
ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 108 ಸ್ಥಾನ ಸ್ಥಾನ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದರೂ, ಸರಳ ಬಹುಮತ ಸಂಖ್ಯೆ ಹೊಂದಿಸಲು ತಿಣುಕಾಡುತ್ತಿದ್ದ ನಟ ದಳಪತಿ ವಿಜಯ್ ಈ ಕಸರತ್ತಿನಲ್ಲಿ ಕಡೆಗೂ ಯಶಸ್ವಿಯಾಗಿದ್ದಾರೆ.ಸರ್ಕಾರ ರಚಿಸಲು ಅಗತ್ಯವಿದ್ದ ಬಹುಮತವಾದ 118 ಸ್ಥಾನದ ಬೆಂಬಲ ಪಡೆಯಲು ವಿಜಯ್ ಕಡೆಗೂ ಪಾಸ್ ಆಗಿದ್ದಾರೆ. ಈಗಾಗಲೇ ಕಾಂಗ್ರೆಸ್ ಬೆಂಬಲ ಘೋಷಿಸಿದ್ದರೂ ಇನ್ನೂ ಐವರು ಶಾಸಕರ ಬೆಂಬಲದ ಅಗತ್ಯವಿತ್ತು. ಇದೀಗ ಆ ಸಮಸ್ಯೆಗೂ ಪರಿಹಾರ ಸಿಕ್ಕಿದೆ.
ಕಾಂಗ್ರೆಸ್ ಜೊತೆಗೆ, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲದೊಂದಿಗೆ ವಿಜಯ್ ಅವರು ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚಿಸಲು ಹಕ್ಕು ಮಂಡಿಸಿದ್ದಾರೆ. ಟಿವಿಕೆಗೆ ಕಾಂಗ್ರೆಸ್, ವಿಸಿಕೆ, ಸಿಪಿಐ ಮತ್ತು ಸಿಪಿಐ(ಎಂ) ಬೆಂಬಲ ಘೋಷಿಸುವ ಮೂಲಕ ನಾಲ್ಕ ದಿನಗಳಿಂದ ಇದ್ದ ಸರ್ಕಾರ ರಚನೆಯ ಬಿಕ್ಕಟ್ಟು ಬಗೆಹರಿದಂತಾಗಿದೆ.ಶೀಘ್ರದಲ್ಲೇ ವಿಜಯ್ ಬಹುಮತದ ಬೆಂಬಲದ ಪತ್ರದೊಂದಿಗೆ ಮೂರನೇ ಬಾರಿಗೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರನ್ನು ಭೇಟಿಯಾಗಿ ಪ್ರಮಾಣವಚನ ಸ್ವೀಕಾರ ಸಮಾರಂಭದ ದಿನವನ್ನು ಅಂತಿಮಗೊಳಿಸಲಿದ್ದಾರೆ.೨೩೪ ಸದಸ್ಯರ ವಿಧಾನಸಭೆಯಲ್ಲಿ ಟಿವಿಕೆ ೧೦೮ ಶಾಸಕರನ್ನು ಹೊಂದಿದೆ. ಕಾಂಗ್ರೆಸ್ ತನ್ನ 5 ಶಾಸಕರೊಂದಿಗೆ ಬೆಂಬಲ ನೀಡಿದೆ. ತಲಾ ಇಬ್ಬರು ಶಾಸಕರನ್ನು ಹೊಂದಿರುವ ಸಿಪಿಐ ಮತ್ತು ಸಿಪಿಐ(ಎಂ) ಸಹ ಟಿವಿಕೆಯನ್ನು ಬೆಂಬಲಿಸಿವೆ.ಇಬ್ಬರು ಶಾಸಕರನ್ನು ಹೊಂದಿರುವ ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಕೂಡ ವಿಜಯ್ ಅವರನ್ನು ಬೆಂಬಲಿಸಲು ಒಪ್ಪಿಕೊಂಡಿದೆ. ಇದರಿಂದ ಟಿವಿಕೆಗೆ ಅಗತ್ಯವಾದ 118 ಸ್ಥಾನಗಳ ಮ್ಯಾಜಿಕ್ ನಂಬರ್ ಸಿಕ್ಕಿ ವಿಜಯ್ ಪಟ್ಟಾಭಿಷೇಕ ಖಚಿತವಾದಂತಾಗಿದೆ.
ದಳಪತಿ ಪಾಲಿಗೆ ಸಮಾಧಾನದ ಸಂಗತಿ ಎಂದರೆ ಸರ್ಕಾರ ರಚಿಸಲು ಅಗತ್ಯವಾದ ಮ್ಯಾಜಿಕ್ ನಂಬರ್ (118) ಗಿಂತಲೂ ಹೆಚ್ಚಿನ ಸಂಖ್ಯೆ ಲಭಿಸಿದೆ.ಹೌದು; ಬರೋಬ್ಬರಿ 121 ಶಾಸಕರ ಬೆಂಬಲ ದೊರೆತಿದೆ. ಮ್ಯಾಜಿಕ್ ನಂಬರ್ ಗಿಂತಲೂ ಹೆಚ್ಚು ಅಂದರೆ 121 ಶಾಸಕರ ಬೆಂಬಲ ಸಿಕ್ಕಿರುವುದರಿಂದ ಈ ಬೆಂಬಲ ಪತ್ರದೊಂದಿಗೆ ವಿಜಯ್ ಅವರು ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡಿ ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಇದರೊಂದಿಗೆ ಫಲಿತಾಂಶ ಪ್ರಕಟವಾದ ಬಳಿಕ ಶುರುವಾದ ರಾಜಕೀಯ ಹೈಡ್ರಾಮಾ ಕ್ರೈಮ್ಯಾಕ್ಸ್ ಹಂತಕ್ಕೆ ಬಂದಿದ್ದು, ಕಳೆದ ಮೂರು ದಿನಗಳಿಂದ ತಮಿಳುನಾಡಿನಲ್ಲಿ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ತೆರೆ ಬಿದ್ದಂತಾಗಿದೆ.








