಬೇಕಿಲ್ಲ. ಏನೇ ಆದರೂ ಸ್ವಲ್ಪ ಸಮಯ ಮಕ್ಕಳ ಖುಷಿಗಾಗಿ ಮೀಸಲಿರಲಿ.

ಮಕ್ಕಳು ತಮ್ಮ ಕುಟುಂಬದವರೊಂದಿಗೆ ಸಮಯ ಕಳೆಯುವುದೂ ಬಹಳ ಮುಖ್ಯ. ಪೋಷಕರೊಂದಿಗೆ ಮಾತನಾಡುವುದು, ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದು, ಸಹೋದರ–ಸಹೋದರಿಯರೊಂದಿಗೆ ಆಟವಾಡುವುದು ಇವು ಕುಟುಂಬ ಬಂಧಗಳನ್ನು ಬಲಪಡಿಸುತ್ತವೆ. ಪರಿಸರ ರಕ್ಷಣೆಗೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿಕೊಳ್ಳುವುದು ಮಕ್ಕಳಲ್ಲಿ ಹೊಣೆಗಾರಿಕೆಯ ಮನೋಭಾವವನ್ನು ಬೆಳೆಸುತ್ತದೆ. ಮುಖ್ಯವಾಗಿ ಬೇಸಿಗೆ ರಜೆಯನ್ನು ವ್ಯರ್ಥ ಮಾಡುವ ಕೆಲವು ಅಭ್ಯಾಸಗಳನ್ನು ತಪ್ಪಿಸಬೇಕು. ದಿನಪೂರ್ತಿ ಮೊಬೈಲ್ ಅಥವಾ ಟಿವಿಯ ಮುಂದೆ ಕಾಲ ಕಳೆಯುವುದು ಆರೋಗ್ಯಕ್ಕೂ ಮತ್ತು ಮನಸ್ಸಿಗೂ ಹಾನಿಕಾರಕ. ಆದ್ದರಿಂದ ಸಮಯವನ್ನು ಸರಿಯಾಗಿ ಹಂಚಿಕೊಂಡು ಉಪಯುಕ್ತ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಅಗತ್ಯ.

ಒಟ್ಟಿನಲ್ಲಿ ಬೇಸಿಗೆ ರಜೆಯನ್ನು ವಿಶ್ರಾಂತಿ ಮತ್ತು ಮನರಂಜನೆಯ ಜೊತೆಗೆ ವ್ಯಕ್ತಿತ್ವ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಬಳಸಿಕೊಳ್ಳಬೇಕು. ಸರಿಯಾದ ಯೋಜನೆ ಮಾಡಿಕೊಂಡು ಈ ದಿನಗಳನ್ನು ಕಳೆಯುವುದರಿಂದ ವಿದ್ಯಾರ್ಥಿಗಳು ಹೊಸ ಉತ್ಸಾಹ ಮತ್ತು ಶಕ್ತಿಯೊಂದಿಗೆ ಶಾಲೆಗೆ ಮರಳಬಹುದು.

ಡಾ. ಮೈತ್ರಿ ಭಟ್, ವಿಟ್ಲ

- Advertisement -

Related news

error: Content is protected !!