ನೆಹರೂ ದಾಖಲೆ ಮುರಿದ ಪ್ರಧಾನಿ ನರೇಂದ್ರ ಮೋದಿ!





ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು(ಜೂ.10) ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲೇ ದೀರ್ಘಕಾಲ ನಿರಂತರ ಅಧಿಕಾರ ನಡೆಸಿದ ಪ್ರಧಾನಿ ಎಂಬ ಹೊಸ ದಾಖಲೆ ಬರೆದಿದ್ದಾರೆ. ಈ ಮೂಲಕ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರ 4,398 ದಿನಗಳ ದಾಖಲೆಯನ್ನು ಮುರಿದು 4,399 ದಿನಗಳ ನಿರಂತರ ಸೇವೆಯ ಮೈಲುಗಲ್ಲು ತಲುಪಿದ್ದಾರೆ.
2014ರ ಮೇ 26ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮೋದಿ ಅವರು ಇಂದಿಗೆ 4,399 ದಿನಗಳ ನಿರಂತರ ಅಧಿಕಾರಾವಧಿಯನ್ನು ಪೂರೈಸಿದ್ದಾರೆ. ಇದರೊಂದಿಗೆ ಅವರು ಭಾರತದ ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ನೆಹರೂ ಅವರು 1952ರ ಮೇ 13ರಂದು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿ, 1964ರ ಮೇ 27ರವರೆಗೆ ಒಟ್ಟು 4,398 ದಿನಗಳ ಕಾಲ ನಿರಂತರವಾಗಿ ಸೇವೆ ಸಲ್ಲಿಸಿದ್ದರು. ಈ ದಾಖಲೆಯು ಕಳೆದ 64 ವರ್ಷಗಳಿಂದಲೂ ಅಚ್ಚಳಿಯದೇ ಉಳಿದಿತ್ತು.
ಇದಕ್ಕೂ ಮುನ್ನ ಮೋದಿ ಅವರು 2025ರ ಜುಲೈ 25ರಂದು ಮತ್ತೊಂದು ಮೈಲುಗಲ್ಲು ದಾಟಿದ್ದರು. ಆ ದಿನ ಅವರು 4,077 ದಿನಗಳೊಂದಿಗೆ ಮೂರನೇ ಅತ್ಯಂತ ದೀರ್ಘಕಾಲ ಸೇವೆ ಸಲ್ಲಿಸಿದ ಪ್ರಧಾನಿ ಇಂದಿರಾ ಗಾಂಧಿ ಅವರ ದಾಖಲೆಯನ್ನು ಹಿಂದಿಕ್ಕಿದ್ದರು. ಇಂದಿರಾ ಗಾಂಧಿ ಅವರು 1966ರ ಜನವರಿ 24ರಿಂದ 1977ರ ಮಾರ್ಚ್ 24ರವರೆಗೆ ಸುಮಾರು 11 ವರ್ಷ 2 ತಿಂಗಳ ಕಾಲ(4,077 ದಿನ) ನಿರಂತರ ಅಧಿಕಾರ ನಡೆಸಿದ್ದರು.
ಇನ್ನೂ ಇಂದು ಮೋದಿ ನೇತೃತ್ವದ ಸರ್ಕಾರಕ್ಕೆ 12 ವರ್ಷ ತುಂಬಿದ ಹಿನ್ನೆಲೆ ಬಿಜೆಪಿ ದೇಶಾದ್ಯಂತ ಸಹೋದರತ್ವ ಕಾರ್ಯಕ್ರಮ ಹಮ್ಮಿಕೊಂಡಿದೆ. ಜೂ.5ರಿಂದ 21ರವರೆಗೂ ಕೇಂದ್ರ ಸರ್ಕಾರದ ಯೋಜನೆಗಳು, ಸಾಧನೆಗಳ ಬಗ್ಗೆ ಜಾಗೃತಿ ಮೂಡಿಸಲು ಮುಂದಾಗಿದ್ದು, ಎಲ್ಲಾ ರಾಜ್ಯಗಳು ಹಾಗೂ ಜಿಲ್ಲೆ, ತಾಲೂಕುಗಳಲ್ಲೂ ಸುದ್ದಿಗೋಷ್ಠಿ ನಡೆಸಲು ಕೇಂದ್ರ ಸಚಿವರು, ಬಿಜೆಪಿ ಆಡಳಿತದ ರಾಜ್ಯದ ಸಿಎಂಗಳಿಗೆ ಸೂಚಿಸಲಾಗಿದೆ ಎಂದು ವರದಿ ಮೂಲಕ ತಿಳಿದುಬಂದಿದೆ.







