ಡಾ. ಮೈತ್ರಿ ಭಟ್, ವಿಟ್ಲ
ಮನುಷ್ಯನು ಇಡೀ ಪ್ರಪಂಚದ ಮುಂದೆ ತನ್ನ ಸಾಧನೆಗಳ ಪಟ್ಟಿಯನ್ನು ಹೆಮ್ಮೆಯಿಂದ ಹೇಳಿಕೊಳ್ಳಬಹುದು… ಚಂದ್ರನ ಮೇಲೆ ಕಾಲಿಟ್ಟ ಕಥೆಯಿಂದ ಹಿಡಿದು ಕೃತಕ ಬುದ್ಧಿಮತ್ತೆಯ ಯುಗದವರೆಗೆ ಆತ ತಲುಪಿರುವ ಎತ್ತರಗಳು ಅನನ್ಯ. ಆದರೆ ಈ ಎಲ್ಲ ಸಾಧನೆಗಳ ನಡುವೆಯೂ ಒಂದು ಕಟುಸತ್ಯವನ್ನು ನಾವು ಮರೆಯುವಂತಿಲ್ಲ. ಮನುಷ್ಯ ಎಷ್ಟೇ ಶಕ್ತಿಶಾಲಿಯಾಗಿದ್ದರೂ, ಪ್ರಕೃತಿಯ ಮುಂದೆ ಆತ ಇನ್ನೂ ಅವಲಂಬಿತ ಜೀವಿಯೇ. ಉಸಿರಾಡಲು ಗಾಳಿ ಬೇಕು, ಬದುಕಲು ನೀರು ಬೇಕು, ಆಹಾರಕ್ಕಾಗಿ ಮಣ್ಣು ಬೇಕು. ಇವುಗಳಲ್ಲಿ ಯಾವುದೇ ಒಂದು ತನ್ನ ಸಹಜ ಸಮತೋಲನವನ್ನು ಕಳೆದುಕೊಂಡರೆ, ಮನುಕುಲದ ಅಸ್ತಿತ್ವವೇ ಬುಡಮೇಲಾಗುತ್ತದೆ.


ಇಂದು ವಿಶ್ವ ಪರಿಸರ ದಿನದ ಆಚರಣೆಗಳು, ಹಸಿರು ಅಭಿಯಾನಗಳು, ಪರಿಸರ ಜಾಗೃತಿ ಕಾರ್ಯಕ್ರಮಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ. ಆದರೆ ಅದೇ ಸಂದರ್ಭದಲ್ಲಿ ಪರಿಸರದ ಕುಸಿತದ ವೇಗವೂ ಹೆಚ್ಚುತ್ತಿದೆ. ಒಂದು ಕಡೆ ಪರಿಸರದ ಬಗ್ಗೆ ಭಾಷಣಗಳು ಕೇಳುತ್ತಿದ್ದರೆ, ಇನ್ನೊಂದು ಕಡೆ ಕಾಡಿನಲ್ಲಿ ಮರಗಳಿಗೆ ಬೀಳುತ್ತಿರುವ ಕೊಡಲಿಯೇಟುಗಳು ಕೇಳಿಸುತ್ತಿವೆ. ಒಂದು ಕಡೆ ಹಸಿರು ಕ್ರಾಂತಿಯ ಘೋಷಣೆಗಳು ಮೊಳಗುತ್ತಿದ್ದರೆ, ಇನ್ನೊಂದು ಕಡೆ ನದಿಗಳು ವಿಷದ ಕಾಲುವೆಗಳಾಗಿ ಮಾರ್ಪಡುತ್ತಿವೆ. ಈ ವೈರುಧ್ಯವೇ ಇಂದಿನ ನಾಗರೀಕತೆಯ ದುರಂತ.

ಪ್ರಕೃತಿಯ ಜೊತೆಗಿನ ಮನುಷ್ಯನ ಸಂಬಂಧವು ಕೇವಲ ಬಳಕೆಯ ಸಂಬಂಧವಾಗಿ ಬದಲಾಗಿರುವುದು ಇಂದಿನ ಎಲ್ಲಾ ಸಂಕಟಗಳಿಗೂ ಮೂಲ ಕಾರಣವಾಗಿದೆ. ಹಿಂದೆ ಪ್ರಕೃತಿಯನ್ನು ತಾಯಿ ಎಂದು ಪೂಜಿಸುತ್ತಿದ್ದ ಸಮಾಜ ಇಂದು ಅದನ್ನು ಕೇವಲ ಸಂಪನ್ಮೂಲವಾಗಿ ಕಾಣುತ್ತಿದೆ. ಅರಣ್ಯ ಎಂದರೆ ಕೇವಲ ಮರಗಳ ಗುಂಪಲ್ಲ; ಅದು ಜೀವವೈವಿಧ್ಯದ ಗೂಡು. ನದಿ ಎಂದರೆ ಕೇವಲ ನೀರಿನ ಹರಿವಲ್ಲ; ಅದು ಒಂದು ಪ್ರದೇಶದ ಸಂಸ್ಕೃತಿ, ಆರ್ಥಿಕತೆ ಮತ್ತು ಜೀವಜಗತ್ತಿನ ಜೀವನಾಡಿ. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ನಾವು ಈ ಸತ್ಯವನ್ನೇ ನಿರ್ಲಕ್ಷಿಸುತ್ತಿದ್ದೇವೆ.


