




ಓಸ್ಕೊ: ನಾರ್ವೆ ಚೆಸ್-2026 ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿರುವ ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್. ಪ್ರಜ್ಞಾನಂದ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಚೆನ್ನೈ ಮೂಲದ 20 ವರ್ಷದ ಆರ್. ಪ್ರಜ್ಞಾನಂದ ಜರ್ಮನಿಯ ವಿನ್ಸೆಂಟ್ ಕೀಮರ್ ವಿರುದ್ಧ ಅಂತಿಮ ಸುತ್ತಿನಲ್ಲಿ ಜಯ ದಾಖಲಿಸಿದ್ದಾರೆ. ಈ ಮೂಲಕ ಪ್ರತಿಷ್ಠಿತ ʻನಾರ್ವೆ ಚೆಸ್ʼ ಪ್ರಶಸ್ತಿ ಮುಡಿಗೇರಿಸಿಕೊಂಡ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ದಿನದ ಆರಂಭದಲ್ಲಿ 15 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದ ಅವರು, ಬಳಿಕ ಉತ್ತಮ ಪ್ರದರ್ಶನ ನೀಡಿ ಒಟ್ಟು 18 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರಿದರು. ಭಾರತದ ಚೆಸ್ ದಂತಕಥೆ ವಿಶ್ವನಾಥನ್ ಆನಂದ್ ಮತ್ತು ವಿಶ್ವ ಚೆಸ್ ಹಾಲಿ ಚಾಂಪಿಯನ್ ಡಿ.ಗುಕೇಶ್ ಅವರನ್ನ ಹಿಂದಿಕ್ಕಿ ಪ್ರಜ್ಞಾನಂದ ಈ ಸಾಧನೆ ಮಾಡಿದ್ದಾರೆ.
ಟೂರ್ನಿಯ ಆರಂಭದಲ್ಲಿ ಪ್ರಜ್ಞಾನಂದ ಅವರು 6 ಇತರೆ ಪ್ರಮುಖ ಆಟಗಾರರ ಎದುರು ನಿಧಾನಗತಿಯಲ್ಲಿ ಮುನ್ನಡೆ ಪಡೆದಿದ್ದರು. ಆದರೆ, ದ್ವಿತೀಯಾರ್ಧದಲ್ಲಿ ಉತ್ತಮ ಪ್ರದರ್ಶನ ನೀಡಿ ಎಲ್ಲರ ಗಮನ ಸೆಳೆದರು. ನಾರ್ವೆ ಚೆಸ್‌ನಲ್ಲಿ 7 ಬಾರಿ ಚಾಂಪಿಯನ್ ಆಗಿರುವ ಮತ್ತು ವಿಶ್ವದ ನಂ.1 ಚೆಸ್ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್ ಅವರನ್ನ 2 ಬಾರಿ ಸೋಲಿಸುವ ಮೂಲಕ ಪ್ರಜ್ಞಾನಂದ ಮೇಲುಗೈ ಸಾಧಿಸಿದ್ದರು.
ಅಂತಿಮ ಸುತ್ತಿನಲ್ಲಿ ಗುಕೇಶ್ ಪ್ರಶಸ್ತಿ ಗೆಲ್ಲುವ ರೇಸ್‌ನಿಂದ ಹೊರಬಿದ್ದಾಗ ಪ್ರಜ್ಞಾನಂದ ಅವರು ಚಾಂಪಿಯನ್ ಆಗಿ ಹೊರಹೊಮ್ಮಿ ಭಾರತದ ಕೀರ್ತಿಪತಾಕೆ ಹಾರಿಸಿದ್ದಾರೆ.








