Friday, August 28, 2026
spot_imgspot_img
spot_imgspot_img

ಜೀವ ಬೆದರಿಕೆ, ಜಾತಿ‌ ನಿಂದನೆ ಆರೋಪ: ಪುನೀತ್ ಕೆರೆಹಳ್ಳಿ ವಿರುದ್ಧದ ಪ್ರಕರಣಕ್ಕೆ ಹೈಕೋರ್ಟ್ ತಡೆ

- Advertisement -
- Advertisement -

ಬೆಂಗಳೂರು: ಜಾತಿ ನಿಂದನೆ, ಜೀವ ಬೆದರಿಕೆ ಸೇರಿ ವಿವಿಧ ಅಪರಾಧ ಕೃತ್ಯಗಳ ಸಂಬಂಧ ಪುನೀತ್ ಕೆರೆಹಳ್ಳಿ ಹಾಗೂ ಆತನ ಬೆಂಬಲಿಗ ಗೋಪಿ ಗೌಡ ವಿರುದ್ಧ ಕೋಲಾರ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.ಎಫ್‌ಐಆರ್ ಹಾಗೂ ವಿಚಾರಣಾ ನ್ಯಾಯಾಲಯದ ಪ್ರಕ್ರಿಯೆ ರದ್ದ ಕೋರಿ ಪುನೀತ್ ಕೆರೆಹಳ್ಳಿ ಹಾಗೂ ಗೋಪಿಗೌಡ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ವಿ. ಅರವಿಂದ್ ಅವರಿದ್ದ ರಜಾಕಾಲದ ಏಕಸದಸ್ಯ ನ್ಯಾಯಪೀಠ ಈ ಮಧ್ಯಂತರ ಆದೇಶ ಮಾಡಿತು. ಜತೆಗೆ, ಪ್ರತಿವಾದಿಗಳಾದ ಮಾಸ್ತಿ ಠಾಣೆ ಪೊಲೀಸರು ಹಾಗೂ ಪ್ರಕರಣದ‌ ದೂರುದಾರ ಎಂ.ವಿ. ನಾಗರಾಜ್‌ಗೆ ನೋಟಿಸ್ ಜಾರಿಗೊಳಿಸಿ, ವಿಚಾರಣೆ ಮುಂದೂಡಿತು.

ಪ್ರಕರಣವೇನು?:

ದಲಿತ ಮುಖಂಡ ಎಂ.ವಿ. ನಾಗರಾಜ್ ಅವರು ಮೇ 15ರಂದು ಮಾಸ್ತಿ ಪೊಲೀಸ್ ಠಾಣೆಗೆ ದೂರು ನೀಡಿ, ಬೆಳಗ್ಗೆ 8 ಗಂಟೆಗೆ ವಾಕಿಂಗ್ ಮಾಡುತ್ತಿದ್ದೆ. ಅಲ್ಲೇ ಸಮೀಪದಲ್ಲಿದ್ದ ಖಾನ್ ಎಂಬವರ ಮಾಂಸದ ಅಂಗಡಿಗೆ ಗುಂಪುಕಟ್ಟಿಕೊಂಡು ಬಂದ ಪುನೀತ್, ಗೋಪಿಗೌಡ ಮತ್ತಿತರರು ಖಾನ್‌ಗೆ ಬೈದು ತೊಂದರೆ ಕೊಡುತ್ತಿದ್ದರು. ಅಲ್ಲಿಗೆ ಹೋಗಿ ಪ್ರಶ್ನಿಸಿದಾಗ, ನೀನು ಯಾರು ಎಂದು ನನಗೆ ಪುನೀತ್ ಕೇಳಿದರು. ಅದಕ್ಕೆ ನಾನು ನಾಗರಾಜ್, ದಲಿತ ಸಂಘಟನೆಯ ಮುಖಂಡ ಎಂದು ಹೇಳಿದೆ. ಆಗ ಪುನೀತ್, ಗೋಪಿ ಗೌಡ ನನ್ನ ಜಾತಿಯ ಹೆಸರು ತೆಗೆದು ಅವಾಚ್ಯ ಶಬ್ದಗಳನ್ನು ಬಳಸಿ ನಿಂದನೆ ಮಾಡಿದ್ದಲ್ಲದೆ, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದರು ಎಂದು ದೂರಿನಲ್ಲಿ ಆರೋಪಿಸಿದ್ದರು.ದೂರು ಆಧರಿಸಿ ಪೊಲೀಸರು ಹಲ್ಲೆ, ಅಕ್ರಮ ಕೂಟ, ಗಲಭೆ, ಜನರ ಧಾರ್ಮಿಕ ಭಾವನೆಗಳಿಗೆ ಅಪಮಾನ, ಜೀವ ಬೆದರಿಕೆ, ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಉದ್ದೇಶದಿಂದ ಉದ್ದೇಶಪೂರ್ವಕವಾಗಿ ಅವಮಾನ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು. ಕೋಲಾರ ಜಿಲ್ಲೆಯ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.

- Advertisement -

Related news

error: Content is protected !!