ಇತ್ತೀಚಿನ ವರ್ಷಗಳಲ್ಲಿ ಪ್ರಕೃತಿ ತನ್ನದೇ ಆದ ರೀತಿಯಲ್ಲಿ ತನ್ನದೇ ಆದ ಸ್ವರೂಪದಲ್ಲಿ ಅನೇಕ ಬಾರಿ ಎಚ್ಚರಿಕೆಗಳನ್ನು ನೀಡಿದೆ. ಅಸಹಜ ಮಳೆ, ತೀವ್ರ ಬರ, ಭೂಕುಸಿತ, ಚಂಡಮಾರುತ, ಉಷ್ಣ ಅಲೆಗಳು ಮತ್ತು ಕಾಡ್ಗಿಚ್ಚುಗಳು ಕೇವಲ ನೈಸರ್ಗಿಕ ವಿಕೋಪಗಳಲ್ಲ. ಅವು ಪ್ರಕೃತಿಯ ಪ್ರತಿಕ್ರಿಯೆಗಳು. ಭೂಮಿಯ ಸಮತೋಲನಕ್ಕೆ ನಾವು ಉಂಟುಮಾಡುತ್ತಿರುವ ಅತಿಕ್ರಮಣಗಳ ಪ್ರತಿಧ್ವನಿಗಳು. ಆದರೆ ದುರಂತವೆಂದರೆ ನಾವು ಪ್ರತಿಯೊಂದು ವಿಪತ್ತಿನ ಬಳಿಕ ಸ್ವಲ್ಪ ದಿನ ಆತಂಕವನ್ನು ವ್ಯಕ್ತಪಡಿಸುತ್ತೇವೆ; ಅದಾಗಿ ಕೆಲವೇ ದಿನಗಳಲ್ಲಿ ಮತ್ತೆ ಅದೇ ಹಳೆಯ ನಿರ್ಲಕ್ಷ್ಯದ ಬದುಕಿಗೆ ಮರಳುತ್ತೇವೆ.


ಪ್ಲಾಸ್ಟಿಕ್ ಇಂದು ಕೇವಲ ಒಂದು ವಸ್ತುವಲ್ಲ; ಅದು ನಮ್ಮ ನಿರ್ಲಕ್ಷ್ಯದ ಸಂಕೇತವಾಗಿದೆ. ಸಮುದ್ರದ ಅಲೆಗಳಿಂದ ಹಿಡಿದು ಪರ್ವತಗಳ ತುದಿಯವರೆಗೆ ಪ್ಲಾಸ್ಟಿಕ್ ವ್ಯಾಪಿಸಿದೆ. ಮನುಷ್ಯನು ಎಸೆದ ತ್ಯಾಜ್ಯವನ್ನು ಪ್ರಕೃತಿ ಹೊತ್ತುಕೊಂಡು ಹೋಗುತ್ತಿದೆ. ಆದರೆ ಒಂದು ಹಂತದ ಬಳಿಕ ಪ್ರಕೃತಿ ತನ್ನ ಪ್ರತಿರೋಧವನ್ನು ತೋರಿಸಲೇಬೇಕು.
ನಮ್ಮ ಮನಃಸ್ಥಿತಿಯ ದುರಂತವೆಂದರೆ ಪರಿಸರದ ಪ್ರಶ್ನೆಯನ್ನು ಇನ್ನೂ ಒಂದು ಪ್ರತ್ಯೇಕ ವಿಷಯವಾಗಿ ನೋಡುವುದು. ಪರಿಸರ ಎಂದರೆ ಕೇವಲ ಗಿಡ ನೆಡುವ ಕಾರ್ಯಕ್ರಮವಲ್ಲ. ಅದು ಆರ್ಥಿಕತೆಯ ಪ್ರಶ್ನೆ, ಆರೋಗ್ಯದ ಪ್ರಶ್ನೆ, ಆಹಾರ ಭದ್ರತೆಯ ಪ್ರಶ್ನೆ ಮತ್ತು ಅಂತಿಮವಾಗಿ ಅಸ್ತಿತ್ವದ ಪ್ರಶ್ನೆ. ಒಂದು ನದಿ ಬತ್ತಿ ಹೋದರೆ ಕೇವಲ ನೀರಿನ ಮೂಲವೊಂದು ಕಣ್ಮರೆಯಾಗುವುದಿಲ್ಲ; ಅದರೊಂದಿಗೆ ಒಂದು ಸಂಸ್ಕೃತಿ, ಒಂದು ಜೀವನಶೈಲಿ ಮತ್ತು ಒಂದು ಭವಿಷ್ಯವೂ ಕಣ್ಮರೆಯಾಗುತ್ತದೆ. ಒಂದು ಕಾಡು ನಾಶವಾದರೆ ಕೇವಲ ಮರಗಳು ಉರುಳುವುದಲ್ಲ; ಸಾವಿರಾರು ಜೀವಿಗಳ ಬದುಕಿನ ಸರಪಳಿಯೇ ತುಂಡಾಗುತ್ತದೆ.
