Thursday, June 11, 2026
spot_imgspot_img
spot_imgspot_img

ಬೆಳ್ತಂಗಡಿ: ಸರ್ಕಸ್ ತಂಡದೊಂದಿಗೆ ತೆರಳಿದ್ದ ಯುವಕ 26 ವರ್ಷಗಳ ನಂತರ ತಾಯಿಯ ಮಡಿಲಿಗೆ..!

- Advertisement -
- Advertisement -

ಬೆಳ್ತಂಗಡಿ : ಕಳೆದ 26 ವರ್ಷಗಳ ಹಿಂದೆ ಮನೆಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಪವಾಡವೆಂಬಂತೆ ಮನೆಗೆ ವಾಪಸ್ ಬಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅಶೋಕನಗರದಲ್ಲಿ ನಡೆದಿದೆ.

ಸತೀಶ್ ಎಂಬಾತ ತನ್ನ 19ನೇ ವಯಸ್ಸಿನಲ್ಲಿ(2000ನೇ ಇಸವಿ) ಧರ್ಮಸ್ಥಳಕ್ಕೆ ಬಂದಿದ್ದ ಸರ್ಕಸ್ ತಂಡದ ಜೊತೆಗೆ ಮಹಾರಾಷ್ಟ್ರಕ್ಕೆ ಹೋಗಿದ್ದರು. ಅಂದಿನಿಂದ 26 ವರ್ಷಗಳ ಕಾಲ ಮಹಾರಾಷ್ಟ್ರದಲ್ಲಿ ಕೆಲಸ ಮಾಡಿಕೊಂಡಿದ್ದ ಇವರು ತನ್ನ ಸ್ವಂತ ಊರು, ಭಾಷೆ ಹಾಗೂ ಹೆತ್ತವರನ್ನೇ ಸಂಪೂರ್ಣವಾಗಿ ಮರೆತುಹೋಗಿದ್ದರು. ಅಲ್ಲಿಯೇ ಇಸ್ಲಾಂಗೆ ಮತಾಂತರಗೊಂಡು ತನ್ನ ಹೆಸರನ್ನು ‘ಸಲೀಂ ಅಬ್ದುಲ್ ಅನ್ಸಾರಿ’ ಎಂದು ಬದಲಾಯಿಸಿಕೊಂಡಿದ್ದರು. ಅಲ್ಲದೆ, ತಾಲೀಮಾ ಎಂಬಾಕೆಯನ್ನು ವಿವಾಹವಾಗಿರುವ ಇವರಿಗೆ ಈಗ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳಿದ್ದಾರೆ.

ಬಹಳ ದಿನಗಳ ಬಳಿಕ ಮಹಾರಾಷ್ಟ್ರದ ತನ್ನ ಸ್ನೇಹಿತರೊಂದಿಗೆ ಧರ್ಮಸ್ಥಳದ ದೇವಸ್ಥಾನಕ್ಕೆ ಬಂದಾಗ ಇವರಿಗೆ ತನ್ನ ಬಾಲ್ಯದ ನೆನಪು ಮರುಕಳಿಸಿದ್ದು, ಈ ವೇಳೆ ಸರ್ಕಸ್ ನಡೆದಿದ್ದ ಜಾಗಕ್ಕೆ ಹೋದಾಗ ಇದೇ ತನ್ನ ಊರು ಎಂದು ಖಚಿತವಾಗಿದೆ.

ಸತೀಶ್‌ಗೆ ತನ್ನ ತಮ್ಮಂದಿರ ಹೆಸರು ನೆನಪಿದ್ದ ಕಾರಣ ಸುತ್ತಮುತ್ತಲಿನ ಅಂಗಡಿ ಹಾಗೂ ಜನರ ಬಳಿ ಮನೆಯ ವಿಳಾಸ ಕೇಳಿಕೊಂಡು ಅಂತಿಮವಾಗಿ ಕುಟುಂಬಸ್ಥರನ್ನು ಸೇರಿಕೊಂಡಿದ್ದಾರೆ. ಮನೆಯ ಬಾಗಿಲಿಗೆ ಬಂದು ನಿಂತ ಹಿರಿಯ ಮಗನನ್ನು ಕಂಡ ತಾಯಿಯ ಕಣ್ಣಲ್ಲಿ ಆನಂದಬಾಷ್ಪ ಹರಿದಿದೆ. ಮನೆಯವರೆಲ್ಲರೂ ಸೇರಿ ಮಗನನ್ನು ಅತ್ಯಂತ ಸಂತಸದಿಂದ ಬರಮಾಡಿಕೊಂಡಿದ್ದಾರೆ. ಸತೀಶ್‌ಗೆ ಕೇವಲ ಹಿಂದಿ ಮಾತ್ರ ಬರುತ್ತಿದ್ದು, ಇತ್ತ ತಾಯಿಗೆ ಹಿಂದಿ ಗೊತ್ತಿಲ್ಲದ ಕಾರಣ ಇಬ್ಬರ ನಡುವೆ ಭಾಷೆಯ ಸಮಸ್ಯೆ ಎದುರಾಗಿತ್ತು.

ಆದರೂ ಭಾಷೆಯ ಹಂಗಿಲ್ಲದೆ ತಾಯಿ ಮತ್ತು ಸಹೋದರರನ್ನು ಸತೀಶ್ ಗುರುತಿಸಿ ಅಪ್ಪಿಕೊಂಡಿದ್ದಾರೆ. ವರ್ಷಗಳ ಕಾಲ ಮಗನಿಗಾಗಿ ದೇವರಲ್ಲಿ ಹರಕೆ ಹೊತ್ತಿದ್ದ ತಾಯಿಯ ಆಶಯ ಕೊನೆಗೂ ಈಡೇರಿದ್ದು, ಕೆಲ ದಿನ ಕುಟುಂಬದೊಂದಿಗೆ ಕಳೆದ ಸತೀಶ್‌ ಸದ್ಯ ಮಹಾರಾಷ್ಟ್ರಕ್ಕೆ ಮರಳಿದ್ದಾರೆ ಎಂಬುದಾಗಿ ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!