




ಕಾಬೂಲ್: ಅಫ್ಘಾನಿಸ್ತಾನದ ಗಡಿಯಲ್ಲಿ ಪಾಕಿಸ್ತಾನ ಸೇನೆ ಮತ್ತೆ ಬಾಂಬ್ ದಾಳಿ ನಡೆಸಿದೆ ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಈ ಭೀಕರ ದಾಳಿಯಲ್ಲಿ ಕನಿಷ್ಠ 13 ಜನ ಸಾವನ್ನಪ್ಪಿದ್ದು, 14 ಜನ ತೀವ್ರ ಗಾಯಗೊಂಡಿದ್ದಾರೆ. ಮೃತಪಟ್ಟವರಲ್ಲಿ ಹೆಚ್ಚಿನವರು ಮಕ್ಕಳು ಎಂದು ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಗಂಭೀರ ಆರೋಪ ಮಾಡಿದೆ.
ತಾಲಿಬಾನ್ ಸರ್ಕಾರದ ವಕ್ತಾರ ಜಬೀಹುಲ್ಲಾ ಮುಜಾಹಿದ್ ಈ ಬಗ್ಗೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು, “ಪಾಕಿಸ್ತಾನ ಮತ್ತೊಮ್ಮೆ ಅಫ್ಘಾನಿಸ್ತಾನದ ವಾಯುಗಡಿಯನ್ನು ಉಲ್ಲಂಘಿಸಿ, ಕುನಾರ್, ಖೋಸ್ಟ್ ಮತ್ತು ಪಕ್ತಿಕಾ ಪ್ರಾಂತ್ಯಗಳಲ್ಲಿದ್ದ ಸಾಮಾನ್ಯ ನಾಗರಿಕರ ಮನೆಗಳ ಮೇಲೆ ಬಾಂಬ್ ದಾಳಿ ನಡೆಸಿದೆ. ಇದೊಂದು ಅಮಾನವೀಯ ಕೃತ್ಯ ಮತ್ತು ಆಕ್ರಮಣಕಾರಿ ನಡವಳಿಕೆಯಾಗಿದ್ದು, ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಈ ದಾಳಿಯಲ್ಲಿ 11 ಮಕ್ಕಳು, ಒಬ್ಬ ಮಹಿಳೆ ಹಾಗೂ ಓರ್ವ ವೃದ್ಧ ಸಾವನ್ನಪ್ಪಿದ್ದು, ಗಾಯಗೊಂಡ 14 ಜನರಲ್ಲಿ ಮಹಿಳೆಯರು ಮತ್ತು ಮಕ್ಕಳೂ ಸೇರಿದ್ದಾರೆ” ಎಂದು ಹೇಳಿದ್ದಾರೆ.
ತನ್ನ ದೇಶದೊಳಗೆ ಅಶಾಂತಿ ಸೃಷ್ಟಿಸುತ್ತಿರುವ ನಿಷೇಧಿತ ಸಂಘಟನೆಗಳಿಗೆ ಗಡಿ ಭಾಗದಲ್ಲಿ ಆಶ್ರಯ ಸಿಗುತ್ತಿರುವುದನ್ನು ತಡೆಯಲು ತಾನು ಕ್ರಮ ಕೈಗೊಳ್ಳುತ್ತಿರುವುದಾಗಿ ಪಾಕಿಸ್ತಾನ ಹೇಳಿದೆ. ತಾನು ಯಾವುದೇ ವಿದೇಶಿ ಸಂಘಟನೆಗಳಿಗೆ ತನ್ನ ಭೂಮಿಯನ್ನು ಬಳಸಿಕೊಳ್ಳಲು ಅವಕಾಶ ನೀಡುತ್ತಿಲ್ಲ ಮತ್ತು ಗಡಿಯಲ್ಲಿನ ನುಸುಳುವಿಕೆಯನ್ನು ತಡೆಯಲು ಬದ್ಧನಾಗಿರುವುದಾಗಿ ಅಫ್ಘಾನಿಸ್ತಾನ ಸ್ಪಷ್ಟನೆ ನೀಡಿದೆ ಎಂಬುದಾಗಿ ವರದಿ ಮೂಲಕ ತಿಳಿದುಬಂದಿದೆ.