ವಾಸ್ತವವಾಗಿ, ಪರಿಸರ ಸಂರಕ್ಷಣೆ ಎನ್ನುವುದು ಪ್ರಕೃತಿಯನ್ನು ಉಳಿಸುವ ಪ್ರಯತ್ನಕ್ಕಿಂತ ಹೆಚ್ಚಾಗಿ ಮನುಷ್ಯನನ್ನು ಉಳಿಸುವ ಪ್ರಯತ್ನವಾಗಿದೆ. ಪ್ರಕೃತಿಗೆ ನಮ್ಮ ಸಹಾಯದ ಅಗತ್ಯವಿಲ್ಲ; ಕೋಟ್ಯಂತರ ವರ್ಷಗಳಿಂದ ಅದು ತನ್ನನ್ನು ತಾನು ಪುನರ್‌ಸೃಷ್ಟಿಸಿಕೊಳ್ಳುವ ಶಕ್ತಿಯನ್ನು ಹೊಂದಿದೆ. ಆದರೆ ಪ್ರಕೃತಿಯ ಸಮತೋಲನ ಹಾಳಾದಾಗ ಮೊದಲಿಗೆ ಸಂಕಷ್ಟಕ್ಕೀಡಾಗುವುದು ಮನುಷ್ಯನೇ. ಆದ್ದರಿಂದ ಪರಿಸರದ ಮೇಲಿನ ಕಾಳಜಿ ನೆಪವಲ್ಲ, ಅದು ಆತ್ಮರಕ್ಷಣೆಯ ಕ್ರಮ.
ಅದರಲ್ಲೂ ಇಂದು ನಾವು ಅಭಿವೃದ್ಧಿಯ ಪರಿಕಲ್ಪನೆಯನ್ನು ಮರುಪರಿಶೀಲಿಸಬೇಕಾದ ಅಗತ್ಯವಿದೆ. ಕಾಂಕ್ರೀಟ್ ಕಟ್ಟಡಗಳ ಸಂಖ್ಯೆ ಹೆಚ್ಚಾದರೆ ಮಾತ್ರ ಅದು ಅಭಿವೃದ್ಧಿಯಲ್ಲ. ಅಂತರ್ಜಲ ಬತ್ತಿ ಹೋದರೆ, ಗಾಳಿಯ ಗುಣಮಟ್ಟ ಕುಸಿಯುತ್ತಿದ್ದರೆ, ಜೀವವೈವಿಧ್ಯ ನಾಶವಾಗುತ್ತಿದ್ದರೆ ಅದನ್ನು ಅಭಿವೃದ್ಧಿ ಎಂದು ಕರೆಯುವುದು ಭ್ರಮೆ. ಭವಿಷ್ಯದ ಪೀಳಿಗೆಗಳ ಬದುಕನ್ನು ಅಪಾಯಕ್ಕೆ ದೂಡಿ ನಿರ್ಮಿಸುವ ಸಮೃದ್ಧಿ ಎಂದಿಗೂ ಶಾಶ್ವತವಾಗಲಾರದು.
ನಮ್ಮ ಸರ್ಕಾರಗಳೇನೋ ಕಾನೂನುಗಳನ್ನು ರೂಪಿಸಬಹುದು, ನೀತಿಗಳನ್ನು ಜಾರಿಗೆ ತರಬಹುದು. ಆದರೆ ಪರಿಸರ ಸಂರಕ್ಷಣೆಯ ನಿಜವಾದ ಯಶಸ್ಸು ನಾಗರೀಕ ಪ್ರಜ್ಞೆಯ ಮೇಲೆ ಅವಲಂಬಿತವಾಗಿದೆ. ಇಂದು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನಶೈಲಿಯನ್ನು ಪ್ರಶ್ನಿಸಿಕೊಳ್ಳಬೇಕಿದೆ. ಏಕೆಂದರೆ ನಾವು ಬಳಸುವ ನೀರು, ಉತ್ಪಾದಿಸುವ ತ್ಯಾಜ್ಯ, ಬಳಸುವ ಪ್ಲಾಸ್ಟಿಕ್, ವ್ಯರ್ಥ ಮಾಡುವ ವಿದ್ಯುತ್ ಇವೆಲ್ಲವೂ ಪರಿಸರದೊಂದಿಗೆ ನಮ್ಮ ಸಂಬಂಧವನ್ನು ನಿರ್ಧರಿಸುತ್ತವೆ. ಜೊತೆಗೆ ಪರಿಸರದ ಉಳಿವು ದೊಡ್ಡ ದೊಡ್ಡ ಘೋಷಣೆಗಳಲ್ಲಿ ಇಲ್ಲ; ಅದು ದೈನಂದಿನ ಸಣ್ಣ ಸಣ್ಣ ಜವಾಬ್ದಾರಿಗಳಲ್ಲಿ ಅಡಗಿದೆ.
