ದೀಪಕ್ ಹೊಸಮಠ
ಬೇಸಿಗೆಕಾಲ ಮರೆಯಾಗುತ್ತಿದೆ ಎನ್ನುತ್ತಿದ್ದಂತೆ ಎಲ್ಲೋ ಕಾಣೆಯಾಗಿದ್ದ ಮಳೆಗಾಲದ ಬಿರುಸಿನ ಮಳೆ ಒಂದೆರಡು ದಿನಗಳಿಂದ ಮತ್ತೆ ಇರುವಿಕೆಯನ್ನು ತೋರಿಸಿಕೊಂಡಿದೆ.ಕರಾವಳಿ ವಾತಾವರಣ ಬಿಸಿಲಿನಿಂದ ಕೂಡಿದ್ದು, ಕೆಲ ದಿನಗಳಿಂದ ಸಂಜೆಯಾಗುತ್ತಲೇ ಮಳೆ ಸುರಿದು ಇಳೆಗೆ ತಂಪೆರೆದಿದೆ.

ಈ ನಡುವೆ ಜನತೆ ಕೆಲವೊಂದು ವಿಚಾರದಲ್ಲಿ ಗಂಭೀರ ಜಾಗ್ರತೆ ವಹಿಸಿಕೊಳ್ಳುವುದು ಅಗತ್ಯವಾಗಿದ್ದು, ಮಳೆ ಬಂದ ಒಂದೆರಡು ದಿನಗಳ ಕಾಲ ಎಲ್ಲೆಡೆ ‘ಅವರ’ ಸಂಚಾರ ಇರುತ್ತದೆ. ಹಾಗಾದರೆ ಅವರು ಯಾರು ಎಂಬುದನ್ನು ಮುಂದೆ ಹೇಳ್ತೇವೆ ನೋಡಿ.ಇಳೆ ಹಲವು ಜೀವ ರಾಶಿಗಳಿಗೆ ವಾಸ ಸ್ಥಳ ಎಂಬುದು ಪ್ರತಿಯೊಬ್ಬರೂ ಅರಿತ ವಿಚಾರ.ಕಾಡು ಪ್ರಾಣಿ, ಪಕ್ಷಿಗಳಿಂದ ಹಿಡಿದು, ಕೀಟಗಳಿಂದ ಹಿಡಿದು ಉರಗಗಳ ವರೆಗೆ ಎಲ್ಲವೂ ಈ ಬಾರಿಯ ಬಿಸಿಲ ತಾಪಕ್ಕೆ ಕಂಗಾಲಾಗಿವೆ ಎನ್ನುವುದಕ್ಕೆ ಉದಾಹರಣೆ ಬೇಕಿಲ್ಲ. ನದಿ, ಹಳ್ಳ, ಬಾವಿ ಎಲ್ಲದರಲ್ಲೂ ನೀರಿನ ಮಟ್ಟ ಕುಸಿದಿದ್ದು, ಸದ್ಯ ನೀರಿಗಾಗಿ ಪರದಾಟ ನಡೆಸುವ ಪರಿಸ್ಥಿತಿ ಎದುರಾಗಿದೆ.
ಓ ಮೊನ್ನೆ ಮೊನ್ನೆ ನೀರಿಗಾಗಿ ಪರಿತಪಿಸಿದ ನಾಗರ ಹಾವೊಂದು , ರಸ್ತೆ ಬದಿ ಯಾರೋ ಕುಡಿದು ಎಸೆದಿದ್ದ ಬಿಯರ್ ಟಿನ್ ಒಂದರ ಒಳಕ್ಕೆ ನುಗ್ಗಿ, ಹೊರಬರಲು ಪರದಾಡಿ ಬಳಿಕ ಸಂರಕ್ಷಣೆ ಮಾಡಿದ ಬಗ್ಗೆ ಸುದ್ದಿಯಾಗಿತ್ತು.ಬಿಸಿಲ ತಾಪಕ್ಕೆ ಕೆಲವೊಂದು ಕಡೆಗಳಲ್ಲಿ ಪಕ್ಷಿಗಳಿಗೆ, ಪ್ರಾಣಿಗಳಿಗೆ ಬಿಂದಿಗೆಯಲ್ಲಿ, ತೊಟ್ಟಿಗಳಲ್ಲಿ ನೀರು ಇಡುವ ಕ್ರಿಯೆ ಬುದ್ಧಿವಂತರ ಜಿಲ್ಲೆಯಲ್ಲಿ ಸಾಮಾನ್ಯವಾಗಿದ್ದು, ಕೆಲವೊಮ್ಮೆ ಅತೀ ಬುದ್ಧಿವಂತಿಕೆಯೂ ಇಲ್ಲಿ ನಡೆಯುತ್ತಿರುತ್ತದೆ. ದಣಿವು,ಆಯಾಸ ಬಿಸಿಲ ತಾಪಕ್ಕೆ ಹೆಚ್ಚಾಗಿದ್ದು, ಮಳೆ ಸುರಿದಾಗ ಕೊಂಚ ಬೇಗೆ ಕಡಿಮೆಯಾದರೂ,ಮಾರನೇ ದಿನ ಅದೇ ಮುಂದುವರಿಯುತ್ತದೆ.
