



ಶಿವಮೊಗ್ಗ: ಭದ್ರಾವತಿಯ ಬಿಜೆಪಿ ಯುವ ಮೋರ್ಚಾ ಮುಖಂಡ ಹಾಗೂ ವಕೀಲನೋರ್ವ ಮಹಿಳೆಯೊಬ್ಬರಿಗೆ ಅತ್ಯಾಚಾರ ಮತ್ತು ಬ್ಲ್ಯಾಕ್‍ಮೇಲ್ ಮಾಡಿರುವ ಘಟನೆ ನಡೆದಿದೆ.
ವಕೀಲ ಭರತ್ ಬಿ.ಎಸ್ ವಿರುದ್ಧ ಈ ಆರೋಪ ಕೇಳಿಬಂದಿದ್ದು, ಆರೋಪಿ 23 ವರ್ಷದ ಮಹಿಳೆಯ ಬಳಿ ಪತಿಯ ಸ್ನೇಹಿತನೆಂದು ಪರಿಚಯಿಸಿಕೊಂಡು, ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯ ಮಾಡಿಕೊಂಡಿದ್ದ. ಅಲ್ಲದೇ ದಿನಸಿ ಅಂಗಡಿಗೆ ಪದೇ ಪದೇ ಬರುತ್ತಿದ್ದ. ಅಲ್ಲಿಯೂ ಮೈ, ಕೈ ಮುಟ್ಟಿ ಮಹಿಳೆಗೆ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಲಾಗಿದೆ.
ಏ.11 ರಂದು ಸ್ನೇಹಿತ ಭರತ್ ಮನೆಗೆ ಬರುತ್ತಾನೆ ಹಣ ನೀಡು ಎಂದು ಸಂತ್ರಸ್ತೆಯ ಪತಿ ಹೇಳಿದ್ದ. ಪತಿ ಸೂಚನೆಯಂತೆ ಹಣ ನೀಡಲು ಮುಂದಾದಾಗ, ಒಂಟಿಯಾಗಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದನು. ಯಾರಿಗಾದ್ರೂ ಹೇಳಿದ್ರೆ ಮಾನಹಾನಿ ಮಾಡುವುದಾಗಿ ಹೇಳಿ ಪ್ರಾಣ ಬೆದರಿಕೆ ಹಾಕಿದ್ದ. ಬಳಿಕ ಹಣದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದನು. ಏ.25 ರಂದು ಮತ್ತೆ ಅಂಗಡಿಗೆ ಬಂದು ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಎಂದು ತಿಳಿದುಬಂದಿದೆ.
ಮಹಿಳೆಯ ಪತಿ ಮೊಬೈಲ್ ನೋಡುವಾಗ ಇನ್‍ಸ್ಟಾಗ್ರಾಮ್ ಬ್ಲಾಕ್ ಆಗಿದ್ದನ್ನು ನೋಡಿ, ಪ್ರಶ್ನಿಸಿದಾಗ ಕಣ್ಣೀರು ಹಾಕುತ್ತಾ ಮಹಿಳೆ ಸತ್ಯ ಬಿಚ್ಚಿಟ್ಟಿದ್ದಳು. ಪತ್ನಿಯ ಹೆಸರಿನಲ್ಲಿ ವಾಟ್ಸಾಪ್ ಚಾಟ್ ಮಾಡಿ ಆರೋಪಿಯ ಅಸಲಿ ಬುದ್ಧಿಯನ್ನು ಅವರು ಪತ್ತೆ ಮಾಡಿದ್ದರು. ಅತ್ಯಾಚಾರ ಎಸಗಿದ ಆರೋಪಿ ವಿರುದ್ಧ ದಂಪತಿ ಭದ್ರಾವತಿಯ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