ನಾವು ಅವಲೋಕಿಸಿ ನೋಡಿದರೆ ಇತಿಹಾಸವು ನಾಗರೀಕತೆಗಳ ಉದಯವನ್ನು ದಾಖಲಿಸಿದೆ. ಮಾತ್ರವಲ್ಲ, ಪ್ರಕೃತಿಯನ್ನು ಮೀರಿ ನಡೆದ ನಾಗರೀಕತೆಗಳ ಪತನವನ್ನೂ ದಾಖಲಿಸಿದೆ. ಈ ಪಾಠಗಳನ್ನು ನಾವು ಕಡೆಗಣಿಸಿದರೆ, ನಮ್ಮ ಮುಂದಿನ ಪೀಳಿಗೆಯು ನಮ್ಮನ್ನು ಪ್ರಗತಿಯ ಶಿಲ್ಪಿಗಳಾಗಿ ಅಲ್ಲ ಬದಲಿಗೆ ಪರಿಸರ ನಾಶದ ಹೊಣೆಗಾರರಾಗಿ ನೆನಪಿಸಿಕೊಳ್ಳುವ ಅಪಾಯವಿದೆ.
ಮುಖ್ಯವಾಗಿ ಭೂಮಿಯನ್ನು ನಾವು ನಮ್ಮ ಪೂರ್ವಜರಿಂದ ಪಡೆದ ಆಸ್ತಿಯೆಂದು ಭಾವಿಸುವುದು ತಪ್ಪು. ಅದು ನಮ್ಮ ಮಕ್ಕಳಿಂದ ಎರವಲು ಪಡೆದ ಅಮೂಲ್ಯ ಸಂಪತ್ತು. ಅದನ್ನು ಯಾವ ಸ್ಥಿತಿಯಲ್ಲಿ ಅವರಿಗೆ ಹಸ್ತಾಂತರಿಸುತ್ತೇವೆ ಎಂಬುದು ನಮ್ಮ ನಾಗರೀಕತೆಯ ನಿಜವಾದ ಅಳತೆಗೋಲು. ನಿಸರ್ಗದ ನಾಡಿಮಿಡಿತ ಕ್ಷೀಣಿಸಿದರೆ ಮನುಕುಲದ ಭವಿಷ್ಯದ ಹೃದಯ ಬಡಿತವೂ ನಿಧಾನವಾಗುತ್ತದೆ. ಆದ್ದರಿಂದ ಪರಿಸರ ಸಂರಕ್ಷಣೆ ಒಂದು ಆಯ್ಕೆಯಲ್ಲ; ಅದು ನಮ್ಮ ಕಾಲದ ಅತ್ಯಂತ ತುರ್ತಿನ ನೈತಿಕ ಹೊಣೆಗಾರಿಕೆ.
ಪ್ರಕೃತಿಯೊಂದಿಗೆ ಹೋರಾಡಿ ಮಾನವ ಎಂದಿಗೂ ಗೆದ್ದಿಲ್ಲ. ಮುಂದೆಯೂ ಗೆಲ್ಲಲಾರ. ಏಕೆಂದರೆ ಪ್ರಕೃತಿ ಸೋತ ದಿನವೇ ಮನುಕುಲವೂ ಸೋಲುತ್ತದೆ. ಹೀಗಾಗಿ ನಿಸರ್ಗದ ನಾಡಿಮಿಡಿತವನ್ನು ಕಾಪಾಡುವುದು ಎಂದರೆ ಭೂಮಿಯ ಭವಿಷ್ಯವನ್ನು, ಬದುಕಿನ ಭವಿಷ್ಯವನ್ನು ಮತ್ತು ಮನುಕುಲದ ಭವಿಷ್ಯವನ್ನು ಕಾಪಾಡುವುದೇ ಆಗಿದೆ.
ಡಾ. ಮೈತ್ರಿ ಭಟ್, ವಿಟ್ಲ