ಮೊದಲೇ ಬಿಸಿಯೇರಿರುವ ಇಳೆಗೆ ಮಳೆ ನೀರು ಸುರಿದಾಗ,ಭೂಮಿಯ ರಂಧ್ರದೊಳಗೆ ವಾಸಿಸುವ ಜೀವ ರಾಶಿಗಳಿಗೆ ತೊಂದರೆಯಾಗುವುದು ಸಹಜ. ಮಳೆ ನಿಂತ ಮೇಲೆ ಮಾನವನಿಗೆ ಯಾವ ರೀತಿಯ ಬೇಗೆ(ದವ)ಆಗುತ್ತದೆಯೋ, ಅದಕ್ಕಿಂತ ದುಪ್ಪಟ್ಟು ಬೇಗೆ ಉರಗ ಗಳಿಗಾಗುವುದು ಸಾಮಾನ್ಯ. ಹೀಗಾದಾಗ ಅವುಗಳು ವಾಸ ಸ್ಥಳದಿಂದ ಹೊರ ಬಂದು, ಅಲ್ಲಲ್ಲಿ ಕಾಣಸಿಗುತ್ತದೆ. ಹೆಚ್ಚಾಗಿ ಮಳೆಗಾಲ ಪ್ರಾರಂಭವಾಗುವ ಮುನ್ನ ವಾರಕ್ಕೊಂದೆರಡರಂತೆ ಸುರಿವ ಮಳೆ ಬಿಟ್ಟ ಬಳಿಕ ಅವುಗಳಿಗೆ ದಾಹ ತಡೆಯಲು ಸಾಧ್ಯವಾಗದೆ ಕಾಣಸಿಗುತ್ತದೆ.ಇಂತಹ ಸಂದರ್ಭದಲ್ಲಿ ಮನುಷ್ಯರು ಹೆಚ್ಚು ಜಾಗ್ರತೆ ವಹಿಸಬೇಕು. ಮಳೆ ಬಿಟ್ಟ ಬಳಿಕ ರಾತ್ರಿ ಸಮಯದಲ್ಲಿ, ಅಥವಾ ಹಗಲು ಹೊತ್ತಿನಲ್ಲಿ ಎಲ್ಲೆಂದರಲ್ಲಿ ನಡೆದಾಡುವ ವೇಳೆ ಕೊಂಚ ಗಮನಹರಿಸಬೇಕಾಗುತ್ತದೆ.ವಿವಿಧ ಜಾತಿಯ ಹಾವುಗಳಿದ್ದು, ಕಂಡು ಬಂದಲ್ಲಿ ಯಾವುದೇ ರೀತಿಯ ತೊಂದರೆ ಮಾಡದೇ, ತಾವೇ ದೂರ ಸರಿದು ನಿಂತರೆ ಅವುಗಳ ಪಾಡಿಗೆ ಅವು ಜಾಗ ಖಾಲಿ ಮಾಡುತ್ತದೆ. ಯಾಕೆಂದರೆ ಕ್ರಿಯೆಗೆ-ಪ್ರತಿಕ್ರಿಯೆ ಆಗುವ ಸಂಭವ ಹೆಚ್ಚಿರುವುದು ಇದೇ ಸಂದರ್ಭದಲ್ಲಿ. ಆದ್ದರಿಂದ ಬೆಳಕಿಲ್ಲದೆ ಹೆಜ್ಜೆ ಇಡುವಾಗ ಎಚ್ಚರ ‘ಅವರಿರುತ್ತಾರೆ’ ಎನ್ನುವುದು ಓದುಗರಿಗಾಗಿ ನಮ್ಮದೊಂದು ಕಾಳಜಿ.








