




ಹೊಸದಿಲ್ಲಿ: ವೈದ್ಯಕೀಯ ಪದವಿ (ಎಂಬಿಬಿಎಸ್) ಪೂರ್ಣಗೊಳಿಸಲು ಈ ಹಿಂದೆ ಇದ್ದ ಗರಿಷ್ಠ ಒಂಬತ್ತು ವರ್ಷಗಳ ಮಿತಿಯನ್ನು ಒಂದು ವರ್ಷ ವಿಸ್ತರಿಸಿ 10 ವರ್ಷಕ್ಕೇರಿಸುವ ಪ್ರಸ್ತಾವವನ್ನು ರಾಷ್ಟ್ರೀಯ ವೈದ್ಯಕೀಯ ಮಂಡಳಿ (ಎನ್ಎಂಸಿ) ಮುಂದಿಟ್ಟಿದೆ. ಇದರಿಂದಾಗಿ ಪದವಿಗೆ ಸೇರ್ಪಡೆಯಾಗಿ ಪೂರ್ಣಗೊಳಿಸಲು ವಿದ್ಯಾರ್ಥಿಗಳಿಗೆ ಒಂದು ವರ್ಷ ಹೆಚ್ಚುವರಿ ಕಾಲಾವಕಾಶ ಸಿಗುವ ಸಾಧ್ಯತೆ ಇದೆ.

ಪದವಿ ವೈದ್ಯಕೀಯ ಶಿಕ್ಷಣ ನಿಬಂಧನೆ-2023ಕ್ಕೆ ತಿದ್ದುಪಡಿ ತರುವ ಕರಡನ್ನು ಎನ್ಎಂಸಿ ಸಿದ್ಧಪಡಿಸಿದ್ದು, ಕಡ್ಡಾಯ ವೈದ್ಯಕೀಯ ಇಂಟರ್ನ್ಶಿಪ್ ಸೇರಿದಂತೆ ಎಂಬಿಬಿಎಸ್ ಪದವಿ ಸೇರಿ 10 ವರ್ಷದ ಬಳಿಕ ಅದನ್ನು ಮುಂದುವರಿಸಲು ಯಾವುದೇ ಅವಕಾಶ ಇಲ್ಲ ಎಂದು ಹೇಳಿದೆ. ಹಾಲಿ ಇರುವ ನಿಬಂಧನೆಗಳ ಪ್ರಕಾರ, ಪ್ರವೇಶ ಪಡೆದ ದಿನದಿಂದ ಒಂಬತ್ತು ವರ್ಷಗಳ ಒಳಗಾಗಿ ಕೋರ್ಸ್ ಪೂರ್ಣಗೊಳಿಸಬೇಕಾಗುತ್ತದೆ.ಆದರೆ ಮೊದಲ ವರ್ಷದ ವೃತ್ತಿಪರ ಎಂಬಿಬಿಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ನಾಲ್ಕಕ್ಕಿಂತ ಹೆಚ್ಚು ಪ್ರಯತ್ನಗಳನ್ನು ಮಾಡಲು ಅವಕಾಶವಿಲ್ಲ. ಈ ನಿಯಮದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಶೈಕ್ಷಣಿಕ ಹಿನ್ನಡೆ, ಆರೋಗ್ಯ ಸಮಸ್ಯೆಗಳು, ಕುಟುಂಬದ ಪರಿಸ್ಥಿತಿಗಳು ಅಥವಾ ಇತರ ಕಾರಣಗಳಿಂದ ಕೋರ್ಸ್ ಪೂರ್ಣಗೊಳಿಸಲು ವಿಳಂಬವಾಗುವ ವಿದ್ಯಾರ್ಥಿಗಳಿಗೆ ಈ ತಿದ್ದುಪಡಿ ನೆರವಾಗುವ ಸಾಧ್ಯತೆ ಇದೆ.
ಕರಡು ಅಧಿಸೂಚನೆಯನ್ನು ಗಜೆಟ್ ಆಫ್ ಇಂಡಿಯಾದಲ್ಲಿ ಪ್ರಕಟಿಸಲಾಗಿದ್ದು, ಅಭಿಪ್ರಾಯ ಹಾಗೂ ಸಲಹೆಗಳಿಗಾಗಿ ಸಾರ್ವಜನಿಕ ಡೊಮೈನ್ ಗಳಲ್ಲಿ ಇರಿಸಲಾಗಿದೆ. ವೈದ್ಯಕೀಯ ಕಾಲೇಜುಗಳು, ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಮತ್ತು ಇತರ ಹಕ್ಕುದಾರರಿಂದ ಎನ್ಎಂಸಿ ಅಭಿಪ್ರಾಯಗಳನ್ನು ಆಹ್ವಾನಿಸಿದೆ. 30 ದಿನಗಳ ಒಳಗಾಗಿ ಸಲ್ಲಿಸುವ ಆಕ್ಷೇಪಣೆ- ಸಲಹೆಗಳನ್ನು ತಿದ್ದುಪಡಿ ಅಂತಿಮಗೊಳಿಸುವ ಸಂದರ್ಭದಲ್ಲಿ ಪರಿಗಣಿಸಲಾಗುವುದು ಎಂದು ಎನ್ಎಂಸಿ ಸ್ಪಷ್ಟಪಡಿಸಿದೆ.








